T20 World Cup: ಜಿಂಬಾಬ್ವೆ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ, ಒಂದು ಬದಲಾವಣೆ..!
ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ-ಜಿಂಬಾಬ್ವೆ ಕಾದಾಟ
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ
ಭಾರತ ತಂಡದಲ್ಲಿ ಒಂದು ಮಹತ್ವದ ಬದಲಾವಣೆ
ಮೆಲ್ಬರ್ನ್(ನ.06): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಕೊನೆಯ ಪಂದ್ಯದಲ್ಲಿಂದು ಭಾರತ ಹಾಗೂ ಜಿಂಬಾವ್ವೆ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈಗಾಗಲೇ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿರುವ ಟೀಂ ಇಂಡಿಯಾ, ಇದೀಗ ಜಿಂಬಾಬ್ವೆ ಎದುರಿನ ಪಂದ್ಯವನ್ನು ಅಭ್ಯಾಸಕ್ಕೆ ಬಳಸಿಕೊಳ್ಳುವ ಸಾಧ್ಯತೆಯಿದೆ.
ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಪಂದ್ಯಕ್ಕೆ ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದ್ದು, ಭಾರತ ತಂಡವು ಜಿಂಬಾಬ್ವೆ ಎದುರು ದೊಡ್ಡ ಅಂತರದ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದೆ. ನಿರೀಕ್ಷೆಯಂತೆಯೇ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ದಿನೇಶ್ ಕಾರ್ತಿಕ್ ಬದಲಿಗೆ ರಿಷಭ್ ಪಂತ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಜಿಂಬಾಬ್ವೆ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ವೆಲ್ಲಿಂಗ್ಟನ್ ಮಸಕಜಾ ಹಾಗೂ ಟೋನಿ ಮುನಿಯೊಂಗಾ ತಂಡ ಕೂಡಿಕೊಂಡಿದ್ದಾರೆ.
T20 World Cup: ಬಾಂಗ್ಲಾದೇಶಕ್ಕೆ ಸೋಲುಣಿಸಿ ಸೆಮೀಸ್‌ಗೆ ಲಗ್ಗೆಯಿಟ್ಟ ಪಾಕಿಸ್ತಾನ..!
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ '2'ನ ಕೊನೆಯ ಲೀಗ್ ಪಂದ್ಯ ಇದಾಗಿದ್ದು, ಭಾರತ 4 ಪಂದ್ಯಗಳನ್ನಾಡಿ 3 ಗೆಲುವು ಹಾಗೂ 1 ಸೋಲಿನೊಂದಿಗೆ 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನೊಂದೆಡೆ ಸೂಪರ್ 12 ಹಂತದಲ್ಲಿ ಕೇವಲ ಒಂದು ಗೆಲುವು ಸಾಧಿಸಿ ಈಗಾಗಲೇ ಸೆಮೀಸ್ ರೇಸ್‌ನಿಂದ ಹೊರಬಿದ್ದಿರುವ ಜಿಂಬಾಬ್ವೆ ತಂಡವು ಬಲಿಷ್ಠ ಟೀಂ ಇಂಡಿಯಾ ಎದುರು ಅಚ್ಚರಿ ಫಲಿತಾಂಶವನ್ನು ಎದುರು ನೋಡುತ್ತಿದೆ.
ಹೀಗಿದೆ ನೋಡಿ ಉಭಯ ತಂಡಗಳ ವಿವರ
ಭಾರತ: ಕೆ ಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಅಶ್‌ರ್‍ದೀಪ್ ಸಿಂಗ್.
ಜಿಂಬಾಬ್ವೆ: ವೆಸ್ಲೆ ಮಧೆವೆರೆ, ಕ್ರೆಗ್ ಎರ್ವಿನ್(ನಾಯಕ), ಟೋನಿ ಮುನಿಯೊಂಗ, ಶೀನ್ ವಿಲಿಯಮ್ಸ್, ಸಿಕಂದರ್ ರಾಜಾ, ರೇಗಿಸ್ ಚಕಬ್ವಾ, ರೆಯನ್ ಬರ್ಲ್, ಎನ್‌ಗರಾವ, ಮುಜರಬಾನಿ, ಚಟಾರ, ವೆಲ್ಲಿಂಗ್ಟನ್ ಮಸಕಜಾ.
ಪಂದ್ಯ: ಮಧ್ಯಾಹ್ನ 1.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಚ್
ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಟೂರ್ನಿಯಲ್ಲಿ 4 ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿತ್ತು, 3 ಪಂದ್ಯ ಒಂದೂ ಎಸೆತ ಕಾಣದೆ ರದ್ದಾಗಿತ್ತು. ಭಾನುವಾರದ ಪಂದ್ಯಕ್ಕೆ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆಯಾದರೂ ಕೆಲ ಓವರ್‌ಗಳು ಕಡಿತಗೊಂಡು ಪಂದ್ಯ ನಡೆಯಲಿದೆ ಎನ್ನಲಾಗುತ್ತಿದೆ.