Asianet Suvarna News Asianet Suvarna News

ICC Test Rankings: ಜೋ ರೂಟ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಮಾರ್ನಸ್ ಲಬುಶೇನ್‌..!

* ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್‌ ಪ್ರಕಟ, ಲಬುಶೇನ್‌ಗೆ ಮೊದಲ ಸ್ಥಾನ

* ಏಳನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

* ಬೌಲಿಂಗ್ ಹಾಗೂ ಆಲ್ರೌಂಡ್ ವಿಭಾಗದಲ್ಲಿ 2ನೇ ಸ್ಥಾನ ಕಾಯ್ದುಕೊಂಡ ಅಶ್ವಿನ್

ICC Test Rankings Australian Cricketer Marnus Labuschagne becomes No 1 batter kvn
Author
Bengaluru, First Published Dec 22, 2021, 4:25 PM IST
  • Facebook
  • Twitter
  • Whatsapp

ದುಬೈ(ಡಿ.22): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ನಡುವಿನ ಅಡಿಲೇಡ್ ಟೆಸ್ಟ್ ಪಂದ್ಯ ಮುಕ್ತಾಯದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್‌ ರ‍್ಯಾಂಕಿಂಗ್‌ (ICC Test Rankings) ಪ್ರಕಟಗೊಂಡಿದ್ದು, ಆಸ್ಟ್ರೇಲಿಯಾದ ಅತ್ಯಂತ ನಂಬಿಗಸ್ಥ ಬ್ಯಾಟರ್‌ ಮಾರ್ನಸ್ ಲಬುಶೇನ್ (Marnus Labuschagne) ಇದೇ ಮೊದಲ ಬಾರಿಗೆ ನಂ.1 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ (Joe Root) ಅವರನ್ನು ಹಿಂದಿಕ್ಕಿ ಲಬುಶೇನ್‌ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. 

ಇಂಗ್ಲೆಂಡ್ ಎದುರಿನ ಆ್ಯಷಸ್ ಟೆಸ್ಟ್ ಸರಣಿಯ (Ashes Test Series) ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಲಬುಶೇನ್‌ 76.00 ರ ಬ್ಯಾಟಿಂಗ್ ಸರಾಸರಿಯಲ್ಲಿ 228 ರನ್‌ ಬಾರಿಸಿದ್ದಾರೆ. ಇನ್ನು ಜೋ ರೂಟ್ ಕೂಡಾ ಉತ್ತಮ ಫಾರ್ಮ್‌ನಲ್ಲಿದ್ದು, ಆಸೀಸ್ ಎದುರಿನ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ 43.75ರ ಬ್ಯಾಟಿಂಗ್ ಸರಾಸರಿಯಲ್ಲಿ 175 ರನ್‌ ಬಾರಿಸಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಏಳನೇ ಸ್ಥಾನಕ್ಕೆ ಜಾರಿದ್ದಾರೆ. ವಿರಾಟ್ ಕೊಹ್ಲಿ ಕಳೆದ ಮೂರು ತಿಂಗಳಿನಲ್ಲಿ ಕೇವಲ ಒಂದು ಟೆಸ್ಟ್ ಪಂದ್ಯವನ್ನಷ್ಟೇ ಆಡಿದ್ದಾರೆ. 

ಕಳೆದ ವಾರ ಬಿಡುಗಡೆಯಾಗಿದ್ದ ಟೆಸ್ಟ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ ಡೇವಿಡ್‌ ವಾರ್ನರ್‌ (David Warner) ಹಾಗೂ ವಿರಾಟ್ ಕೊಹ್ಲಿ ಜಂಟಿ ಸ್ಥಾನ ಹಂಚಿಕೊಂಡಿದ್ದರು. ಇನ್ನು ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಕೆಲವೇ ರನ್‌ಗಳ ಅಂತರದಲ್ಲಿ ಎರಡು ಶತಕ ವಂಚಿತರಾದ ವಾರ್ನರ್ ಇದೀಗ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಆರನೇ ಸ್ಥಾನಕ್ಕೇರಿದ್ದಾರೆ. ಆ್ಯಷಸ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಂದ ವಾರ್ನರ್ 67.33ರ ಬ್ಯಾಟಿಂಗ್ ಸರಾಸರಿಯಲ್ಲಿ 202 ರನ್ ಬಾರಿಸಿದ್ದಾರೆ.

ಮಾರ್ನಸ್‌ ಲಬುಶೇನ್ ಹಾಗೂ ಜೋ ರೂಟ್‌ ಮೊದಲೆರಡು ಸ್ಥಾನಕ್ಕೆ ಮುಂದಿನ ಕೆಲವು ದಿನಗಳ ಕಾಲ ಪೈಪೋಟಿ ನಡೆಸುವ ಸಾಧ್ಯತೆಯಿದೆ. ಇನ್ನು ರೋಹಿತ್ ಶರ್ಮಾ(Rohit Sharma), ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವುದರಿಂದ, ವಾರ್ನರ್‌ಗೆ ಐದನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಲು ಉತ್ತಮ ಅವಕಾಶವಿದೆ. 

Ashwin on Ravi Shastri: ಮಾಜಿ ಕೋಚ್ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ಆಫ್‌ ಸ್ಪಿನ್ನರ್..!

ಬ್ಯಾಟರ್‌ಗಳ ಟಾಪ್ 10 ಪಟ್ಟಿಯಲ್ಲಿ ಕ್ರಮವಾಗಿ ಮಾರ್ನಸ್ ಲಬುಶೇನ್‌, ಜೋ ರೂಟ್, ಸ್ಟೀವ್ ಸ್ಮಿತ್ (Steve Smith), ಕೇನ್ ವಿಲಿಯಮ್ಸನ್‌, ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ದೀಮುತ್ ಕರುಣರತ್ನೆ, ಬಾಬರ್ ಅಜಂ ಹಾಗೂ ಟ್ರಾವಿಸ್ ಹೆಡ್‌ ಸ್ಥಾನ ಪಡೆದಿದ್ದಾರೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಟಾಪ್ 3 ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಪ್ಯಾಟ್ ಕಮಿನ್ಸ್, ರವಿಚಂದ್ರನ್ ಅಶ್ವಿನ್ (Ravichandran Ashwin) ಹಾಗೂ ಶಾಹೀನ್ ಅಫ್ರಿದಿ ಮೊದಲ ಮೂರು ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನು ಟಿಮ್ ಸೌಥಿ ಒಂದು ಸ್ಥಾನ ಏರಿಕೆ ಕಂಡು ನಾಲ್ಕನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಅಡಿಲೇಡ್ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಜೋಶ್ ಹೇಜಲ್‌ವುಡ್ ಒಂದು ಸ್ಥಾನ ಕುಸಿತ ಕಂಡು 5ನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಕಗಿಸೋ ರಬಾಡ(Kagiso Rabada), ನೀಲ್ ವ್ಯಾಗ್ನರ್ ಹಾಗೂ ಜೇಮ್ಸ್ ಆ್ಯಂಡರ್‌ಸನ್‌ ಕ್ರಮವಾಗಿ 6-7-8ನೇ ಸ್ಥಾನ ಪಡೆದಿದ್ದಾರೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮಿಂಚಿನ ಬೌಲಿಂಗ್ ಪ್ರದರ್ಶನ ತೋರಿದ ಮಿಚೆಲ್ ಸ್ಟಾರ್ಕ್ 4 ಸ್ಥಾನ ಜಿಗಿತ ಕಂಡು 9ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದರೆ, ಕೈಲ್ ಜೇಮಿಸನ್ 10ನೇ ಸ್ಥಾನಕ್ಕೆ ಜಾರಿದ್ದಾರೆ.

ಆಲ್ರೌಂಡರ್ ವಿಭಾಗದಲ್ಲಿ ಟಾಪ್ 5 ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೆ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಕೀಬ್ ಅಲ್ ಹಸನ್ ಹಾಗೂ ಬೆನ್ ಸ್ಟೋಕ್ಸ್‌ ಕ್ರಮವಾಗಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
 

Follow Us:
Download App:
  • android
  • ios