Asianet Suvarna News Asianet Suvarna News

ICC Women's World Cup: ಬಾಂಗ್ಲಾ ಎದುರು ಭಾರತ ಭರ್ಜರಿ ಜಯಭೇರಿ, ಸೆಮೀಸ್ ಆಸೆ ಜೀವಂತ

* ಬಾಂಗ್ಲಾದೇಶ ಎದುರು ಭಾರತಕ್ಕೆ ಭರ್ಜರಿ ಜಯ

* ಕೇವಲ 119 ರನ್‌ಗಳಿಗೆ ಸರ್ವಪತನ ಕಂಡ ಬಾಂಗ್ಲಾದೇಶ

* ಸೆಮೀಸ್ ಕನಸು ಜೀವಂತವಾಗಿರಿಸಿಕೊಂಡ ಭಾರತ

ICC Womens World Cup Indian team thrash Bangladesh by 110 runs and semis hope keep alive kvn
Author
Bengaluru, First Published Mar 22, 2022, 1:17 PM IST

ಹ್ಯಾಮಿಲ್ಟನ್‌(ಮಾ.22): ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ಮಹಿಳಾ ತಂಡವು ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ICC Women's World Cup) ಬಾಂಗ್ಲಾದೇಶ ಎದುರು 110 ರನ್‌ಗಳ ಅಂತರದ ಭರ್ಜರಿ ಜಯಬೇರಿ ಬಾರಿಸಿದೆ. ಈ ಮೂಲಕ ಮಿಥಾಲಿ ರಾಜ್ (Mithali Raj) ನೇತೃತ್ವದ ಟೀಂ ಇಂಡಿಯಾ (Team India) ಟೂರ್ನಿಯಲ್ಲಿ ಮೂರನೇ ಜಯ ಸಾಧಿಸುವುದರೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಇಲ್ಲಿನ ಸೆಡನ್‌ಪಾರ್ಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 230 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡವು (Bangladesh Team) ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕನ್ನಡತಿ ರಾಜೇಶ್ವರಿ ಗಾಯಕ್ವಾಡ್‌ ಶಿಸ್ತುಬದ್ದ ದಾಳಿಗೆ ಬಾಂಗ್ಲಾದೇಶ ತಂಡವು ತಬ್ಬಿಬ್ಬಾಗಿ ಹೋಯಿತು. ಇನಿಂಗ್ಸ್‌ನ ಆರನೇ ಓವರ್‌ನ ಮೊದಲ ಎಸೆತದಲ್ಲೇ ರಾಜೇಶ್ವರಿ ಗಾಯಕ್ವಾಡ್ (Rajeshwari Gayakwad), ಬಾಂಗ್ಲಾದೇಶದ ಆರಂಭಿಕ ಬ್ಯಾಟರ್ ಶರ್ಮಿನ್ ಅಖ್ತರ್‌ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.

ಕೈಕೊಟ್ಟ ಮಧ್ಯಮ ಕ್ರಮಾಂಕ: ಸಾಕಷ್ಟು ಎಚ್ಚರಿಕೆಯ ಆಟ ಆರಂಭಿಸಿದ ಬಾಂಗ್ಲಾದೇಶ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಕೈಕೊಟ್ಟರು. ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳ ಪೈಕಿ ನಾಲ್ವರು ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಬಾಂಗ್ಲಾದೇಶ ತಂಡವು 35 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದದ್ದರು. ಇನ್ನು ಕೆಳ ಮಧ್ಯಮ ಕ್ರಮಾಂಕದಲ್ಲಿ ಲತಾ ಮೊಂಡಾಲ್ ಹಾಗೂ ಸಲ್ಮಾ ಖತುನ್ ಕೆಲಕಾಲ ದಿಟ್ಟ ಜತೆಯಾಟ ನಡೆಸುವ ಮೂಲಕ ಬಾಂಗ್ಲಾದೇಶ ತಂಡವನ್ನು ಮೂರಂಕಿ ಮೊತ್ತದ ಗಡಿ ದಾಟಲು ನೆರವಾದರು. ಲತಾ ಮೊಂಡಲ್ 24 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರೆ, 32 ರನ್‌ ಬಾರಿಸಿ ಸಲ್ಮಾಗೆ ಜೂಲನ್ ಗೋಸ್ವಾಮಿ ಪೆವಿಲಿಯನ್ ಹಾದಿ ತೋರಿಸಿದರು.ಇದಾದ ಬಳಿಕ ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ಬಾಂಗ್ಲಾದೇಶ ತಂಡವು ಅಂತಿಮವಾಗಿ 40.3 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 119 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಶಿಸ್ತಿನ ದಾಳಿ ನಡೆಸಿದ ಭಾರತೀಯ ಬೌಲರ್‌ಗಳು: ಮೊದಲು ಬ್ಯಾಟಿಂಗ್ ಮಾಡಿ ಕೇವಲ 229 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿದ್ದ ಭಾರತ ತಂಡಕ್ಕೆ ಬೌಲಿಂಗ್‌ನಲ್ಲಿ ಸ್ನೆಹ್ ರಾಣಾ, ಜೂಲನ್ ಗೋಸ್ವಾಮಿ, ಪೂನಂ ಯಾದವ್ ಶಿಸ್ತಿನ ದಾಳಿ ನಡೆಸುವ ಮೂಲಕ ಬಾಂಗ್ಲಾ ಬ್ಯಾಟರ್‌ಗಳನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಸ್ನೆಹ್ ರಾಣಾ 10 ಓವರ್‌ ಬೌಲಿಂಗ್ ಮಾಡಿ ಎರಡು ಮೇಡನ್ ಸಹಿತ ಕೇವಲ 30 ರನ್ ನೀಡಿ 4 ವಿಕೆಟ್ ಪಡೆದರೆ, ವೇಗಿಗಳಾದ ಪೂಜಾ ವಸ್ತ್ರಾಕರ್ ಹಾಗೂ ಜೂಲನ್ ಗೋಸ್ವಾಮಿ ತಲಾ 2 ವಿಕೆಟ್ ಪಡೆದರು. ಇನ್ನು ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ 10 ಓವರ್‌ನಲ್ಲಿ 4 ಮೇಡನ್ ಓವರ್ ಸಹಿತ ಕೇವಲ 15 ರನ್ ನೀಡಿ ಒಂದು ವಿಕೆಟ್ ಉರುಳಿಸಿದರು. ಲೆಗ್ ಸ್ಪಿನ್ನರ್ ಪೂನಂ ಯಾದವ್ ಕೂಡಾ ಒಂದು ವಿಕೆಟ್ ಪಡೆದರು.

ICC Women's World Cup: ಬಾಂಗ್ಲಾದೇಶಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದ ಭಾರತ

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಭಾರತ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್‌ಗೆ 74 ರನ್‌ಗಳ ಜತೆಯಾಟವಾಡಿದರು. ಆದರೆ ಸ್ಮೃತಿ ಮಂಧನಾ ವಿಕೆಟ್ ಪತನವಾಗುತ್ತಿದ್ದಂತೆಯೇ ಕೇವಲ 5 ಎಸೆತಗಳಲ್ಲಿ ಒಂದೂ ರನ್ ಕಲೆಹಾಕದೇ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 74 ರನ್‌ಗಳಿಗೆ ದಿಢೀರ್ ಎನ್ನುವಂತೆ ಮೂರು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಭಾರತ ತಂಡಕ್ಕೆ 4ನೇ ವಿಕೆಟ್‌ಗೆ ಹರ್ಮನ್‌ಪ್ರೀತ್ ಕೌರ್ ಹಾಗೂ ಯಾಶ್ತಿಕಾ ಭಾಟಿಯಾ ಜೋಡಿ 44 ರನ್‌ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. ಅದರಲ್ಲೂ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಯಾಶ್ತಿಕಾ ಭಾಟಿಯಾ 80 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 50 ರನ್ ಬಾರಿಸಿ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.

Follow Us:
Download App:
  • android
  • ios