Asianet Suvarna News Asianet Suvarna News

ICC U-19 World Cup: ಭಾರತ ಅಂಡರ್ 19 ತಂಡಕ್ಕೆ ಹ್ಯಾಟ್ರಿಕ್‌ ಗೆಲುವಿನ ಗುರಿ

* ಅಂಡರ್ 19 ಏಕದಿನ ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ-ಉಗಾಂಡ ಮುಖಾಮುಖಿ

* ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ದಿದೆ ಭಾರತದ ಕಿರಿಯರ ಕ್ರಿಕೆಟ್ ತಂಡ

* ಈಗಾಗಲೇ ಕ್ವಾರ್ಟರ್‌ ಫೈನಲ್ ಖಚಿತಪಡಿಸಿಕೊಂಡಿರುವ ಭಾರತ ತಂಡ

ICC U 19 World Cup India take on Uganda and eyes on Hat trick Victory kvn
Author
Bengaluru, First Published Jan 22, 2022, 11:34 AM IST

ತರೌಬ(ಜ.22‌): ಹಲವು ಕೋವಿಡ್‌ ಪ್ರಕರಣಗಳಿಂದ (Coronavirus Cases) ಸಂಕಷ್ಟಕ್ಕೆ ಗುರಿಯಾಗಿರುವ ಭಾರತ, ಅಂಡರ್‌-19 ವಿಶ್ವಕಪ್‌ನಲ್ಲಿ (ICC U-19 World Cup) ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದೆ. ಶನಿವಾರ ತಂಡಕ್ಕೆ ಕ್ರಿಕೆಟ್‌ ಶಿಶು ಉಗಾಂಡ (Uganda) ಎದುರಾಗಲಿದೆ. ಐರ್ಲೆಂಡ್‌ (Ireland) ವಿರುದ್ಧದ ಪಂದ್ಯಕ್ಕೂ ಮುನ್ನ 6 ಆಟಗಾರರು ಕೋವಿಡ್‌ ಸೋಂಕಿಗೆ ತುತ್ತಾಗಿದ್ದರು. ಆದರೂ 174 ರನ್‌ಗಳ ಬೃಹತ್‌ ಗೆಲುವು ದಾಖಲಿಸಿದ್ದ ಭಾರತ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು. ಅಜೇಯವಾಗಿ ನಾಕೌಟ್‌ ಹಂತಕ್ಕೆ ಕಾಲಿಡಲು ಭಾರತ ಕಾಯುತ್ತಿದೆ.

ಹರ್ನೂರ್‌ ಸಿಂಗ್‌, ಅಂಗ್‌ಕೃಷ್‌ ರಘುವಂಶಿ ಉತ್ತಮ ಲಯದಲ್ಲಿದ್ದಾರೆ. ರಾಜವರ್ಧನ್‌ ಹಂಗ್ರೇಕರ್‌ ಆಲ್ರೌಂಡ್‌ ಆಟ ತಂಡಕ್ಕೆ ವರದಾನವೆನಿಸಿದೆ. ಸೋಂಕಿಗೆ ತುತ್ತಾಗಿದ್ದ 6 ಆಟಗಾರರ ಪೈಕಿ ಐವರ ಆರ್‌ಟಿ-ಪಿಸಿಆರ್‌ ವರದಿ (RT_PCR Test) ಪಾಸಿಟಿವ್‌ ಬಂದಿದ್ದು, ಐರ್ಲೆಂಡ್‌ ವಿರುದ್ಧ ಆಡಿದ ತಂಡವನ್ನೇ ಮತ್ತೆ ಕಣಕ್ಕಿಳಿಸಬೇಕಾಗಬಹುದು.

ಐವರು ಮೀಸಲು ಆಟಗಾರರು: ಕೋವಿಡ್‌ ಸಂಕಷ್ಟಕ್ಕೆ ತುತ್ತಾಗಿರುವ ಭಾರತ ತಂಡವನ್ನು ಕೂಡಿಕೊಳ್ಳಲು ಬಿಸಿಸಿಐ (BCCI) ಐವರು ಮೀಸಲು ಆಟಗಾರರನ್ನು ಕೆರಿಬಿಯನ್‌ಗೆ ಕಳುಹಿಸಿದೆ. ನಾಕೌಟ್‌ ಹಂತ ಆರಂಭಗೊಳ್ಳುವ ವೇಳೆಗೆ ಆ ಆಟಗಾರರು ಆಯ್ಕೆಗೆ ಲಭ್ಯರಿರಲಿದ್ದಾರೆ.

ನಾಯಕ ಯಶ್ ಧುಳ್‌ಗೆ ಅನಾರೋಗ್ಯ

ಕೋವಿಡ್‌ಗೆ ತುತ್ತಾಗಿರುವ ನಾಯಕ ಯಶ್‌ ಧುಳ್‌ಗೆ (Yash Dhull) ಸೋಂಕಿನ ತೀವ್ರ ಲಕ್ಷಣಗಳಿದ್ದು, ಅವರ ಆರೋಗ್ಯದ ಮೇಲೆ ತಂಡದ ವೈದ್ಯರು ನಿಗಾ ವಹಿಸಿದ್ದಾರೆ. ಉಳಿದ ಸೋಂಕಿತ ಆಟಗಾರರ ಆರೋಗ್ಯ ಸ್ಥಿರವಾಗಿದೆ ಎಂದು ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

4 ಬಾರಿಯ ಅಂಡರ್ 19 ಏಕದಿನ ವಿಶ್ವಕಪ್ ಚಾಂಪಿಯನ್‌ ಭಾರತ ತಂಡವು ಕಳೆದ ಆವೃತ್ತಿಯ ಟೂರ್ನಿಯ ಫೈನಲ್‌ನಲ್ಲಿ ಬಾಂಗ್ಲಾದೇಶಕ್ಕೆ ಶರಣಾಗುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ಬಾರಿ ಭಾರತ ಕಿರಿಯರ ತಂಡ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದು, ಕಪ್ ಗೆಲ್ಲಬಲ್ಲ ನೆಚ್ಚಿನ ತಂಡ ಎನಿಸಿಕೊಂಡಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 45 ರನ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಇದಾದ ಬಳಿಕ ಐರ್ಲೆಂಡ್ ಎದುರು ಕೂಡಾ ಭಾರತ ಕಿರಿಯರ ತಂಡ ಭರ್ಜರಿ ಪ್ರದರ್ಶನ ತೋರಿದೆ.

ಪಂದ್ಯ ಆರಂಭ: ಸಂಜೆ 6.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಐಪಿಎಲ್‌ ಹರಾಜಿಗೆ 1000ಕ್ಕೂ ಹೆಚ್ಚು ಆಟಗಾರರ ನೋಂದಣಿ

ನವದೆಹಲಿ: ಫೆಬ್ರವರಿ 12, 13ರಂದು ಬೆಂಗಳೂರಲ್ಲಿ ನಡೆಯಲಿರುವ 2022ರ ಐಪಿಎಲ್‌ ಹರಾಜಿಗೆ (IPL Mega Auction) 1,000ಕ್ಕೂ ಹೆಚ್ಚು ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪೈಕಿ 350ರಿಂದ 400 ಆಟಗಾರರ ಅಂತಿಮ ಪಟ್ಟಿಯನ್ನು ಬಿಸಿಸಿಐ ಮುಂದಿನ ವಾರ ಪ್ರಕಟಗೊಳಿಸುವ ನಿರೀಕ್ಷೆ ಇದೆ. 

ICC T20 World Cup 2022: ಟೂರ್ನಿ ವೇಳಾಪಟ್ಟಿ ಪ್ರಕಟ, ಇಂಡೋ-ಪಾಕ್‌ ಕಾದಾಟಕ್ಕೆ ಡೇಟ್‌ ಫಿಕ್ಸ್..!

‘ಪ್ರತಿ ಬಾರಿಯಂತೆ ಈ ಬಾರಿಯೂ ಐಪಿಎಲ್‌ ಹರಾಜಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬಹುತೇಕ ಎಲ್ಲಾ ಅಗ್ರ ವಿದೇಶಿ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ’ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

ಹರ್ಭಜನ್‌ ಸಿಂಗ್‌ಗೆ ಕೊರೋನಾ ಸೋಂಕು

ನವದೆಹಲಿ: ಭಾರತದ ದಿಗ್ಗಜ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ಗೆ (Harbhajan Singh) ಕೊರೋನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಅವರು, ‘ನನಗೆ ಕೋವಿಡ್‌ ಖಚಿತವಾಗಿದೆ. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಕಾರಣ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಿದ್ದೇನೆ. ಸಂಪರ್ಕಕ್ಕೆ ಬಂದವರು ಕೂಡಲೇ ಪರೀಕ್ಷಿಸಿಕೊಳ್ಳಿ’ ಎಂದು ಮನವಿ ಮಾಡಿದ್ದಾರೆ. 41 ವರ್ಷದ ಹರ್ಭಜನ್‌, ಕಳೆದ ತಿಂಗಳು ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

Follow Us:
Download App:
  • android
  • ios