T20 World Cup: ಮೊದಲ ದಿನವೇ ಆಘಾತಕಾರಿ ಫಲಿತಾಂಶ: ಸ್ಕಾಟ್ಲೆಂಡ್ಗೆ ಶರಣಾದ ಬಾಂಗ್ಲಾದೇಶ
* ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ
* ಮೊದಲ ದಿನದಲ್ಲೇ ಅಚ್ಚರಿಯ ಫಲಿತಾಂಶ
* ಬಾಂಗ್ಲಾದೇಶ ಎದುರು ಗೆದ್ದು ಬೀಗಿದ ಸ್ಕಾಟ್ಲೆಂಡ್
ಒಮಾನ್(ಅ.18): ಐಸಿಸಿ ಟಿ20 ವಿಶ್ವಕಪ್‌ನಲ್ಲಿ (ICC T20 World Cup) ಮೊದಲ ದಿನವೇ ಆಘಾತಕಾರಿ ಫಲಿತಾಂಶ ಹೊರಬಿದ್ದಿದೆ. ಪ್ರಧಾನ ಸುತ್ತಿಗೆ ಪ್ರವೇಶಿಸುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿರುವ ಬಾಂಗ್ಲಾದೇಶಕ್ಕೆ ಸ್ಕಾಟ್ಲೆಂಡ್ ಸೋಲುಣಿಸಿದೆ. 53 ರನ್‌ಗೆ 6 ವಿಕೆಟ್ ಕಳೆದುಕೊಂಡು ಪರದಾಡುತ್ತಿದ್ದ ಸ್ಕಾಟ್ಲೆಂಡ್ 140 ರನ್ ಕಲೆಹಾಕಿ, ಬಳಿಕ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು (Bangladesh Cricket Team) 134 ರನ್‌ಗಳಿಗೆ ಕಟ್ಟಿಹಾಕುವ ಮೂಲಕ 6 ರನ್‌ಗಳ ರೋಚಕ ಗೆಲುವು ಸಾಧಿಸಿ, ಐಸಿಸಿ (ICC) ಟೂರ್ನಿಯಲ್ಲಿ ಟೆಸ್ಟ್ ಆಡುವ ರಾಷ್ಟ್ರದ ಎದುರು ಚೊಚ್ಚಲ ಜಯ ದಾಖಲಿಸಿದೆ.
ವಿಶ್ವಕಪ್‌ಗೂ ಮುನ್ನ ಕೆಲ ತಿಂಗಳುಗಳ ಹಿಂದೆ ತವರಿನಲ್ಲಿ ನಡೆದಿದ್ದ ಟಿ20 ಸರಣಿಗಳಲ್ಲಿ ಸ್ಪಿನ್ ಸ್ನೇಹಿ ಪಿಚ್ ಸಿದ್ಧಪಡಿಸಿ, ಆಸ್ಪ್ರೇಲಿಯಾ ವಿರುದ್ಧ 4-1, ನ್ಯೂಜಿಲೆಂಡ್ ವಿರುದ್ಧ 3-2ರ ಅಂತರದಲ್ಲಿ ಗೆದ್ದು ಬೀಗಿದ್ದ ಬಾಂಗ್ಲಾದೇಶ, ಸ್ಪರ್ಧಾತ್ಮಕ ಪಿಚ್‌ನಲ್ಲಿ ಪರದಾಡಿತು. ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 11.3 ಓವರಲ್ಲಿ 53 ರನ್‌ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರಿಸ್ ಗ್ರೀವ್ಸ್(28 ಎಸೆತಗಳಲ್ಲಿ 45 ರನ್, 4 ಬೌಂಡರಿ, 2 ಸಿಕ್ಸರ್) ಹಾಗೂ ಮಾರ್ಕ್ ವ್ಯಾಟ್(22) ಆಸರೆಯಾದರು. ತಂಡ 9 ವಿಕೆಟ್ ನಷ್ಟಕ್ಕೆ 140 ರನ್ ಕಲೆಹಾಕಿತು.
T20 World Cup: ಉದ್ಘಾಟನಾ ಪಂದ್ಯದಲ್ಲಿ ಓಮನ್‌ಗೆ 10 ವಿಕೆಟ್ ಭರ್ಜರಿ ಗೆಲುವು!
ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ 141 ರನ್ ಗುರಿ ಬೆನ್ನತ್ತಲು ಇಳಿದ ಬಾಂಗ್ಲಾ, ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿತು. ಪವರ್-ಪ್ಲೇನಲ್ಲಿ ರನ್ ಗಳಿಸಲು ಪರದಾಡಿದ ಬಾಂಗ್ಲಾ, ಆನಂತರವೂ ತಿಣುಕಾಡಿತು. ಶಕೀಬ್ ಅಲ್ ಹಸನ್ (Shakib Al hasan) (20) ಹಾಗೂ ಮುಷ್ಫಿಕುರ್ ರಹೀಮ್ (Mushfiqur Rahim) (38)ರನ್ನು ಔಟ್ ಮಾಡಿದ ಗ್ರೀವ್ಸ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ನಾಯಕ ಮಹಮದ್ದುಲ್ಲಾ(23) ಸಹ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ವೀಲ್ 3, ಗ್ರೀವ್ಸ್ 2 ವಿಕೆಟ್ ಕಬಳಿಸಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಲ್ರೌಂಡ್ ಪ್ರದರ್ಶನ ತೋರಿದ ಗ್ರೀವ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ವಿಕೆಟ್: ನಂ.1 ಸ್ಥಾನಕ್ಕೆ ಶಕೀಬ್
ಅಲ್ ಅಮೆರಾತ್(ಒಮಾನ್): ಬಾಂಗ್ಲಾದೇಶದ ತಾರಾ ಆಲ್ರೌಂಡರ್ ಶಕೀಬ್ ಅಲ್-ಹಸನ್ ಪುರುಷರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ದಾಖಲೆ ಬರೆದಿದ್ದಾರೆ.
ಭಾನುವಾರ ಐಸಿಸಿ ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಒಂದೇ ಓವರಲ್ಲಿ 2 ವಿಕೆಟ್ ಕಿತ್ತ ಶಕೀಬ್ ಅಂತಾರಾಷ್ಟ್ರೀಯ ಟಿ20 ವಿಕೆಟ್ ಗಳಿಕೆಯನ್ನು 108ಕ್ಕೆ ಏರಿಸಿದರು. ಶಕೀಬ್ ಒಟ್ಟು 89 ಪಂದ್ಯಗಳನ್ನಾಡಿದ್ದಾರೆ. 84 ಪಂದ್ಯಗಳಲ್ಲಿ 107 ವಿಕೆಟ್ ಪಡೆದಿರುವ ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ ಅವರ ದಾಖಲೆಯನ್ನು ಶಕೀಬ್ ಮುರಿದರು. 99 ವಿಕೆಟ್ ಕಬಳಿಸಿರುವ ನ್ಯೂಜಿಲೆಂಡ್‌ನ ವೇಗಿ ಟಿಮ್ ಸೌಥಿ 3ನೇ ಸ್ಥಾನದಲ್ಲಿದ್ದಾರೆ.
'ಪಾಠ ಶುರು ಮಾಡಿದ ಮೇಸ್ಟ್ರು' ಟೀಂ ಇಂಡಿಯಾಕ್ಕೆ ಧೋನಿ ಮೆಂಟರಿಂಗ್ ಶುರು!
ಟಿ20 ಕ್ರಿಕೆಟ್ ಟೂರ್ನಿ ಆರಂಭವಾದಾಗಿನಿಂದ ತಮ್ಮ ಕರಾರುವಕ್ಕಾದ ಬೌಲಿಂಗ್ ದಾಳಿಯ ಮೂಲಕ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ತಬ್ಬಿಬ್ಬು ಮಾಡುತ್ತಿದ್ದ ಲಸಿತ್ ಮಾಲಿಂಗ ವಿಕೆಟ್ ಗಳಿಕೆಯಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ಇದೀಗ ಏಷ್ಯಾದ ಮತ್ತೊಬ್ಬ ಆಟಗಾರ ಮಾಲಿಂಗ ಅವರ ದಾಖಲೆಯನ್ನು ಅಳಿಸಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.