"

ಮೆಲ್ಬೊರ್ನ್(ಮಾ.09): ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ಸುವರ್ಣವಕಾಶ ಭಾರತದಿಂದ ಕೈಜಾರಿಗೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ ವನಿತೆಯರು, ಆಸ್ಟ್ರೇಲಿಯಾಗೆ ಶರಣಾದರು. ಈ ಮೂಲಕ ಆಸೀಸ್ 5ನೇ ಹಾರಿಗೆ ಟಿ20 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ಮಹಿಳಾ ದಿನಾಚರಣೆಯಂದು ಭಾರತ ವನಿತೆಯರಿಗೆ ಪ್ರಶಸ್ತಿ ಗೆಲ್ಲದಿದ್ದರೂ ದಿಟ್ಟ ಹೋರಾಟ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. 

ಇದನ್ನೂ ಓದಿ: ಆಟದಲ್ಲಿ ಸೆಹ್ವಾಗ್, ನೋಟದಲ್ಲಿ ತೆಂಡುಲ್ಕರ್; ಶಫಾಲಿ ಆಟಕ್ಕೆ ಎದುರಾಳಿ ಪಂಚರ್!

ಪ್ರಶಸ್ತಿ ಸುತ್ತಿನ ಪಂದ್ಯದ ಆರಂಭಲ್ಲಿ ಟಾಸ್ ಕೂಡ ಭಾರತಕ್ಕೆ ಹಿನ್ನಡೆ ತಂದಿತು. ಮೊದಲು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅಲಿಸ್ಸಾ ಹೀಲೆ ಹಾಗೂ ಬೆತ್ ಮೂನಿ ಜೊತೆಯಾಟಕ್ಕೆ ಭಾರತ ವನಿತೆಯರು ಸುಸ್ತಾದರು. ಮೊದಲ ವಿಕೆಟ್‌ಗೆ ಈ ಜೋಡಿ 115 ರನ್ ಜೊತೆಯಾಟ ನೀಡಿತು.

ಹೀಲೆ 75 ರನ್ ಸಿಡಿಸಿದರು. ನಾಯಕಿ ಮೆಗ್ ಲ್ಯಾನಿಂಗ್ ಕೇವಲ 16 ರನ್ ಸಿಡಿಸಿ ಔಟಾದರು. ಮೂನಿ ಹೋರಾಟ ಮುಂದುವರಿಸಿದರೆ, ಆಶ್ಲೈಗ್ ಗಾರ್ಡನ್, ರಾಚೆಲ್ ಹೈಯೆನೆಸ್ ಅಬ್ಬರಿಸಲಿಲ್ಲ. ಮೂನಿ ಅಜೇಯ 78 ರನ್ ಸಿಡಿಸಿದರು. ಈ ಮೂಲಕ 4 ವಿಕೆಟ್ ನಷ್ಟಕ್ಕೆ 184 ರನ್ ಸಿಡಿಸಿತು.

ಬೃಹತ್ ಗುರಿ ಬೆನ್ನಟ್ಟುವ ವಿಶ್ವಾಸ ಭಾರತ ವನಿತೆಯರಲ್ಲಿತ್ತು.  ಕಾರಣ ಭಾರತಕ್ಕೆ ಶಫಾಲಿ ವರ್ಮಾ ಭರವಸೆಯಾಗಿದ್ದರು. ಆದರೆ ಶಫಾಲಿ ಕೇವಲ 2 ರನ್ ಸಿಡಿಸಿ ಪೆವಿಲಿಯನ್ ಸೇರುತ್ತಿದ್ದಂತೆ ಭಾರತ ತಂಡ ಒತ್ತಡಕ್ಕೆ ಸಿಲುಕಿತು. ಸ್ಮತಿ ಮಂದನಾ, ತಾನಿಯಾ ಭಾಟಿಯಾ, ಜೇಮಿ ರೋಡ್ರಿಗಸ್ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಯಾವ ರೀತಿಯಲ್ಲೂ ನೆರವಾಗಲಿಲ್ಲ.

ದೀಪ್ತಿ ಶರ್ಮಾ 33 ರನ್ ಸಿಡಿಸಿ ಕೊಂಚ ಹೋರಾಟ ನೀಡಿದರು. ಇತ್ತ ಕನ್ನಡತಿ ವೇದಾ ಕೃಷ್ಣಮೂರ್ತಿ 19 ರನ್ ಸಿಡಿಸಿ ಔಟಾದರು. ರಿಚಾ ಘೋಷ್ 18 ರನ್ ಕಾಣಿಕೆ ನೀಡಿದರು. ಶಿಖಾ ಪಾಂಡೆ ಹಾಗೂ ರಾಧಾ ಯಾದವ್ 1 ರನ್ ಸಿಡಿಸಿ ನಿರ್ಗಮಿಸಿದರು.  ಪೂನಂ ಯಾದವ್ ವಿಕೆಟ್ ಪತನದೊಂದಿಗೆ ಭಾರತ 19.1 ಓವರ್‌ಗಳಲ್ಲಿ 99ರನ್ ಸಿಡಿಸಿ ಆಲೌಟ್ ಆಯಿತು. ಆಸ್ಟ್ರೇಲಿಯಾ 85 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. 

ಟಿ20 ಟ್ರೋಫಿ ಗೆಲ್ಲುವ ಭಾರತದ ಕನಸು ನುಚ್ಚುನೂರಾಯಿತು. ಇತ್ತ ಆಸ್ಟ್ರೇಲಿಯಾ 5ನೇ ಬಾರಿ ಟ್ರೋಫಿ ಗೆದ್ದು ಸಂಭ್ರಮಿಸಿತು. 

ಮಾರ್ಚ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ