ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗಾಗಿ ಭಾರತ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಶುರುವಾಗಿದೆ. ಟೆಸ್ಟ್‌ ವಿಶ್ವಕಪ್‌ ಫೈನಲ್ ಲೆಕ್ಕಾಚಾರ ಹೇಗಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ. 

ದುಬೈ(ಜ.21): ಆಸ್ಪ್ರೇಲಿಯಾದಲ್ಲಿ ಸರಣಿ ಗೆಲುವಿನ ಬಳಿಕ ಭಾರತ ಶೇ.71.7 ಅಂಕ ಪ್ರತಿಶತದೊಂದಿಗೆ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 

ಭಾರತ ಫೈನಲ್‌ನಲ್ಲಿ ಸ್ಥಾನ ಗಳಿಸಲು ಇಂಗ್ಲೆಂಡ್‌ ವಿರುದ್ಧದ 4 ಪಂದ್ಯಗಳ ಸರಣಿಯಲ್ಲಿ ಕನಿಷ್ಠ 2 ಪಂದ್ಯಗಳ ಅಂತರದಲ್ಲಿ ಗೆಲ್ಲಬೇಕಿದೆ. ಒಂದೊಮ್ಮೆ ಒಂದು ಪಂದ್ಯ ಸೋತರೆ, ಆಗ 3 ಪಂದ್ಯಗಳಲ್ಲಿ ಗೆಲ್ಲಬೇಕಿದೆ. ತಂಡ ಏನಾದರೂ 0-3 ಇಲ್ಲವೇ 0-4ರಿಂದ ಸೋಲುಂಡರೆ ಫೈನಲ್‌ಗೇರುವ ಅವಕಾಶ ಕೈತಪ್ಪಲಿದೆ.

ಇನ್ನು 2ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ ಶೇ.70 ಅಂಕ ಪ್ರತಿಶತ ಹೊಂದಿದೆ. ತಂಡಕ್ಕಿನ್ನು ಯಾವುದೇ ಪಂದ್ಯಗಳಿಲ್ಲ. ಹೀಗಾಗಿ ಇತರ ತಂಡಗಳ ಫಲಿತಾಂಶಗಳ ಮೇಲೆ ಕಿವೀಸ್‌ ಫೈನಲ್‌ಗೇರುವುದು ನಿರ್ಧಾರವಾಗಲಿದೆ. ಶೇ.69.2 ಅಂಕ ಪ್ರತಿಶತ ಹೊಂದಿರುವ ಆಸ್ಪ್ರೇಲಿಯಾ ಸದ್ಯದಲ್ಲೇ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, 3 ಪಂದ್ಯಗಳ ಸರಣಿ ಆಡಲಿದೆ. ಇದರಲ್ಲಿ ಕನಿಷ್ಠ 2ರಲ್ಲಿ ಗೆದ್ದರಷ್ಟೇ ಆಸೀಸ್‌ಗೆ ಫೈನಲ್‌ ಟಿಕೆಟ್‌ ಸಿಗಲಿದೆ.

ಭಾರತಕ್ಕಿನ್ನು ಇಂಗ್ಲೆಂಡ್‌ ಚಾಲೆಂಜ್‌..!

ಇಂಗ್ಲೆಂಡ್‌ಗೆ 5 ಪಂದ್ಯ ಬಾಕಿ ಇದ್ದು, ಕನಿಷ್ಠ 4ರಲ್ಲಿ ಗೆದ್ದರೆ ಫೈನಲ್‌ಗೇರುವ ಸಾಧ್ಯತೆ ಇದೆ. ದ.ಆಫ್ರಿಕಾ ತಂಡ ಪಾಕಿಸ್ತಾನ ವಿರುದ್ಧ 2, ದ.ಆಫ್ರಿಕಾ ವಿರುದ್ಧ 3 ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಬೇಕಿದೆ. ಜೊತೆಗೆ ಇಂಗ್ಲೆಂಡ್‌, ಲಂಕಾ ಹಾಗೂ ಭಾರತ ವಿರುದ್ಧ ಸೋಲಬೇಕಿದೆ. ಆಗ ಅವಕಾಶ ಸಿಗಬಹುದು.