* ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್‌ಗೆ ಸಾಧಾರಣ ಗುರಿ ನೀಡಿದ ಭಾರತ* ಕೇವಲ 134 ರನ್‌ಗಳಿಗೆ ಸರ್ವಪತನ ಕಂಡ ಮಿಥಾಲಿ ರಾಜ್ ಪಡೆ* ಮಧ್ಯಮ ಕ್ರಮಾಂಕದಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ
ಮೌಂಟ್ ಮಾಂಗನುಯಿ(ಮಾ.16): ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ(35), ರಿಚಾ ಘೋಷ್(33) ಸಮಯೋಚಿತ ಬ್ಯಾಟಿಂಗ್ ಹೊರತಾಗಿಯೂ ಮಧ್ಯ ಕ್ರಮಾಂಕದ ಬ್ಯಾಟರ್‌ಗಳ ನೀರಸ ಪ್ರದರ್ಶನದಿಂದಾಗಿ, ಇಂಗ್ಲೆಂಡ್ ಎದುರು ಮಿಥಾಲಿ ರಾಜ್ ನೇತೃತ್ವದ ಭಾರತ ತಂಡವು ಕೇವಲ 134 ರನ್ ಬಾರಿಸಿ ಸರ್ವಪತನ ಕಂಡಿದೆ. ಈ ಮೂಲಕ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ (ICC Women's World Cup) ಇಂಗ್ಲೆಂಡ್‌ಗೆ ಗೆಲ್ಲಲು ಸಾಧಾರಣ ಗುರಿ ನೀಡಿದೆ. ಇದು ಕಳೆದ 4 ವಿಶ್ವಕಪ್ ಇತಿಹಾಸದಲ್ಲಿ ಭಾರತ ಕಲೆಹಾಕಿದ ಕನಿಷ್ಠ ಸ್ಕೋರ್ ಇದಾಗಿದೆ.
ಇಲ್ಲಿನ ಬೇ ಓವಲ್ ಮೈದಾನದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕಿ ಹೀದರ್ ನೈಟ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಇಂಗ್ಲೆಂಡ್ ಬೌಲರ್‌ಗಳು ಯಶಸ್ವಿಯಾದರು. ಆರಂಭದಿಂದಲೇ ಇಂಗ್ಲೆಂಡ್ ಬೌಲರ್‌ಗಳು ಶಿಸ್ತುಬದ್ದ ಬೌಲಿಂಗ್ ದಾಳಿ ನಡೆಸುವಲ್ಲಿ ಯಶಸ್ವಿಯಾದರು. ಇನಿಂಗ್ಸ್‌ನ 4ನೇ ಓವರ್‌ನಲ್ಲೇ ಆರಂಭಿಕ ಬ್ಯಾಟರ್ ಯಾಶ್ತಿಕಾ ಭಾಟಿಯಾ(8) ಕ್ಲೀನ್ ಬೌಲ್ಟ್ ಆಗಿ ಪೆವಿಲಿಯನ್ ಸೇರಿದರು. ನಾಯಕಿ ಮಿಥಾಲಿ ರಾಜ್ (Mithali Raj) ಕಳಪೆ ಫಾರ್ಮ್ ಇಂಗ್ಲೆಂಡ್ ವಿರುದ್ದವೂ ಮುಂದುವರೆದಿದ್ದು, ಮಿಥಾಲಿ ಕೇವಲ ಒಂದು ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ದೀಪ್ತಿ ಶರ್ಮಾ (Deepti Sharma) ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು.
ಸ್ಮೃತಿ ಮಂಧನಾ-ಹರ್ಮನ್‌ಪ್ರೀತ್ ಆಸರೆ: ಒಂದು ಹಂತದಲ್ಲಿ 28 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ನಾಲ್ಕನೇ ವಿಕೆಟ್‌ಗೆ ಹರ್ಮನ್‌ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧನಾ 33 ರನ್‌ಗಳ ಜತೆಯಾಟವಾಡುವ ಮೂಲಕ ಕೊಂಚ ಆಸರೆಯಾದರು. ಕಳೆದ ಪಂದ್ಯದಲ್ಲಿ ಶತಕದ ಜತೆಯಾಟ ನಿಭಾಯಿಸಿದ್ದ ಈ ಜೋಡಿಯನ್ನು ಆದಷ್ಟು ಬೇಗ ಬೇರ್ಪಡಿಸುವಲ್ಲಿ ಚಾರ್ಲೆಟ್ ಡೀನ್ ಯಶಸ್ವಿಯಾದರು. ಹರ್ಮನ್‌ಪ್ರೀತ್ ಕೌರ್ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಸ್ಮೃತಿ ಮಂಧನಾ ಬ್ಯಾಟಿಂಗ್ 35 ರನ್‌ಗಳಿಗೆ ಸೀಮಿತವಾಯಿತು.
ICC Women's World Cup: ಭಾರತದೆದುರು ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ
ಕೈಕೊಟ್ಟ ಮಧ್ಯಮ ಕ್ರಮಾಂಕ: ಒಂದು ಹಂತದಲ್ಲಿ ಭಾರತ ತಂಡವು 16 ಓವರ್ ಅಂತ್ಯದ ವೇಳೆಗೆ ಕೇವಲ 3 ವಿಕೆಟ್ ಕಳೆದುಕೊಂಡು 60 ರನ್ ಬಾರಿಸಿತ್ತು. ಆದರೆ ಇದಾದ ಬಳಿಕ ಹರ್ಮನ್‌ಪ್ರೀತ್ ಕೌರ್ ವಿಕೆಟ್ ಪತನವಾಗುತ್ತಿದ್ದಂತೆಯೇ ಭಾರತ ತಂಡವು ನಾಟಕೀಯ ಕುಸಿತವನ್ನು ಕಂಡಿತು. ಭಾರತ ತನ್ನ ಖಾತೆಗೆ ಕೇವಲ 11 ರನ್ ಸೇರಿಸುವಷ್ಟರಲ್ಲಿ ಮಧ್ಯಮ ಕ್ರಮಾಂಕದ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಸ್ನೆಹ್ ರಾಣಾ ಶೂನ್ಯ ಸುತ್ತಿದರೆ, ಸ್ಮೃತಿ ಮಂಧನಾ ಹಾಗೂ ಹರ್ಮನ್‌ಪ್ರೀತ್ ಕೌರ್ ಕೂಡಾ ಬೇಗನೇ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಹಿನ್ನೆಡೆಯಾಯಿತು. ಇನ್ನು ಆಲ್ರೌಂಡರ್ ಪೂಜಾ ವಸ್ತ್ರಾಕರ್ ಸಿಕ್ಕ ಜೀವದಾನವನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲರಾದರು.
ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಹಾಗೂ ಜೂಲನ್ ಗೋಸ್ವಾಮಿ 8ನೇ ವಿಕೆಟ್‌ಗೆ 37 ರನ್‌ಗಳ ಜತೆಯಾಟವಾಡುವ ಮೂಲಕ ತಂಡವ ಮೊತ್ತವನ್ನು ನೂರರ ಗಡಿ ದಾಟಿಸಿದರು. ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ರಿಚಾ ಘೋಷ್ ಇಲ್ಲದ ರನ್ ಕದಿಯಲು ಯತ್ನಿಸಿ 33 ರನ್ ಗಳಿಸಿ ರನೌಟ್ ಆಗಿ ಪೆವಿಲಯನ್ ಸೇರಿದರು. ಇನ್ನು ಜೂಲನ್ ಗೋಸ್ವಾಮಿ 20 ರನ್‌ಗಳಿಸಿ ಉತ್ತಮ ಸಾಥ್ ನೀಡಿದರು. ಇಂಗ್ಲೆಂಡ್ ತಂಡದ ಚಾರ್ಲೆಟ್ಟೆ ಡೀನ್ 23 ರನ್ ನೀಡಿ 4 ವಿಕೆಟ್ ಪಡೆದರೆ, ಸೋರ್ಬಲೆ 2, ಎಕೆಲ್‌ಸ್ಟೋನ್ ಹಾಗೂ ಕೇಟ್ ಕ್ರಾಸ್ ತಲಾ ಒಂದೊಂದು ವಿಕೆಟ್ ಪಡೆದರು.
