Under 19 World Cup: ವೇಳಾಪಟ್ಟಿ ಪ್ರಕಟ, ಭಾರತಕ್ಕೆ 'ಬಿ' ಗುಂಪಿನಲ್ಲಿ ಸ್ಥಾನ

* ಅಂಡರ್ 19 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟ

* 'ಬಿ' ಗುಂಪಿನಲ್ಲಿ ಸ್ಥಾನ ಪಡೆದ ಭಾರತ ತಂಡ

* ಜನವರಿ 14ರಿಂದ ಫೆಬ್ರವರಿ 05ರ ವರೆಗೆ ನಡೆಯಲಿರುವ ಟೂರ್ನಿ

ICC Under 19 World Cup 2022 Schedule Announced Team India to Begin Campaign Against South Africa kvn

ನವದೆಹಲಿ(ನ.18): 14ನೇ ಆವೃತ್ತಿಯ ಪುರುಷರ ಅಂಡರ್‌-19 ವಿಶ್ವಕಪ್‌ ಟೂರ್ನಿ (Under 19 World Cup) 2022ರ ಜನವರಿ-ಫೆಬ್ರವರಿಯಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ (West Indies) ನಿಗದಿಯಾಗಿದೆ. ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ಕಿರಿಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಆತಿಥ್ಯವನ್ನು ವಹಿಸಲಿದೆ. 

ಬುಧವಾರ (ನವೆಂಬರ್ 17)ದಂದು ಐಸಿಸಿ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದ್ದು, ನಾಲ್ಕು ಬಾರಿಯ ಚಾಂಪಿಯನ್‌ ಭಾರತ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.  ‘ಬಿ’ ಗುಂಪಿನಲ್ಲಿ ಭಾರತ ಕ್ರಿಕೆಟ್ ತಂಡದ (Indian Cricket Team) ಜತೆಗೆ ದಕ್ಷಿಣ ಆಫ್ರಿಕಾ, ಐರ್ಲೆಂಡ್‌ ಹಾಗೂ ಉಗಾಂಡ ಜೊತೆ ಸ್ಥಾನ ಪಡೆದಿದೆ. ಜನವರಿ 15ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿದ್ದು, ಜನವರಿ 14ರಿಂದ ಫೆಬ್ರವರಿ 5ರವರೆಗೆ 48 ಪಂದ್ಯಗಳು ನಡೆಯಲಿವೆ. ಫೆಬ್ರವರಿ 01 ಹಾಗೂ 02ರಂದು ಎರಡು ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ. ಫೆಬ್ರವರಿ 05ರಂದು ಸರ್ ವಿವಿನ್ ರಿಚರ್ಡ್ಸ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯವು ಜರುಗಲಿದೆ. ಕಳೆದ ಆವೃತ್ತಿಯ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಬಾಂಗ್ಲಾದೇಶಕ್ಕೆ ಶರಣಾಗುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 

Syed Mushtaq Ali Trophy ಕ್ವಾರ್ಟರ್‌ ಫೈನಲ್‌: ಕರ್ನಾಟಕಕ್ಕಿಂದು ಬೆಂಗಾಲ್ ಸವಾಲು

ಹಾಲಿ ಅಂಡರ್ 19 ವಿಶ್ವಕಪ್ ಚಾಂಪಿಯನ್‌  ಬಾಂಗ್ಲಾದೇಶ, ಇಂಗ್ಲೆಂಡ್‌, ಕೆನಡಾ ಹಾಗೂ ಯುಎಇ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿವೆ. ‘ಸಿ’ ಗುಂಪಿನಲ್ಲಿ ಆಫ್ಘಾನಿಸ್ತಾನ, ಪಾಕಿಸ್ತಾನ, ಪಪುವಾ ನ್ಯೂಗಿನಿ, ಜಿಂಬಾಬ್ವೆ ಹಾಗೂ ‘ಡಿ’ ಗುಂಪಿನಲ್ಲಿ ಆಸ್ಪ್ರೇಲಿಯಾ, ಸ್ಕಾಟ್ಲೆಂಡ್‌, ಶ್ರೀಲಂಕಾ ಹಾಗೂ ವೆಸ್ಟ್‌ ಇಂಡೀಸ್‌ ಸ್ಥಾನ ಪಡೆದಿವೆ.

ನ್ಯೂಜಿಲೆಂಡ್‌ ಕೋವಿಡ್‌ ಪ್ರಯಾಣ ನಿರ್ಬಂಧದ ಕಾರಣದಿಂದ ಟೂರ್ನಿಯಿಂದ ಹಿಂದೆ ಸರಿದಿದ್ದು, ಕಿವೀಸ್ ಬದಲಿಗೆ ಸ್ಕಾಟ್ಲೆಂಡ್‌ ಅಂಡರ್ 19 ವಿಶ್ವಕಪ್ ಟೂರ್ನಿಗೆ ಸೇರ್ಪಡೆಯಾಗಿದೆ. ಜನವರಿ 14ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಅದೇ ದಿನ ಗಯಾನದಲ್ಲಿ ಶ್ರೀಲಂಕಾ ತಂಡವು ಸ್ಕಾಟ್ಲೆಂಡ್ ಸವಾಲನ್ನು ಸ್ವೀಕರಿಸಲಿದೆ.

ಅಂಡರ್ 19 ವಿಶ್ವಕಪ್‌ ಟೂರ್ನಿಯ ಪಂದ್ಯಗಳಿಗೆ ನಾಲ್ಕು ಕೆರಿಬಿಯನ್‌ ರಾಷ್ಟ್ರಗಳ 10 ನಗರಗಳು ಆತಿಥ್ಯ ವಹಿಸಲಿವೆ. ಆಂಟಿಗುವಾ ಮತ್ತು ಬಾರ್ಬುಡ, ಗಯಾನ, ಸೇಂಟ್ ಕಿಟ್ಸ್‌ ಅಂಡ್ ನೇವಿಸ್ ಮತ್ತು ಟ್ರಿನಿಡಾಡ್ ಅಂಡ್ ಟೊಬ್ಯಾಗೊದ 10 ನಗರಗಳಲ್ಲಿ ಕಿರಿಯರ ವಿಶ್ವಕಪ್ ಪಂದ್ಯಗಳು ಜರುಗಲಿವೆ. ಪ್ರತಿಗುಂಪಿನ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ನಾಕೌಟ್ ಹಂತಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಳ್ಳಲಿವೆ.

Team Indiaದಲ್ಲಿ ವಿರಾಟ್ ಕೊಹ್ಲಿ ಪಾತ್ರದ ಬಗ್ಗೆ ತುಟಿಬಿಚ್ಚಿದ ಕ್ಯಾಪ್ಟನ್ ರೋಹಿತ್ ಶರ್ಮಾ..!

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡವು ಒಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2016ರಲ್ಲಿ ನಡೆದ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು ಭಾರತ ತಂಡವು ಅತಿ ಹೆಚ್ಚು, ಅಂದರೆ ನಾಲ್ಕು ಬಾರಿ ಅಂಡರ್ 19 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನುಳಿದಂತೆ ಆಸ್ಟ್ರೇಲಿಯಾ ಮೂರು ಬಾರಿ, ಪಾಕಿಸ್ತಾನ ಎರಡು ಬಾರಿ ಹಾಗೂ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಒಮ್ಮೆ ಅಂಡರ್ 19 ವಿಶ್ವಕಪ್ ಟ್ರೋಫಿಯನ್ನು ಜಯಿಸಿವೆ. 

ಭಾರತದ ವೇಳಾಪಟ್ಟಿ

ದಿನಾಂಕ ಪಂದ್ಯ

ಜ.15 ಭಾರತ-ದ.ಆಫ್ರಿಕಾ

ಜ.19 ಭಾರತ-ಐರ್ಲೆಂಡ್‌

ಜ.22 ಭಾರತ-ಉಗಾಂಡ
 

Latest Videos
Follow Us:
Download App:
  • android
  • ios