ಜುಲೈನಲ್ಲಿ ಟಿ20 ವಿಶ್ವಕಪ್ ಸ್ಥಳಾಂತರ ಕುರಿತು ನಿರ್ಧಾರ
2021ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯುತ್ತದೆಯೇ ಅಥವಾ ಬೇರೆಡೆಗೆ ಸ್ಥಳಾಂತರವಾಗುತ್ತದೆಯೇ ಎನ್ನುವುದರ ಬಗ್ಗೆ ಐಸಿಸಿ ಜುಲೈನಲ್ಲಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.06): ಇದೇ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತದಿಂದ ಯುಎಇಗೆ ಸ್ಥಳಾಂತರ ಮಾಡಲು ಕೂಗು ಹೆಚ್ಚುತ್ತಿದ್ದರೂ, ಐಸಿಸಿ ಮಾತ್ರ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಟೂರ್ನಿ ಆಯೋಜನೆಯ ಕುರಿತಂತೆ ತಕ್ಷಣಕ್ಕೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ, ಜುಲೈವರೆಗೂ ಕಾದು ನೋಡಲಿದ್ದೇವೆ. ವಿಶ್ವಕಪ್ ಆಗಿರುವುದರಿಂದ ಸಿದ್ಧತೆಗೆ ಹೆಚ್ಚು ಸಮಯ ಹಿಡಿಯಲಿದೆ. ಹೀಗಾಗಿ, ಜುಲೈನಲ್ಲಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಐಸಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಿ20 ವಿಶ್ವಕಪ್‌ಗೆ ಮುನ್ನ ಇಲ್ಲವೇ ನಂತರ ಐಪಿಎಲ್
ನವದೆಹಲಿ: ಕೋವಿಡ್‌ನಿಂದಾಗಿ ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಪುನಾರಂಭಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಟೂರ್ನಿಯನ್ನು ಟಿ20 ವಿಶ್ವಕಪ್‌ಗೆ ಮೊದಲು ಇಲ್ಲವೇ ವಿಶ್ವಕಪ್ ಮುಗಿದ ಬಳಿಕ ಆಯೋಜಿಸುವ ಚಿಂತನೆ ಇದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.
ಸದ್ಯಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ, ಪರಿಸ್ಥಿತಿ ಹಾಗೂ ಆಟಗಾರರ ಲಭ್ಯತೆ ನೋಡಿಕೊಂಡು ವೇಳಾಪಟ್ಟಿ ಸಿದ್ಧಪಡಿಸುತ್ತೇವೆ. ಬಾಕಿ ಇರುವ ಪಂದ್ಯಗಳನ್ನಷ್ಟೇ ನಡೆಸಲಾಗುತ್ತದೆ ಎಂದು ಬ್ರಿಜೇಶ್ ಹೇಳಿದ್ದಾರೆ. ಈ ಹಿಂದೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸಹಾ ಟೂರ್ನಿ ಮುಂದೂಡಲಾಗಿದೆಯೇ ಹೊರತು ರದ್ದಾಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಐಪಿಎಲ್ 2021 ರದ್ದು ಮಾಡಿಲ್ಲ, ಮುಂದೂಡಲಾಗಿದೆ: ರಾಜೀವ್ ಶುಕ್ಲಾ
ಕೋಲ್ಕತ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್‌ಗೆ ಬಯೋ ಬಬಲ್‌ನೊಳಗೆ ಕೋವಿಡ್ 19 ಸೋಂಕು ತಗುಲಿದ್ದು ಸಾಕಷ್ಟು ಆತಂಕಕ್ಕೆ ಈಡಾಗುವಂತೆ ಮಾಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಸಿಸಿಐ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ತೀರ್ಮಾನಿಸಿದೆ.