ದುಬೈ(ಆ.26): ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಮೂರನೇ ಟೆಸ್ಟ್ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು, ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಕಿಸ್ತಾನ ವಿರುದ್ಧ ಕೊನೆಯ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿದ ಜೇಮ್ಸ್‌ ಆ್ಯಂಡರ್‌ಸನ್‌ ಬರೋಬ್ಬರಿ 6 ಸ್ಥಾನಗಳನ್ನು ಮೇಲೇರಿ ಬೌಲರ್‌ಗಳ ಶ್ರೇಯಾಂಕದಲ್ಲಿ 8ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.  ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಜೇಮ್ಸ್‌ ಆ್ಯಂಡರ್‌ಸನ್‌ ಪಾಲಿಗೆ ಅತ್ಯಂತ ಸ್ಮರಣೀಯ ಪಂದ್ಯವಾಗಿ ಪರಿಣಮಿಸಿದೆ. ಈ ಪಂದ್ಯದ ಮೂಲಕ ಆ್ಯಂಡರ್‌ಸನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 600 ಕಬಳಿಸಿದ ಸಾಧನೆ ಮಾಡಿದರು. ಇದರೊಂದಿಗೆ 600 ವಿಕೆಟ್‌ ಕಬಳಿಸಿದ ಜಗತ್ತಿನ ಮೊದಲ ಬೇಗದ ಬೌಲರ್‌ ಎನ್ನುವ ಚಾರಿತ್ರಿಕ ದಾಖಲೆಯನ್ನು ಬರೆದಿದ್ದಾರೆ.

ಇನ್ನುಳಿದಂತೆ ಬೌಲಿಂಗ್ ವಿಭಾಗದ ಟಾಪ್‌ 10 ಆಟಗಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಸೀಸ್ ವೇಗಿ ಪ್ಯಾಟ್ ಕಮಿನ್ಸ್, ಸ್ಟುವರ್ಟ್ ಬ್ರಾಡ್ ಹಾಗೂ ನೀಲ್‌ ವ್ಯಾಗ್ನರ್ ಕ್ರಮವಾಗಿ ಮೊದಲ 3 ಸ್ಥಾನಗಳಲ್ಲಿ ಭದ್ರವಾಗಿದ್ದಾರೆ. ಆ ಬಳಿಕ ಟಿಮ್ ಸೌಥಿ, ಜೇಸನ್ ಹೋಲ್ಡರ್, ಕಗಿಸೋ ರಬಾಡ, ಮಿಚೆಲ್ ಸ್ಟಾರ್ಕ್ ಸ್ಟಾರ್ಕ್, ಜೇಮ್ಸ್‌ ಆ್ಯಂಡರ್‌ಸನ್‌, ಜಸ್ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೋಲ್ಟ್ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಬುಮ್ರಾ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಟೆಸ್ಟ್‌ನಲ್ಲಿ 600 ವಿಕೆಟ್‌ ಕಿತ್ತು ದಾಖಲೆ ಬರೆದ ಆ್ಯಂಡರ್‌ಸನ್‌

ಇನ್ನು ಬ್ಯಾಟ್ಸ್‌ಮನ್‌ಗಳ ಟಾಪ್ 10 ವಿಭಾಗದಲ್ಲೂ ಹೆಚ್ಚೇನು ಬದಲಾವಣೆಯಾಗಿಲ್ಲ. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಮೊದಲ ಸ್ಥಾನ ಉಳಿಸಿಕೊಂಡಿದ್ದರೆ, ಆ ಬಳಿಕ ವಿರಾಟ್ ಕೊಹ್ಲಿ, ಮಾರ್ನಸ್ ಲಬುಶೇನ್, ಕೇನ್ ವಿಲಿಯಮ್ಸನ್, ಬಾಬರ್ ಅಜಂ ಹಾಗೂ ಡೇವಿಡ್ ವಾರ್ನರ್ ಕ್ರಮವಾಗಿ ಮೊದಲ 6 ಸ್ಥಾನಗಳಲ್ಲೇ ಮುಂದುವರೆದಿದ್ದಾರೆ. ಇನ್ನು ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಒಂದು ಸ್ಥಾನ ಮೇಲೇರಿ 7ನೇ ಸ್ಥಾನಕ್ಕೆ ಲಗ್ಗೆಯಿಟ್ಟರೆ, ಬೆನ್ ಸ್ಟೋಕ್ಸ್ ಒಂದು ಸ್ಥಾನ ಕುಸಿತ ಕಂಡಿದ್ದಾರೆ. ಜೋ ರೂಟ್, ಅಜಿಂಕ್ಯ ರಹಾನೆ 9 ಹಾಗೂ 10ನೇ ಸ್ಥಾನದಲ್ಲಿದ್ದಾರೆ.