Asianet Suvarna News Asianet Suvarna News

ICC U-19 World Cup: 5ನೇ ವಿಶ್ವ ಕಿರೀಟದ ಹೊಸ್ತಿಲಲ್ಲಿ ಭಾರತದ ಕಿರಿಯರು..!

* ಐಸಿಸಿ ಅಂಡರ್ 19 ವಿಶ್ವಕಪ್ ಫೈನಲ್‌ನಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿ

* 5ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳಲು ಭಾರತಕ್ಕೆ ಇನ್ನೊಂದೇ ಹೆಜ್ಜೆ ಬಾಕಿ

* 4 ಬಾರಿ ಪ್ರಶಸ್ತಿ ಗೆದ್ದಿರುವ ಭಾರತಕ್ಕೆ ಇದು ಸತತ 4ನೇ ಫೈನಲ್

ICC U 19 World Cup Final India eyes on 5th title in summit clash against England kvn
Author
Bengaluru, First Published Feb 5, 2022, 8:47 AM IST

ಆ್ಯಂಟಿಗಾ(ಫೆ.05): ಅಂಡರ್-19 ವಿಶ್ವಕಪ್‌ನಲ್ಲಿ (ICC U-19 World Cup) ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಭಾರತ, 5ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ಈವರೆಗೆ ನಡೆದಿರುವ 14 ಆವೃತ್ತಿಗಳಲ್ಲಿ 8 ಬಾರಿ ಫೈನಲ್ ಪ್ರವೇಶಿಸಿ ದಾಖಲೆ ಬರೆದಿರುವ ಭಾರತದ ಕಿರಿಯರು ಈ ಬಾರಿ ದೇಶಕ್ಕೆ ಮತ್ತೊಂದು ಕಪ್ ಗೆಲ್ಲಿಸಿಕೊಡುವ ನಿರೀಕ್ಷೆಯಲ್ಲಿದ್ದಾರೆ. 4 ಬಾರಿ ಪ್ರಶಸ್ತಿ ಗೆದ್ದಿರುವ ಭಾರತಕ್ಕೆ ಇದು ಸತತ 4ನೇ ಫೈನಲ್ ಆಗಿದ್ದು, ಶನಿವಾರ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ.

‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಟೀಂ ಇಂಡಿಯಾ (Team India) ಅಜೇಯವಾಗಿಯೇ ನಾಕೌಟ್ ಹಂತ ತಲುಪಿತ್ತು. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 45 ರನ್ ಗಳಿಂದ ಗೆದ್ದಿದ್ದ ತಂಡ, ಐರ್ಲೆಂಡನ್ನು 174 ರನ್ ನಿಂದ ಮಣಿಸಿತ್ತು. ಬಳಿಕ ಉಗಾಂಡವನ್ನು ಬರೋಬ್ಬರಿ 326 ರನ್‌ಗಳ ಅಂತರದಲ್ಲಿ ಬಗ್ಗು ಬಡಿದಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ಬಾಂಗ್ಲಾ ದೇಶವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಭಾರತ, ಕಳೆದ ಆವೃತ್ತಿಯ ಫೈನಲ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿತ್ತು. ಸೆಮಿಫೈನಲ್‌ನಲ್ಲಿ 3 ಬಾರಿ ಚಾಂಪಿಯನ್ ಆಸ್ಟ್ರೇಲಿಯಾಗೆ 96 ರನ್‌ಗಳಿಂದ ಸೋಲುಣಿಸಿತ್ತು. 

ಆಲ್ರೌಂಡ್ ಆಟ: ಟೀಂ ಇಂಡಿಯಾ ಟೂರ್ನಿಯುದ್ದಕ್ಕೂ ಆಲ್ರೌಂಡ್ ಪ್ರದರ್ಶನದ ಮೂಲಕವೇ ಗಮನ ಸೆಳೆದಿದೆ. ನಾಯಕ ಯಶ್ ಧುಳ್(Yash Dhull), ಹರ್ನೂರ್ ಸಿಂಗ್, ಉಪನಾಯಕ ಶೇಖ್ ರಶೀದ್, ರಘುವನ್ಶಿ, ರಾಜ್‌ಬವಾ ತಂಡದ ಬ್ಯಾಟಿಂಗ್ ಆಧಾರಸ್ತಂಭಗಳಾಗಿದ್ದಾರೆ. ಈ ಪೈಕಿ ರಘುವನ್ಶಿ 5 ಪಂದ್ಯಗಳಲ್ಲಿ 55.60 ಸರಾಸರಿಯಲ್ಲಿ 278 ರನ್ ಕಲೆ ಹಾಕಿದ್ದಾರೆ. ರಾಜ್‌ಬವಾ 4 ಇನ್ನಿಂಗ್ಸ್‌ಗಳಲ್ಲಿ 217 ರನ್ ಗಳಿಸಿದ್ದಲ್ಲದೇ, 4 ವಿಕೆಟ್ ಕೂಡಾ ಕಬಳಿಸಿದ್ದಾರೆ. ಸೆಮೀಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿರುವ ಧುಳ್ ಒಟ್ಟು 3 ಪಂದ್ಯಗಳಲ್ಲಿ 212 ರನ್ ಬಾರಿಸಿದ್ದು, ಫೈನಲ್‌ನಲ್ಲೂ ಇದೇ ಪ್ರದರ್ಶನ ಮುಂದುವರಿಸುವ ತವಕದಲ್ಲಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ವಿಕ್ಕಿ ಓಸ್ವಾಲ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರು 5 ಪಂದ್ಯಗಳಲ್ಲಿ 12 ವಿಕೆಟ್ ಪಡೆದಿದ್ದು, ನಿಶಾಂತ್ ಸಿಂಧು, ರವಿ ಕುಮಾರ್, ಕೌಶಲ್ ತಾಂಬೆ, ರಾಜ್‌ವರ್ಧನ್ ಕೂಡಾ ಉತ್ತಮ ಬೆಂಬಲ ನೀಡುತ್ತಿದ್ದಾರೆ. 

ICC U-19 World Cup: ಆಸೀಸ್‌ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

ಇಂಗ್ಲೆಂಡ್‌ಗೆ 2ನೇ ಪ್ರಶಸ್ತಿ ಗುರಿ: ಗುಂಪು ಹಂತದಲ್ಲಿ ಆಜೇಯವಾಗಿಯೇ ನಾಕೌಟ್ ಹಂತ ಪ್ರವೇಶಿಸಿದ್ದ ಮಾಜಿ ಚಾಂಪಿಯನ್ ಇಂಗ್ಲೆಂಡ್ (England), ಕ್ವಾರ್ಟರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಿತ್ತು. ಬಳಿಕ ಸೆಮೀಸ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆದ್ದು 24 ವರ್ಷಗಳ ಬಳಿಕ ಫೈನಲ್‌ಗೆ ಅರ್ಹತೆ ಪಡೆದಿದೆ. ತಂಡದ ನಾಯಕ ಟಾಮ್ ಪ್ರೆಸ್ಟ್‌ ಇಂಗ್ಲೆಂಡ್ ಪರ ಈ ಆವೃತ್ತಿಯಲ್ಲಿ ಗರಿಷ್ಠ ರನ್ ಬಾರಿಸಿದ್ದು, ಶತಕ ಸೇರಿದಂತೆ 292 ರನ್ ಕಲೆ ಹಾಕಿದ್ದಾರೆ. ವೇಗಿ ಜೋಶುವಾ ಬೊಯ್ಡೆನ್ ಬೌಲಿಂಗ್‌ನಲ್ಲಿ ಎದುರಾಳಿಗಳಿಗೆ ಕಂಟಕವಾಗುತ್ತಿದ್ದು, ಒಟ್ಟು 13 ವಿಕೆಟ್ ಕಬಳಿಸಿದ್ದಾರೆ. ಕೇವಲ 3 ಪಂದ್ಯಗಳಲ್ಲಿ 12 ವಿಕೆಟ್ ಕಿತ್ತಿರುವ ರಿಹಾನ್ ಅಹಮದ್ ಸ್ಪಿನ್‌ನಲ್ಲಿ ಮತ್ತೊಮ್ಮೆ ಮೋಡಿ ಮಾಡುವ ನಿರೀಕ್ಷೆಯಲ್ಲಿದ್ದಾರೆ.  

7 ಫೈನಲ್‌ನಲ್ಲಿ  3ರಲ್ಲಿ ಸೋತಿರುವ ಭಾರತ:

ಭಾರತ ಈವರೆಗೆ ಅ-19 ವಿಶ್ವಕಪ್‌ನ 7 ಫೈನಲ್ ಗಳಲ್ಲಿ ಆಡಿದೆ. ಈ ಪೈಕಿ 2000, 2008, 2012, 2018ರಲ್ಲಿ ಭಾರತ ಚಾಂಪಿಯನ್ ಆಗಿದ್ದರೆ, 2006, 2016, 2020ರಲ್ಲಿ ಫೈನಲ್‌ನಲ್ಲಿ ಸೋತು ರನ್ನರ್-ಆಪ್ ಆಗಿತ್ತು. 1998ರಲ್ಲಿ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದ ಇಂಗ್ಲೆಂಡ್ ಪ್ರಶಸ್ತಿ ಗೆದ್ದಿತ್ತು. ಆ ಬಳಿಕ ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿದೆ. 

ಸ್ಪೂರ್ತಿ ತುಂಬಿದ ಕೊಹ್ಲಿ: ಅಂಡರ್ 19 ವಿಶ್ವಕಪ್ ಫೈನಲ್ ಆಡಲು ಸಿದ್ಧವಾಗಿರುವ ಭಾರತ ಕಿರಿಯ ಆಟಗಾರರಿಗೆ, 2008ರ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ವಿರಾಟ್ ಕೊಹ್ಲಿ (Virat Kohli) ಸ್ಫೂರ್ತಿ ತುಂಬಿದ್ದಾರೆ. ಗುರುವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಆಟಗಾರರೊಂದಿಗೆ ಸಮಲೋಚನೆ ನಡೆಸಿದ ಕೊಹ್ಲಿ, ಅವರಿಗೆ ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಇದರ ಬಗ್ಗೆ ಆಟಗಾರರಾದ ಕೌಶಲ್ ತಾಂಬೆ, ರಾಜ್ ವರ್ಧನ್ ತಮ್ಮ ಇನ್‌ಸ್ಟಾಗ್ರಾಂಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.  

ಪಿಚ್ ಮಾಹಿತಿ

ಸರ್ ವಿವಿ ರಿಚರ್ಡ್ಸನ್ ಕ್ರೀಡಾಂಗಣದಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆಲುವು ಸಾಧಿಸಿದೆ. ಫೈನಲ್ ಪಂದ್ಯವಾಗಿರುವುದರಿಂದ ಚೇಸಿಂಗ್ ಒತ್ತಡ ತಪ್ಪಿಸಲು ಟಾಸ್ ಗೆದ್ದ ತಂಡ ಬ್ಯಾಟಿಂಗ್ ಮಾಡುವ ಸಾಧ್ಯತೆ ಹೆಚ್ಚಿದೆ  

ಭಾರತ: ರಘುವನ್ಶಿ, ಹರ್ನೂರ್ ಸಿಂಗ್, ಶೇಖ್ ರಶೀದ್, ಯಶ್ ಧುಳ್, ನಿಶಾಂತ್ ಸಿಂಧು, ರಾಜ್ ಬವಾ, ಕೌಶಲ್ ತಾಂಬೆ, ದಿನೇಶ್ ಬನಾ, ರಾಜ್ ವರ್ಧನ್, ವಿಕ್ಕಿ ಓಸ್ವಾಲ್, ರವಿ ಕುಮಾರ್ 

ಇಂಗ್ಲೆಂಡ್: ಜಾರ್ಜ್ ಥಾಮಸ್, ಬೆಥೆಲ್, ಟಾಮ್ ಪ್ರೆಸ್ಟ್, ಜೇಮ್ಸ್, ವಿಲ್ಲಿಯಮ್, ಬೆಲ್, ರಿಹಾನ್, ಅಲೆಕ್ಸ್ ಹಾರ್ಟನ್, ಜೇಮ್ಸ್ ಸೇಲ್ಸ್, ಆಸ್ಪಿನ್‌ವಾಲ್, ಬೊಯ್ಡೆ  

ಪಂದ್ಯ ಆರಂಭ: ಸಂಜೆ 6.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್

Follow Us:
Download App:
  • android
  • ios