T20 World Cup: India vs Pakistan ದುಬೈನಲ್ಲಿಂದು ಭಾರತ-ಪಾಕ್ ಮಹಾ ಕದನ

* ಟಿ20 ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್‌ ಪಂದ್ಯಕ್ಕೆ ಕ್ಷಣಗಣನೆ

* ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ ಇಂಡೋ-ಪಾಕ್ ಮಹಾ ಕದನ

* ಗೆಲುವಿನೊಂದಿಗೆ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ ಟೀಂ ಇಂಡಿಯಾ

 

ICC T20 World Cup Team India Take on Pakistan in Dubai Countdown begins for High voltage match kvn

ದುಬೈ(ಅ.24): ಕ್ರಿಕೆಟ್‌ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿದೆ. ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ, ಭಾನುವಾರ ಐಸಿಸಿ ಟಿ20 ವಿಶ್ವಕಪ್‌ನ (ICC T20 World Cup) ಸೂಪರ್‌-12 ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ವಿಶ್ವಕಪ್‌ನ ಬಹುನಿರೀಕ್ಷಿತ ಪಂದ್ಯ ಇದ್ದಾಗಿದ್ದು, ಉಭಯ ತಂಡಗಳು 2 ವರ್ಷಗಳ ಬಳಿಕ ಕ್ರಿಕೆಟ್‌ ಯುದ್ಧಭೂಮಿಯಲ್ಲಿ ಎದುರಾಗಲಿರುವ ಕಾರಣ ಪಂದ್ಯ ಭಾರೀ ಮಹತ್ವ ಪಡೆದುಕೊಂಡಿದೆ.

ಎರಡೂ ತಂಡಗಳಿಗೆ ಟೂರ್ನಿಯಲ್ಲಿ ಇದು ಮೊದಲ ಪಂದ್ಯ. ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ವಿರಾಟ್‌ ಕೊಹ್ಲಿ (Virat Kohli) ಹಾಗೂ ಬಾಬರ್‌ ಆಜಂ (Babar Azam)ರ ನೇತೃತ್ವದ ತಂಡಗಳು ಎದುರು ನೋಡುತ್ತಿವೆ. ವಿಶ್ವಕಪ್‌ಗಳಲ್ಲಿ ಭಾರತ ತಂಡವು ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ವಿರುದ್ಧ ಸೋತೇ ಇಲ್ಲ. ಟಿ20 ವಿಶ್ವಕಪ್‌ಗಳಲ್ಲಿ ಆಡಿರುವ ಐದೂ ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಟೀಂ ಇಂಡಿಯಾ (Team India), ಸತತ 6ನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ.

T20 World Cup: ಭಾರತ ವಿರುದ್ದದ ಪಂದ್ಯಕ್ಕೆ 12 ಆಟಗಾರರನ್ನೊಳಗೊಂಡ ಪಾಕಿಸ್ತಾನ ತಂಡ ಪ್ರಕಟ

ಭಾರತದ ಬ್ಯಾಟಿಂಗ್‌ vs ಪಾಕ್‌ ಬೌಲಿಂಗ್‌

ಟೀಂ ಇಂಡಿಯಾ ಅತ್ಯಂತ ಬಲಿಷ್ಠ ಬೌಲಿಂಗ್‌ ಪಡೆಯನ್ನು ಹೊಂದಿದ್ದರೂ, ತಂಡದ ಬ್ಯಾಟಿಂಗ್‌ ಪಡೆ ಹಾಗೂ ಪಾಕಿಸ್ತಾನ ಬೌಲಿಂಗ್‌ ಪಡೆಯ ಎದುರು ಜಿದ್ದಾಜಿದ್ದಿನ ಪೈಪೋಟಿ ನಡೆಯುವ ನಿರೀಕ್ಷೆ ಇದೆ. ಭಾರತದ ಅಗ್ರ 5 ಬ್ಯಾಟ್ಸ್‌ಮನ್‌ಗಳಾರ ಕೆ.ಎಲ್‌.ರಾಹುಲ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌ ಹಾಗೂ ರಿಷಭ್‌ ಪಂತ್‌, ಪಾಕಿಸ್ತಾನದ ಬೌಲರ್‌ಗಳಾದ ಶಾಹೀನ್‌ ಶಾ ಅಫ್ರಿದಿ, ಹಸನ್‌ ಅಲಿ, ಹ್ಯಾರಿಸ್‌ ರೌಫ್‌, ಇಮಾದ್‌ ವಾಸೀಂ ಹಾಗೂ ಶದಾಬ್‌ ಖಾನ್‌ಗೆ ಬೆವರಿಳಿಸಲು ಕಾಯುತ್ತಿದ್ದಾರೆ. ಹಾರ್ದಿಕ್‌ ಪಾಂಡ್ಯ ತಜ್ಞ ಬ್ಯಾಟ್ಸ್‌ಮನ್‌ ಆಗಿ ಆಡಲಿರುವ ಕಾರಣ, ಭಾರತದ ಐವರು ಬೌಲರ್‌ಗಳ ಮೇಲೆ ಹೆಚ್ಚುವರಿ ಜವಾಬ್ದಾರಿ ಇರಲಿದೆ.

T20 World Cup 2021:ಕೊಹ್ಲಿ ಸೈನ್ಯಕ್ಕೆ ಬಾಬರ್ ಅಜಮ್ ಎಚ್ಚರಿಕೆ, ಶುರುವಾಯ್ತು ಜಟಾಪಟಿ!

ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಶಮಿ, ರವೀಂದ್ರ ಜಡೇಜಾ ಹಾಗೂ ವರುಣ್‌ ಚಕ್ರವರ್ತಿ ಆಡುವುದು ಬಹುತೇಕ ಖಚಿತ. 5ನೇ ಬೌಲರ್‌ ಆಗಿ ಭುವನೇಶ್ವರ್‌ ಕುಮಾರ್‌ ಇಲ್ಲವೇ ಶಾರ್ದೂಲ್‌ ಠಾಕೂರ್‌ ಆಡಲಿದ್ದಾರೆ. ಪಿಚ್‌ ಸ್ಪಿನ್‌ ಬೌಲಿಂಗ್‌ಗೆ ಹೆಚ್ಚು ನೆರವು ನೀಡಲಿದೆ ಎನ್ನುವ ಸುಳಿವು ಸಿಕ್ಕರೆ ಭಾರತ, ಆರ್‌.ಅಶ್ವಿನ್‌ರನ್ನು 6ನೇ ಬೌಲರ್‌ ಆಗಿ ಆಡಿಸಬಹುದು.

ಪಾಕ್‌ಗೆ ಅನುಭವಿಗಳ ಬಲ

ಪಾಕಿಸ್ತಾನ ತನ್ನ ಇಬ್ಬರು ಆಟಗಾರರ ಮೇಲೆ ಹೆಚ್ಚು ವಿಶ್ವಾಸವಿರಿಸಿದೆ. ನಾಯಕ ಬಾಬರ್‌ ಆಜಂ ಎಲ್ಲಾ ಮಾದರಿಯಲ್ಲೂ ತಂಡದ ಸೂಪರ್‌ಸ್ಟಾರ್‌. ಬಾಬರ್‌, ವೇಗಿ ಶಾಹೀನ್‌ ಅಫ್ರಿದಿಯಿಂದ ಉತ್ತಮ ಬೆಂಬಲ ನಿರೀಕ್ಷಿಸುತ್ತಿದ್ದಾರೆ. ಸ್ಪಿನ್ನರ್‌ ವಸೀಂ ಯುಎಇನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಅತ್ಯಂತ ಹಿರಿಯ ಆಟಗಾರರಾದ ಶೋಯಿಬ್‌ ಮಲಿಕ್‌ ಹಾಗೂ ಮೊಹಮದ್‌ ಹಫೀಜ್‌, ಭಾರತ ವಿರುದ್ಧ ಹಲವು ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದು, ಈ ಸಲವಾದರೂ ಗೆಲುವಿನ ಸಂಭ್ರಮ ಆಚರಿಸಲು ಕಾಯುತ್ತಿದ್ದಾರೆ.

ಪಿಚ್‌ ರಿಪೋರ್ಟ್‌

ಇತ್ತೀಚೆಗೆ ನಡೆದ ಐಪಿಎಲ್‌ ವೇಳೆ ದುಬೈನಲ್ಲಿ ರನ್‌ ಚೇಸ್‌ ಮಾಡುವ ತಂಡಕ್ಕೆ ಹೆಚ್ಚು ಲಾಭ. ಮೊದಲು ಬ್ಯಾಟ್‌ ಮಾಡುವ ತಂಡ 180-190 ರನ್‌ ಕಲೆಹಾಕಿದರಷ್ಟೇ ರಕ್ಷಿಸಿಕೊಳ್ಳುವ ಸಾಧ್ಯತೆ ಹೆಚ್ಚಿರಲಿದೆ. 2ನೇ ಇನ್ನಿಂಗ್ಸ್‌ ವೇಳೆ ಇಬ್ಬನಿ ಬೀಳುವ ಕಾರಣ ಬೌಲ್‌ ಮಾಡುವ ತಂಡಕ್ಕೆ ಸಮಸ್ಯೆ ಎದುರಾಗಲಿದೆ. ವೇಗವನ್ನು ಬದಲಾಯಿಸಿ ಬೌಲ್‌ ಮಾಡುವ ಕೌಶಲ್ಯವಿರುವ ಬೌಲರ್‌ಗಳಿಗೆ ಹೆಚ್ಚಿನ ಯಶಸ್ಸು ಸಿಗಲಿದೆ.

ತಂಡಗಳು

ಭಾರತ(ಸಂಭವನೀಯ 11): ಕೆ.ಎಲ್‌.ರಾಹುಲ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ(ನಾಯಕ), ಸೂರ್ಯಕುಮಾರ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್‌/ಭುವನೇಶ್ವರ್‌, ಮೊಹಮದ್‌ ಶಮಿ, ಜಸ್‌ಪ್ರೀತ್‌ ಬುಮ್ರ, ವರುಣ್‌ ಚಕ್ರವರ್ತಿ.

ಪಾಕಿಸ್ತಾನ(ಅಂತಿಮ 12): ಫಖರ್‌ ಜಮಾನ್‌, ಮೊಹಮದ್‌ ರಿಜ್ವಾನ್‌, ಬಾಬರ್‌ ಆಜಂ(ನಾಯಕ), ಮೊಹಮದ್‌ ಹಫೀಜ್‌, ಶೋಯಿಬ್‌ ಮಲಿಕ್‌, ಆಸಿಫ್‌ ಅಲಿ, ಇಮಾದ್‌ ವಸೀಂ, ಶದಾಬ್‌ ಖಾನ್‌, ಹ್ಯಾರಿಸ್‌ ರೌಫ್‌, ಹಸನ್‌ ಅಲಿ, ಶಾಹೀನ್‌ ಅಫ್ರಿದಿ, ಹೈದರ್‌ ಅಲಿ.

ಸ್ಥಳ: ದುಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Latest Videos
Follow Us:
Download App:
  • android
  • ios