* ಹಾರ್ದಿಕ್ ಪಾಂಡ್ಯ-ವಿರಾಟ್ ಕೊಹ್ಲಿ ಸ್ಪೋಟಕ ಬ್ಯಾಟಿಂಗ್* ಸೆಮಿಫೈನಲ್ ಪಂದ್ಯ ಗೆಲ್ಲಲು ಇಂಗ್ಲೆಂಡ್‌ಗೆ 169 ರನ್‌ಗಳ ಗುರಿ
ಅಡಿಲೇಡ್(ನ.10): ಮಾಜಿ ನಾಯಕ ವಿರಾಟ್ ಕೊಹ್ಲಿ ಅಡಿಲೇಡ್ ಓವಲ್ ಮೈದಾನದಲ್ಲಿ ಮತ್ತೊಂದು ಸ್ಮರಣೀಯ ಇನಿಂಗ್ಸ್ ಆಡುವಲ್ಲಿ ಯಶಸ್ವಿಯಾಗಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಬಾರಿಸಿದ್ದು, ಸೆಮಿಫೈನಲ್ ಗೆಲ್ಲಲು ಇಂಗ್ಲೆಂಡ್‌ಗೆ ಸವಾಲಿನ ಗುರಿ ನೀಡಿದೆ.
ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್, ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆರಂಭದಲ್ಲಿ ನಾಯಕ ಜೋಸ್ ಬಟ್ಲರ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಇಂಗ್ಲೆಂಡ್ ಬೌಲರ್ ಯಶಸ್ವಿಯಾದರು. ಎರಡನೇ ಓವರ್‌ನಲ್ಲೇ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ 5 ರನ್ ಬಾರಿಸಿ ಕ್ರಿಸ್ ವೋಕ್ಸ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 43 ಎಸೆತಗಳಲ್ಲಿ 47 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ 28 ಎಸೆತಗಳಲ್ಲಿ 4 ಬೌಂಡರಿ ಸಹಿತ 27 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಸೂರ್ಯಕುಮಾರ್ ಯಾದವ್ 14 ರನ್ ಬಾರಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.
ಕೊಹ್ಲಿ-ಪಾಂಡ್ಯ ಜುಗಲ್ಬಂದಿ: ಒಂದು ಹಂತದಲ್ಲಿ 75 ರನ್‌ಗಳಿಗೆ 3 ವಿಕೆಟ್ ಕಳೆದುಕೊಡು ಕಂಗಾಲಾಗಿದ್ದ ಭಾರತ ತಂಡಕ್ಕೆ ನಾಲ್ಕನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ 61 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ತಮ್ಮ ನೆಚ್ಚಿನ ಮೈದಾನದಲ್ಲಿ ಮತ್ತೊಮ್ಮೆ ಆಕರ್ಷಕ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ 40 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 50 ರನ್ ಬಾರಿಸಿ ಕ್ರಿಸ್ ಜೋರ್ಡನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ 33 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 63 ರನ್ ಬಾರಿಸಿ ಕೊನೆಯ ಎಸೆತಗದಲ್ಲಿ ಹಿಟ್ ವಿಕೆಟ್ ಆಗಿ ಪೆವಿಲಿಯನ್ ಸೇರಿದರು.
ICC T20 World Cup ಟೀಂ ಇಂಡಿಯಾಗೆ ವರವಾಗುತ್ತಾ ಇಂಗ್ಲೆಂಡ್ ಟಾಸ್ ಗೆದ್ದಿದ್ದು..?
ಇನ್ನು ಬೌಲಿಂಗ್‌ನಲ್ಲಿ ಇಂಗ್ಲೆಂಡ್ ಪರ ಕ್ರಿಸ್ ಜೋರ್ಡನ್ 43 ರನ್ ನೀಡಿ 3 ವಿಕೆಟ್ ಪಡೆದರೆ, ಆದಿಲ್ ರಶೀದ್ ಹಾಗೂ ಕ್ರಿಸ್ ವೋಕ್ಸ್ ತಲಾ ಒಂದು ವಿಕೆಟ್ ಕಬಳಿಸಿ ಸಂಭ್ರಮಿಸಿದರು.
