* ಐಸಿಸಿ ಅಂಡರ್ 19 ವಿಶ್ವಕಪ್‌ ಗೆದ್ದ ಭಾರತೀಯ ಆಟಗಾರರಿಗೆ ಜಾಕ್‌ಪಾಟ್‌* ಚಾಂಪಿಯನ್ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗೆ ಬಿಸಿಸಿಐ ಭರ್ಜರಿ ಆಫರ್* ಅಂಡರ್ 19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಭಾರತಕ್ಕೆ ಜಯ

ಆ್ಯಂಟಿಗಾ(ಫೆ.07): ಆಟಗಾರರಿಗೆ ಕೋವಿಡ್‌ ಕಾಟ, ಸುಧೀರ್ಘ ಬಯೋಬಬಲ್‌ ವಾಸದ ಸವಾಲುಗಳ ನಡುವೆಯೂ ಭಾರತದ ಕಿರಿಯರ ತಂಡ 5ನೇ ಬಾರಿ ಅಂಡರ್‌-19 ವಿಶ್ವಕಪ್‌ (ICC U-19 World Cup) ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಫೈನಲ್‌ನಲ್ಲಿ ಇಂಗ್ಲೆಂಡನ್ನು ಮಣಿಸಿದ ತಂಡ ದೇಶಕ್ಕೆ ಮತ್ತೊಂದು ಪ್ರಶಸ್ತಿ ಗೆದ್ದುಕೊಟ್ಟಿದೆ. ದಾಖಲೆಯ ಐದನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡ ಯಂಗಿಸ್ತಾನಕ್ಕೆ ಬಿಸಿಸಿಐ (BCCI) ಬಂಪರ್ ಬಹುಮಾನ ಘೋಷಿಸಿದೆ.

ಕಳೆದ ಬಾರಿ ಬಾಂಗ್ಲಾದೇಶ ವಿರುದ್ಧ ಫೈನಲ್‌ನಲ್ಲಿ ಸೋತು ರನ್ನರ್‌-ಅಪ್‌ ಆಗಿದ್ದ ತಂಡ ಈ ಬಾರಿ ಆ ತಪ್ಪನ್ನು ಮಾಡಲಿಲ್ಲ. ಟೂರ್ನಿಯುದ್ದಕ್ಕೂ ಅಜೇಯವಾಗಿಯೇ ಫೈನಲ್‌ ತಲುಪಿದ್ದ ಯಶ್‌ ಧುಳ್‌ (Yash Dhull) ನಾಯಕತ್ವದ ತಂಡ ಫೈನಲಲ್ಲಿ ಮಾಜಿ ಚಾಂಪಿಯನ್ನರನ್ನು ಬಗ್ಗುಬಡಿಯಿತು. ಭಾರತೀಯ ಕ್ರಿಕೆಟ್‌ ಭವಿಷ್ಯವನ್ನು ಬೆಳಗಿಸುವ ತಾರೆಗಳಾಗಿ ಉದಯಿಸಿ ಬಂದವರ ಬಗ್ಗೆ ದೇಶದೆಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಸವಾಲುಗಳನ್ನು ಮೆಟ್ಟಿನಿಂತ ಕಿರಿಯರು

ಭಾರತದ ಕಿರಿಯರಿಗೆ ಈ ಬಾರಿ ಪ್ರಶಸ್ತಿ ಸುಲಭದಲ್ಲಿ ಒಲಿಯಲಿಲ್ಲ. ಚಾಲೆಂಜರ್‌ ಟ್ರೋಫಿ ಬಳಿಕ ಏಷ್ಯಾ ಕಪ್‌ ಆಡಿದ ಆಟಗಾರರು, ವಿಶ್ವಕಪ್‌ ಮುಗಿಯುವವರೆಗೂ ಸುಮಾರು 4 ತಿಂಗಳು ಬಯೋಬಬಲ್‌ನಲ್ಲೇ ಕಳೆದರು. ವಿಶ್ವಕಪ್‌ ಆರಂಭದಲ್ಲೇ ತಂಡ ಕೋವಿಡ್‌ ಆಘಾತಕ್ಕೊಳಗಾಗಿತ್ತು. ನಾಯಕ, ಉಪನಾಯಕ ಸೇರಿದಂತೆ ಪ್ರಮುಖ 6 ಆಟಗಾರರು ತಂಡದಿಂದ ಕೆಲ ಕಾಲ ಹೊರಬಿದ್ದಿದ್ದರು. 11 ಆಟಗಾರರನ್ನು ಅಂತಿಮಗೊಳಿಸಲೂ ಪರದಾಡುತ್ತಿದ್ದ ತಂಡಕ್ಕೆ, ಪಂದ್ಯದ ನಡುವೆ ಕೋಚ್‌ಗಳೇ ನೀರಿನ ಬಾಟಲ್‌ಗಳನ್ನು ಕೊಡುವ ಸ್ಥಿತಿ ನಿರ್ಮಾಣವಾಗಿತ್ತು.

ಹಲವು ತಾರೆಗಳ ಉದಯ

ಟೀಂ ಇಂಡಿಯಾದಲ್ಲಿ (Team India) ಈ ಬಾರಿ ಪ್ರತೀ ಪಂದ್ಯದಲ್ಲೂ ಬೇರೆ ಬೇರೆ ತಾರೆಯರು ಉದಯಿಸಿದರು. ಆಲ್ರೌಂಡರ್‌ಗಳೇ ತುಂಬಿದ್ದ ತಂಡ ಟೂರ್ನಿಗೆ ಯಾರನ್ನೂ ಹೆಚ್ಚಾಗಿ ಅವಲಂಬಿಸಿರಲಿಲ್ಲ. ಬೌಲಿಂಗ್‌ ಪ್ರತಿಭೆಗಳಾಗಿ ವಿಕ್ಕಿ ಓಸ್ವಾಲ್‌, ರವಿ ಕುಮಾರ್‌, ರಾಜ್‌ವರ್ಧನ್‌ ಹೊರಹೊಮ್ಮಿದರೆ, ಬ್ಯಾಟಿಂಗ್‌ನಲ್ಲಿ ಯಶ್‌ ಧುಳ್‌, ಹರ್ನೂರ್‌ ಸಿಂಗ್‌, ಶೇಕ್‌ ರಶೀದ್‌, ರಘುವನ್ಶಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ರಾಜ್‌ ಬವಾ, ನಿಶಾಂತ್‌ ಸಿಂಧು ತಮ್ಮ ಆಲ್ರೌಂಡ್‌ ಆಟದ ಮೂಲಕವೇ ಎಲ್ಲೆಡೆ ಮೆಚ್ಚುಗೆಗೆ ಪಾತ್ರರಾದರು.

ಬಿಸಿಸಿಐನಿಂದ 40 ಲಕ್ಷ ಬಹುಮಾನದ ಕೊಡುಗೆ

ವಿಶ್ವಕಪ್‌ ಗೆದ್ದ ಭಾರತ ಕ್ರಿಕೆಟ್‌ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಬಿಸಿಸಿಐ ತಂಡದ ಆಟಗಾರರಿಗೆ ತಲಾ 40 ಲಕ್ಷ ರುಪಾಯಿ ನಗದು ಬಹುಮಾನ ಘೋಷಿಸಿದೆ. ಇದೇ ವೇಳೆ ತಂಡದ ಸಹಾಯಕ ಸಿಬ್ಬಂದಿಗೂ ತಲಾ 25 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಪ್ರಕಟಿಸಲಾಗಿದೆ. ಇನ್ನು ವಿಶ್ವಕಪ್‌ ವಿಜೇತ ತಂಡ ಭಾರತಕ್ಕೆ ಮರಳಿದ ಬಳಿಕ, ತಂಡವನ್ನು ಅಹಮದಾಬಾದ್‌ನಲ್ಲಿ ಅಭಿನಂದಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

Scroll to load tweet…

ಭಾರತದ ಕ್ರಿಕೆಟ್‌ ಭವಿಷ್ಯ ಸುರಕ್ಷಿತವಾಗಿದೆ: ಮೋದಿ

ಅಂಡರ್‌-19 ವಿಶ್ವಕಪ್‌ ಜಯಿಸಿದ ಭಾರತ ಕ್ರಿಕೆಟ್‌ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, ಭಾರತದ ಕ್ರಿಕೆಟ್‌ ಭವಿಷ್ಯ ಸುರಕ್ಷಿತರ ಕೈಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ‘ನಮ್ಮ ಯುವ ಕ್ರಿಕೆಟಿಗರ ಬಗ್ಗೆ ಹೆಮ್ಮೆ ಪಡುವಂತಾಗಿದೆ. ಐಸಿಸಿ ಅಂಡರ್‌-19 ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು. ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತೀಯ ಕ್ರಿಕೆಟ್‌ ಭವಿಷ್ಯವು ಸುರಕ್ಷಿತ ಮತ್ತು ಸಮರ್ಥನೀಯರ ಕೈಯಲ್ಲಿದೆ ಎಂಬುದನ್ನು ಸಾಬೀತುಪಡಿಸಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

Scroll to load tweet…

ಭಾರತ ಗೆದ್ದ ವಿಶ್ವಕಪ್‌ಗಳ ಪಟ್ಟಿ

2000: ಭಾರತ ಅಂಡರ್‌ 19 ವಿಶ್ವಕಪ್‌ನಲ್ಲಿ ಮೊದಲ ಬಾರಿ ಚಾಂಪಿಯನ್‌ ಆಗಿದ್ದು 2000ದಲ್ಲಿ. ಮೊಹಮದ್‌ ಕೈಫ್‌ ನಾಯಕತ್ವದ ತಂಡ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.

20008: ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಆಡಿದ ಭಾರತ ತಂಡ 2ನೇ ಬಾರಿ ಅಂಡರ್‌-19 ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಫೈನಲ್‌ನಲ್ಲಿ ಟೀಂ ಇಂಡಿಯಾ, ದ.ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿತು. ಟೂರ್ನಿಗೆ ಮಲೇಷ್ಯಾ ಆತಿಥ್ಯ ವಹಿಸಿತ್ತು

2012: ಭಾರತ 3ನೇ ಬಾರಿ ವಿಶ್ವಕಪ್‌ ಗೆದ್ದು 2012ರಲ್ಲಿ. ಉನ್ಮುಕ್‌್ತ ಚಾಂದ್‌ ನಾಯಕತ್ವದ ತಂಡದ ಫೈನಲ್‌ನಲ್ಲಿ ಆಸ್ಪ್ರೇಲಿಯಾವನ್ನು ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿತು.

2018: ಭಾರತ 2018ರಲ್ಲಿ ದಾಖಲೆಯ 4ನೇ ಬಾರಿ ವಿಶ್ವಕಪ್‌ ಎತ್ತಿ ಹಿಡಿಯಿತು. ಪೃಥ್ವಿ ಶಾ ನಾಯಕತ್ವದ ತಂಡ ಫೈನಲ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ ಗೆದ್ದು, 4 ಬಾರಿ ಚಾಂಪಿಯನ್‌ ಆದ ಮೊದಲ ದೇಶ ಎನಿಸಿಕೊಂಡಿತು.

2022: ಯಶ್‌ ಧುಳ್‌ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಭಾರತ ತಂಡ 5ನೇ ಬಾರಿ ವಿಶ್ವಕಪ್‌ ಗೆದ್ದುಕೊಂಡಿತು. ಫೈನಲ್‌ನಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್‌ ತಂಡವನ್ನು ಬಗ್ಗು ಬಡಿಯಿತು.