* ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಹಳಿಗೆ ಮರಳಿದ ಭಾರತ* ವೆಸ್ಟ್ ಇಂಡೀಸ್ ವಿರುದ್ದ 155 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸಿದ ಮಿಥಾಲಿ ರಾಜ್ ಪಡೆ* ಭಾರತದ ಆಲ್ರೌಂಡ್‌ ಪ್ರದರ್ಶನಕ್ಕೆ ಶರಣಾದ ಕೆರಿಬಿಯನ್ನರು

ಹ್ಯಾಮಿಲ್ಟನ್‌(ಮಾ.12): ಬ್ಯಾಟಿಂಗ್‌ನಲ್ಲಿ ಸ್ಮೃತಿ ಮಂಧನಾ, ಹರ್ಮನ್‌ಪ್ರೀತ್ ಕೌರ್ ಆಕರ್ಷಕ ಶತಕ, ಇನ್ನು ಬೌಲಿಂಗ್‌ನಲ್ಲಿ ಸ್ನೆಹ್ ರಾಣಾ, ಮೆಘನಾ ಸಿಂಗ್ ಮಾರಕ ದಾಳಿ ಪರಿಣಾಮ, ಪರಿಣಾಮ ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಎದುರು 155 ರನ್‌ಗಳ ಅಂತರದ ಭರ್ಜರಿ ಜಯಸಾಧಿಸಿದೆ. 

ಇಲ್ಲಿನ ಸೆಡನ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 318 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಡಿಯೇಂದ್ರಾ ಡೋಟ್ಟಿನ್‌ ಹಾಗೂ ಹೇಲೈ ಮ್ಯಾಥ್ಯೂಸ್ ಶತಕದ ಜತೆಯಾಟವಾಡುವ ಮೂಲಕ ಕೆರಿಬಿಯನ್ ಪಡೆಗೆ ಉತ್ತಮ ಅಡಿಪಾಯವನ್ನೇ ಹಾಕಿಕೊಟ್ಟರು. ಚುರುಕಾಗಿ ರನ್‌ ಗಳಿಸಿದ ಈ ಜೋಡಿ ಕೇವಲ 12.2 ಓವರ್‌ಗಲ್ಲಿ 100 ರನ್‌ಗಳ ಜತೆಯಾಟ ನಿಭಾಯಿಸಿತು. ವಿಂಡೀಸ್‌ನ ಈ ಇಬ್ಬರು ಆರಂಭಿಕ ಬ್ಯಾಟರ್‌ಗಳು ಜೂಲನ್ ಗೋಸ್ವಾಮಿ, ಮೆಘನಾ ಸಿಂಗ್, ದೀಪ್ತಿ ಶರ್ಮಾ ಮೇಲೆ ಸವಾರಿ ಮಾಡಿದರು. ಆರಂಭಿಕ ಬ್ಯಾಟರ್ ಡಿಯೇಂದ್ರಾ ಡೋಟ್ಟಿನ್‌ 46 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಆಕರ್ಷಕ 62 ರನ್ ಚಚ್ಚಿದರು.

ದಿಢೀರ್ ಕುಸಿದ ಕೆರಬಿಯನ್ ಪಡೆ: ಒಂದು ಹಂತದಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ ಕೇವಲ 12 ಓವರ್‌ಗಳಲ್ಲೇ ಮೂರಂಕಿ ಮೊತ್ತ ತಲುಪಿದ ವೆಸ್ಟ್ ಇಂಡೀಸ್ ತಂಡವು ಅನಾಯಾಸವಾಗಿ ಭಾರತದ ಎದುರು ಜಯ ಸಾಧಿಸಬಹುದು ಎನ್ನುವಷ್ಟರ ಮಟ್ಟಿಗೆ ಲೀಲಾಜಾಲವಾಗಿ ರನ್ ಕಲೆಹಾಕಿತು. ಆದರೆ 13ನೇ ಓವರ್‌ನಲ್ಲಿ ದಾಳಿಗಿಳಿದ ಸ್ನೆಹ್ ರಾಣಾ, ಅಪಾಯಕಾರಿ ಬ್ಯಾಟರ್ ಡಿಯೇಂದ್ರಾ ಡೋಟ್ಟಿನ್‌ ಅವರ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ವೆಸ್ಟ್ ಇಂಡೀಸ್ ತಂಡವು ನಾಟಕೀಯ ಕುಸಿತವನ್ನು ಕಂಡಿತು. ವಿಂಡೀಸ್ ತಂಡವು ತನ್ನ ಖಾತೆಗೆ 100ರಿಂದ 157 ರನ್ ತಲುಪುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತು. 

ವೆಸ್ಟ್ ಇಂಡೀಸ್ ಪರ ಡಿಯೇಂದ್ರಾ ಡೋಟ್ಟಿನ್‌(62), ಹೇಲೈ ಮ್ಯಾಥ್ಯೂಸ್(43), ವಿಕೆಟ್ ಕೀಪರ್ ಬ್ಯಾಟರ್‌ ಶೆಮೈನೆ ಕ್ಯಾಮ್‌ಬೆಲ್ಲೆ(11) ಹಾಗೂ ಚೇದನ್ ನೇಷನ್(19) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಎರಂಡಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಭಾರತ ತಂಡದ ಪರ ಸ್ನೆಹ್ ರಾಣಾ 3, ಮೆಘನಾ ಸಿಂಗ್ 2 ವಿಕೆಟ್ ಪಡೆದರೆ, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್ ಹಾಗೂ ರಾಜೇಶ್ವರಿ ಗಾಯಕ್ವಾಡ್ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಯಾಶ್ತಿಕಾ ಭಾಟಿಯಾ ಹಾಗೂ ಸ್ಮೃತಿ ಮಂಧನಾ 49 ರನ್‌ಗಳ ಜತೆಯಾಟವಾಡಿತು. ಇದಾದ ಬಳಿಕ ಭಾರತ ತಂಡವು ಯಾಶ್ತಿಕಾ, ಮಿಥಾಲಿ ರಾಜ್ ಹಾಗೂ ದೀಪ್ತಿ ಶರ್ಮಾ ವಿಕೆಟ್ ಕಳೆದುಕೊಂಡಿತು.ಈ ವೇಳೆ ಟೀಂ ಇಂಡಿಯಾ 78 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಕೆಲಕಾಲ ಆತಂಕಕ್ಕೆ ಒಳಗಾಗಿತ್ತು.

ಆದರೆ ನಾಲ್ಕನೇ ವಿಕೆಟ್‌ಗೆ ಜತೆಯಾದ ಸ್ಮೃತಿ ಮಂಧನಾ ಹಾಗೂ ಹರ್ಮನ್‌ಪ್ರೀತ್ ಕೌರ್ 174 ಎಸೆತಗಳನ್ನು ಎದುರಿಸಿ 184 ರನ್‌ಗಳನ್ನು ಕಲೆಹಾಕಿತು. ಮಂಧನಾ 108 ಎಸೆತಗಳನ್ನು ಎದುರಿಸಿ ವೃತ್ತಿಜೀವನದ 5ನೇ ಶತಕ ಬಾರಿಸಿ ಸಂಭ್ರಮಿಸಿದರು. ಹರ್ಮನ್‌ಪ್ರೀತ್ ಕೌರ್ 107 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 109 ರನ್‌ ಬಾರಿಸಿ ಅಲಿಸಾ ಅಲಿನಾಗೆ ವಿಕೆಟ್ ಒಪ್ಪಿಸಿದರು.