T20 World Cup ನೆದರ್‌ಲೆಂಡ್ಸ್ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ
ಸಿಡ್ನಿ ಮೈದಾನದಲ್ಲಿಂದು ಭಾರತ-ನೆದರ್‌ಲೆಂಡ್ಸ್ ಮುಖಾಮುಖಿ
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ
ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿ ರಾಹುಲ್, ರೋಹಿತ್
ಸಿಡ್ನಿ(ಅ.27): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 23ನೇ ಪಂದ್ಯದಲ್ಲಿಂದು ನೆದರ್‌ಲೆಂಡ್ಸ್ ಹಾಗೂ ಭಾರತ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ.
ಮೊದಲ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ, ಪಾಕಿಸ್ತಾನ ವಿರುದ್ದ ಕಣಕ್ಕಿಳಿದ ತಂಡವೇ ಇಂದಿನ ಪಂದ್ಯಕ್ಕೂ ಕಣಕ್ಕಿಳಿದಿದೆ. ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಇನ್ನು ನೆದರ್‌ಲೆಂಡ್ಸ್ ತಂಡದಲ್ಲೂ ಸಹಾ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಈಗಾಗಲೇ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ರೋಚಕ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಆರಂಭಿಕ ವೈಫಲ್ಯದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಅಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. ಇದೀಗ ವಿರಾಟ್ ಕೊಹ್ಲಿ ಮತ್ತೊಮ್ಮೆ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.
ಇನ್ನುಳಿದಂತೆ ರೋಹಿತ್ ಶರ್ಮಾ ಹಾಗು ಕೆ ಎಲ್ ರಾಹುಲ್, ಪಾಕಿಸ್ತಾನ ವಿರುದ್ದ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ಇದೀಗ ನೆದರ್‌ಲೆಂಡ್ಸ್ ಎದುರು ಈ ಜೋಡಿ ಫಾರ್ಮ್‌ಗೆ ಮರಳಲು ಎದುರು ನೋಡುತ್ತಿದೆ. ಇನ್ನು ಸೂರ್ಯಕುಮಾರ್ ಕೂಡಾ ಕಾಂಗರೂ ನಾಡಿನಲ್ಲಿ ಅಬ್ಬರಿಸಲು ಹಾತೊರೆಯುತ್ತಿದ್ದಾರೆ.
T20 World Cup ಬಲಿಷ್ಠ ಭಾರತಕ್ಕಿಂದು ನೆದರ್‌ಲೆಂಡ್ಸ್ ಸವಾಲು
ಇನ್ನೊಂದೆಡೆ ಅರ್ಹತಾ ಸುತ್ತಿನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಸೂಪರ್ 12 ಹಂತ ಪ್ರವೇಶಿಸಿದ್ದ ನೆದರ್‌ಲೆಂಡ್ಸ್ ತಂಡವು, ಸೂಪರ್ 12 ಹಂತದಲ್ಲಿ ಬಾಂಗ್ಲಾದೇಶ ವಿರುದ್ದ9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಇದೀಗ ಬಲಿಷ್ಠ ಭಾರತ ತಂಡದ ಎದುರು ನೆದರ್‌ಲೆಂಡ್ಸ್ ತಂಡವು ಪವಾಡ ಸದೃಶ ಪ್ರದರ್ಶನವನ್ನು ಎದುರು ನೋಡುತ್ತಿದೆ.
ಭಾರತ ತಂಡ: ರೋಹಿತ್ ಶರ್ಮಾ(ನಾಯಕ). ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಆರ್ಶದೀಪ್ ಸಿಂಗ್
ನೆದರ್‌ಲೆಂಡ್ಸ್ ತಂಡ: ವಿಕ್ರಂಜಿತ್ ಸಿಂಗ್, ಮ್ಯಾಕ್ ಒ ಡೌಡ್, ಬಾಸ್ ಡಿ ಲೇಡೆ, ಕಾಲಿನ್ ಅಕೆರ್‌ಮನ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್(ನಾಯಕ&ವಿಕೆಟ್ ಕೀಪರ್), ಟಿಮ್ ಪ್ರಿಂಗಲ್, ಲೋಗನ್ ವ್ಯಾನ್ ಬೀಕ್, ಶೆರಿಜ್ ಅಹಮದ್, ಫ್ರೆಡ್ ಕ್ಲಾಸೇನ್, ಪೌಲ್ ವ್ಯಾನ್ ಮೀಕ್ರೇನ್.
ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್
ಸ್ತಳ: ಸಿಡ್ನಿ ಕ್ರಿಕೆಟ್ ಮೈದಾನ