* ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿ* ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬೌಲಿಂಗ್ ಆಯ್ಕೆ* ಉಭಯ ತಂಡಗಳಲ್ಲೂ ಒಂದು ಮಹತ್ವದ ಬದಲಾವಣೆ 

ಆಕ್ಲೆಂಡ್‌(ಮಾ.19): ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Women's World Cup) ಟೂರ್ನಿಯಲ್ಲಿಂದು ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕಿ ಮೆಕ್‌ ಲ್ಯಾನಿಂಗ್ ಮೊದಲು ಬೌಲಿಂಗ್ ಮಾಡುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಭಾರತ ತಂಡದಲ್ಲಿ ಒಂದು ಮಹತ್ವದ ಬದಲಾವಣೆಯನ್ನು ಮಾಡಲಾಗಿದ್ದು, ದೀಪ್ತಿ ಶರ್ಮಾ ಬದಲಿಗೆ ಶಫಾಲಿ ವರ್ಮಾ (Shafali Verma) ತಂಡ ಕೂಡಿಕೊಂಡಿದ್ದಾರೆ.

ಉಭಯ ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ಇಲ್ಲಿನ ಈಡನ್ ಪಾರ್ಕ್ ಮೈದಾನ ಆತಿಥ್ಯವನ್ನು ವಹಿಸಿದೆ, ಕಳೆದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಆಲ್ರೌಂಡರ್ ದೀಪ್ತಿ ಶರ್ಮಾಗೆ (Deepti Sharma) ವಿಶ್ರಾಂತಿಯನ್ನು ನೀಡಲಾಗಿದ್ದು, ಸ್ಪೋಟಕ ಬ್ಯಾಟರ್ ಶಫಾಲಿ ವರ್ಮಾಗೆ ಆಡುವ ಹನ್ನೊಂದರ ಬಳಗದಲ್ಲಿ ಮಣೆಹಾಕಲಾಗಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಮಿಥಾಲಿ ರಾಜ್ ನೇತೃತ್ವದ ಟೀಂ ಇಂಡಿಯಾ ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಮೂಲಕ 4 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿತ್ತು. ಇನ್ನು ಆಸ್ಟ್ರೇಲಿಯಾ ತಂಡದಲ್ಲೂ ಸಹಾ ಒಂದು ಬದಲಾವಣೆಯನ್ನು ಮಾಡಲಾಗಿದ್ದು, ಆನಬೆಲ್‌ ಸೌದರ್‌ಲೆಂಡ್‌ ಬದಲಿಗೆ ಡಾರ್ಸಿ ಬ್ರೌನ್ ತಂಡ ಕೂಡಿಕೊಂಡಿದ್ದಾರೆ.

ಬಲಿಷ್ಠ ಆಸ್ಟ್ರೇಲಿಯಾ ತಂಡವು ಆಡಿದ ಮೊದಲ 4 ಪಂದ್ಯಗಳಲ್ಲೂ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ 8 ಅಂಕಗಳ ಸಹಿತ ಅಗ್ರಸ್ಥಾನದಲ್ಲಿವೆ. ಇನ್ನೊಂದೆಡೆ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡವು ಆಡಿದ 4 ಪಂದ್ಯಗಳ ಪೈಕಿ 2 ಗೆಲುವು ಹಾಗೂ 2 ಸೋಲುಗಳೊಂದಿಗೆ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದೆ. ಟೂರ್ನಿಯಲ್ಲಿ ಅಜೇಯ ನಾಗಾಲೋಟ ಮುಂದುವರೆಸಿರುವ ಆಸ್ಟ್ರೇಲಿಯಾ ತಂಡಕ್ಕೆ ಭಾರತ ಮಹಿಳಾ ತಂಡವು ಸೋಲಿನ ಶಾಕ್ ನೀಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Scroll to load tweet…

ಭಾರತ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಮಿಥಾಲಿ ರಾಜ್(Mithali Raj), ಹರ್ಮನ್‌ಪ್ರೀತ್ ಕೌರ್ ಜವಾಬ್ದಾರಿಯುತ ಪ್ರದರ್ಶನ ತೋರಿದರೆ, ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ದ ದೊಡ್ಡ ಮೊತ್ತ ಕಲೆಹಾಕಬಹುದಾಗಿದೆ. ಭಾರತೀಯ ಬೌಲರ್‌ಗಳು ಕೂಡಾ ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ. ಇಂಗ್ಲೆಂಡ್‌ ವಿರುದ್ದದ ಅಲ್ಪ ಮೊತ್ತವನ್ನು ಕಾಪಾಡಿಕೊಳ್ಳುವಲ್ಲಿ ಭಾರತದ ಹೋರಾಟ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿತ್ತು. 

ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡಗಳು ಇಂದು 50ನೇ ಏಕದಿನ ಪಂದ್ಯವನ್ನಾಡುತ್ತಿವೆ. ಇನ್ನು ಈ ಪಂದ್ಯವು ಭಾರತ ಮಹಿಳಾ ತಂಡದ ಅನುಭವಿ ವೇಗಿ ಜೂಲನ್ ಗೋಸ್ವಾಮಿ ಆಡುತ್ತಿರುವ 200ನೇ ಏಕದಿನ ಪಂದ್ಯವಾಗಿದೆ. ಈ ಮೂಲಕ 200ನೇ ಏಕದಿನ ಪಂದ್ಯವನ್ನಾಡುತ್ತಿರುವ ಮೊದಲ ಮಹಿಳಾ ವೇಗದ ಬೌಲರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಇನ್ನು ಭಾರತ ಪರ ಇನ್ನೂರಕ್ಕೂ ಹೆಚ್ಚು ಏಕದಿನ ಪಂದ್ಯವನ್ನಾಡಿದ ಎರಡನೇ ಭಾರತೀಯ ಮಹಿಳಾ ಕ್ರಿಕೆಟರು ಎನ್ನುವ ಕೀರ್ತಿ ಕೂಡಾ ಜೂಲನ್ ಗೋಸ್ವಾಮಿ ಪಾಲಾಗಿದೆ. ಈ ಮೊದಲು ಮಿಥಾಲಿ ರಾಜ್ ಭಾರತ ಪರ ಇನ್ನೂರಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ್ದಾರೆ.

ತಂಡಗಳು ಹೀಗಿವೆ ನೋಡಿ

ಭಾರತ:
ಸ್ಮೃತಿ ಮಂಧನಾ, ಶಫಾಲಿ ವರ್ಮಾ, ಯಾಶ್ತಿಕಾ ಭಾಟಿಯಾ, ಮಿಥಾಲಿ ರಾಜ್(ನಾಯಕಿ), ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್(ವಿಕೆಟ್ ಕೀಪರ್), ಸ್ನೆಹ್ ರಾಣಾ, ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ಮೆಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್

ಆಸ್ಟ್ರೇಲಿಯಾ
ಅಲೀಸಾ ಹೀಲಿ(ವಿಕೆಟ್ ಕೀಪರ್), ರಿಚೆಲ್ ಹೇನ್ಸ್, ಮೆಗ್‌ ಲ್ಯಾನಿಂಗ್(ನಾಯಕಿ), ಎಲೀಸಾ ಪೆರ್ರಿ, ಬೆತ್ ಮೂನಿ, ತಾಹಿಲಾ ಮೆಗ್ರಾಥ್, ಗಾರ್ಡ್ನರ್, ಜೆಸ್ ಜಾನ್ಸನ್‌, ಅಲನಾ ಕಿಂಗ್, ಮೆಘನ್ ಸ್ಕಾಟ್, ಡಾರ್ಸಿ ಬ್ರೌನ್