* ಭಾರತಕ್ಕೆ 153 ರನ್‌ಗಳ ಗುರಿ ನೀಡಿದ ಆಸ್ಟ್ರೇಲಿಯಾ* ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಸ್ಟೀವ್ ಸ್ಮಿತ್* ರವಿಚಂದ್ರನ್ ಅಶ್ವಿನ್‌ಗೆ ಒಲಿದ 2 ವಿಕೆಟ್

ದುಬೈ(ಅ.20): ಅಗ್ರಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌(38) ಸ್ಟೀವ್ ಸ್ಮಿತ್(57) ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌(41*) ಸಮಯೋಚಿತ ಬ್ಯಾಟಿಂಗ್‌ ನೆರವಿನಿಂದ ಎರಡನೇ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು 152 ರನ್‌ ಬಾರಿಸಿದ್ದು, ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್‌ ಫಿಂಚ್‌ ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಪಂದ್ಯದ ಎರಡನೇ ಓವರ್‌ನಲ್ಲೇ ರವಿಚಂದ್ರನ್‌ ಅಶ್ವಿನ್‌ ಸತತ 2 ಎಸೆತಗಳಲ್ಲಿ 2 ವಿಕೆಟ್ ಕಬಳಿಸುವ ಮೂಲಕ ಆಸೀಸ್‌ಗೆ ಶಾಕ್‌ ನೀಡಿದರು. ರನ್‌ ಬರ ಅನುಭವಿಸುತ್ತಿರುವ ಡೇವಿಡ್ ವಾರ್ನರ್ ಕೇವಲ ಒಂದು ರನ್‌ ಬಾರಿಸಿ ರಿವರ್ಸ್‌ಸ್ವೀಪ್ ಮಾಡುವ ಯತ್ನದಲ್ಲಿ ಅಶ್ವಿನ್‌ ಎಲ್‌ಬಿ ಬಲೆಗೆ ಬಿದ್ದರೆ, ಮರು ಎಸೆತದಲ್ಲಿ ಬರ್ತ್‌ ಡೇ ಬಾಯ್ ಮಿಚೆಲ್ ಮಾರ್ಷ್‌ ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ನಾಲ್ಕನೇ ಓವರ್‌ನ ಮೊದಲ ಎಸೆತದಲ್ಲೇ ರವೀಂದ್ರ ಜಡೇಜಾ ಆಸೀಸ್‌ ನಾಯಕ ಆ್ಯರೋನ್‌ ಫಿಂಚ್ ವಿಕೆಟ್ ಕಬಳಿಸಿ ಆಸೀಸ್‌ಗೆ ಮತ್ತೊಂದು ಶಾಕ್ ನೀಡಿದರು. ಆಸ್ಟ್ರೇಲಿಯಾ 11 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಮ್ಯಾಕ್ಸ್‌ವೆಲ್‌-ಸ್ಮಿತ್ ಜತೆಯಾಟ: ನಾಲ್ಕನೇ ವಿಕೆಟ್‌ಗೆ ಅನುಭವಿ ಆಟಗಾರರಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಸ್ಟೀವ್‌ ಸ್ಮಿತ್ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ 61 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ನೆರವಾದರು. ಐಪಿಎಲ್ ಫಾರ್ಮ್ ಮುಂದುವರೆಸಿದ ಮ್ಯಾಕ್ಸ್‌ವೆಲ್ 28 ಎಸೆತಗಳಲ್ಲಿ 5 ಬೌಂಡರಿ ಸಹಿತ 37 ರನ್‌ ಬಾರಿಸಿ ರಾಹುಲ್‌ ಚಹಾರ್ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು. 

T20 World Cup Ind vs Aus ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ ಆಯ್ಕೆ

ಕೊನೆಯಲ್ಲಿ ಚುರುಕಿನ ಜತೆಯಾಟವಾಡಿದ ಸ್ಟೋಯ್ನಿಸ್‌-ಸ್ಮಿತ್: ಮ್ಯಾಕ್ಸ್‌ವೆಲ್ ವಿಕೆಟ್ ಪತನದ ಬಳಿಕ ಸ್ಟೀವ್ ಸ್ಮಿತ್ ಕೂಡಿಕೊಂಡ ಮಾರ್ಕಸ್‌ ಸ್ಟೋಯ್ನಿಸ್‌ ಚುರುಕಾಗಿ ರನ್‌ ಗಳಿಸಲು ಮುಂದಾದರು. 5ನೇ ವಿಕೆಟ್‌ಗೆ ಈ ಜೋಡಿ 76 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಸ್ಟೀವ್ ಸ್ಮಿತ್ 48 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 57 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಸ್ಟೋಯ್ನಿಸ್‌ 41 ರನ್‌ ಗಳ ಗಳಿಸಿ ಅಜೇಯರಾಗುಳಿದರು.

ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ: ಬ್ಯಾಟಿಂಗ್‌ನಲ್ಲಿ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ 2 ಓವರ್‌ ಬೌಲಿಂಗ್‌ ಮಾಡಿ ಗಮನ ಸೆಳೆದರು. ಮೊದಲ ಓವರ್‌ನಲ್ಲಿ ಕೇವಲ 4 ರನ್‌ ನೀಡಿದರೆ, ಎರಡನೇ ಓವರ್‌ನಲ್ಲಿ 8 ರನ್‌ ನೀಡಿದರು. ಟಾಸ್ ವೇಳೆ ರೋಹಿತ್ ಶರ್ಮಾ 6 ಬೌಲರ್ ರೂಪದಲ್ಲಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಹಾಗೂ ತಾವು ಬೌಲಿಂಗ್ ಮಾಡಲು ಸಿದ್ದರಿರುವುದಾಗಿ ಹೇಳಿದ್ದರು. ಅದರಂತೆ ವಿರಾಟ್ ಗಮನ ಸೆಳೆದರು.

ಶಾರ್ದೂಲ್ ಠಾಕೂರ್ 3 ಓವರ್‌ ಬೌಲಿಂಗ್ ಮಾಡಿ 30 ರನ್‌ ಬಿಟ್ಟು ಕೊಟ್ಟರೆ, ವರುಣ್‌ ಚಕ್ರವರ್ತಿ 2 ಓವರ್‌ನಲ್ಲಿ 23 ರನ್‌ ನೀಡಿ ದುಬಾರಿಯಾದರು.

ಸಂಕ್ಷಿಪ್ತ ಸ್ಕೋರ್: 
ಆಸ್ಟ್ರೇಲಿಯಾ: 152/5
ಸ್ಟೀವ್ ಸ್ಮಿತ್: 57
ರವಿಚಂದ್ರನ್ ಅಶ್ವಿನ್‌: 8/2