ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾ ಸವಾಲುಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ರೋಹಿತ್ ಶರ್ಮಾ ಪಡೆಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಉಭಯ ತಂಡಗಳು ಫೈಟ್

ಪರ್ತ್(ಅ.30): ಟಿ20 ವಿಶ್ವಕಪ್‌ನ ಮೊದಲ ವಾರ ಮುಕ್ತಾಯಗೊಂಡಿದ್ದು, ಟೀಂ ಇಂಡಿಯಾ ಸತತ 2 ಗೆಲುವುಗಳೊಂದಿಗೆ ಆರಂಭಿಕ ಮುನ್ನಡೆ ಸಾಧಿಸಿದೆ. ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ಕೂಡ ರೇಸ್‌ನಲ್ಲಿದ್ದು ಭಾನುವಾರ ಗುಂಪು-2ರಲ್ಲಿರುವ ಎಲ್ಲಾ ತಂಡಗಳು ಕಣಕ್ಕಿಳಿಯಲಿದ್ದು ಅಂಕಪಟ್ಟಿಯಲ್ಲಿ ಕೆಲ ಬದಲಾವಣೆ ನಿರೀಕ್ಷೆ ಮಾಡಲಾಗಿದೆ. ದಿನದ ಮೂರು ಪಂದ್ಯಗಳ ಪೈಕಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಎಲ್ಲರ ಕುತೂಹಲ ಕೆರಳಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ.

ಇತ್ತೀಚಿನ ಲಯ ಹಾಗೂ ಬಲಾಬಲವನ್ನು ನೋಡಿದಾಗ ಸಹಜವಾಗಿಯೇ ಭಾರತ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ವಿರಾಟ್‌ ಕೊಹ್ಲಿ ವಿಶ್ವಕಪ್‌ ವೇದಿಕೆಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಿದ್ದು, ಅವರ ಮೇಲೆಯೇ ತಂಡ ಹೆಚ್ಚು ಅವಲಂಬಿತಗೊಂಡಿದೆ. ರೋಹಿತ್‌ ಹಾಗೂ ಸೂರ್ಯಕುಮಾರ್‌ ಸಹ ನೆದರ್‌ಲೆಂಡ್ಸ್ ವಿರುದ್ಧ ಅರ್ಧಶತಕ ಸಿಡಿಸಿದ್ದರು. ಈ ಇಬ್ಬರು ಸ್ಥಿರತೆ ಕಾಯ್ದುಕೊಳ್ಳಬೇಕಿದೆ. ಕೆ.ಎಲ್‌.ರಾಹುಲ್‌ ಕಳಪೆ ಫಾರ್ಮ್‌ನಲ್ಲಿದ್ದು ದೊಡ್ಡ ಇನ್ನಿಂಗ್ಸ್‌ ಆಡಬೇಕಾದ ಒತ್ತಡದಲ್ಲಿದ್ದಾರೆ.

ವಿಶ್ವಕಪ್‌ಗೂ ಮೊದಲು ಭಾರತದಲ್ಲಿ ದ.ಆಫ್ರಿಕಾ ಟಿ20 ಸರಣಿಯನ್ನು ಸೋತಿತ್ತು. ಭಾರತಕ್ಕೆ ಬಂದಿದ್ದ ತಂಡವೇ ವಿಶ್ವಕಪ್‌ನಲ್ಲೂ ಆಡುತ್ತಿದೆಯಾದರೂ ತಂಡದಲ್ಲಿ ಕೆಲ ಬದಲಾವಣೆ ಆಗಿರುವುದು ಕಾಣುತ್ತಿದೆ.

ವಿಶ್ವಕಪ್‌ನಲ್ಲಿ ಆಡುತ್ತಿರುವ ದ.ಆಫ್ರಿಕಾ ತಂಡದಲ್ಲಿ ಗೆಲ್ಲಬೇಕೆನ್ನುವ ಹಸಿವಿದೆ. ತಂಡದ ಯೋಜನೆಯಲ್ಲಿ ಸ್ಪಷ್ಟತೆ ಇದೆ. ಜಿಂಬಾಬ್ವೆ ವಿರುದ್ಧದ ಪಂದ್ಯ ಮಳೆಗೆ ಬಲಿಯಾದರೂ ತಂಡದ ಬ್ಯಾಟಿಂಗ್‌ ನೋಡಿದವರ ಎದೆಯಲ್ಲಿ ನಡುಕ ಹುಟ್ಟಿರದೆ ಇರಲು ಸಾಧ್ಯವಿಲ್ಲ. ಈ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ಬಿಟ್ಟರೆ 200ಕ್ಕೂ ಹೆಚ್ಚು ರನ್‌ ಗಳಿಸಿರುವ ತಂಡ ಅಂದರೆ ಅದು ದ.ಆಫ್ರಿಕಾ ಮಾತ್ರ.

T20 World Cup: ದಕ್ಷಿಣ ಆಫ್ರಿಕಾ ವಿರುದ್ದ ರಾಹುಲ್ ಬದಲು ಪಂತ್ ಇನಿಂಗ್ಸ್ ಆರಂಭಿಸ್ತಾರಾ?

ಹರಿಣ ಪಡೆಯ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಕಡಿವಾಣ ಹಾಕಲು ಭಾರತೀಯ ವೇಗಿಗಳು ಹೆಚ್ಚಿನ ಪರಿಶ್ರಮ ವಹಿಸಬೇಕಾಗಬಹುದು. ಆರ್‌.ಅಶ್ವಿನ್‌ ಹಾಗೂ ಅಕ್ಷರ್‌ ಪಟೇಲ್‌, ದ.ಆಫ್ರಿಕಾದ ಮಧ್ಯಮ ಕ್ರಮಾಂಕವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ. ಕ್ವಿಂಟನ್‌ ಡಿ ಕಾಕ್‌ ಹಾಗೂ ರೈಲಿ ರುಸೌ ಪ್ರಚಂಡ ಲಯದಲ್ಲಿದ್ದು ಈ ಇಬ್ಬರೇ ಭಾರತದ ಬಹು ಮುಖ್ಯ ಟಾರ್ಗೆಟ್‌ ಎನಿಸಿದ್ದಾರೆ.

ಸಂಭವನೀಯರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಕೆ ಎಲ್ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ಹಾರ್ದಿಕ್‌ ಪಾಂಡ್ಯ, ದಿನೇಶ್ ಕಾರ್ತಿಕ್‌, ಅಕ್ಷರ್‌ ಪಟೇಲ್, ರವಿಚಂದ್ರನ್ ಅಶ್ವಿನ್‌, ಭುವನೇಶ್ವರ್‌ ಕುಮಾರ್, ಮೊಹಮ್ಮದ್ ಶಮಿ, ಅಶ್‌ರ್‍ದೀಪ್‌ ಸಿಂಗ್.

ದ.ಆಫ್ರಿಕಾ: ಕ್ವಿಂಟನ್ ಡಿ ಕಾಕ್‌, ತೆಂಬಾ ಬವುಮಾ(ನಾಯಕ), ರಿಲೇ ರುಸೌ, ಏಯ್ಡನ್ ಮಾರ್ಕ್ರಮ್‌, ಡೇವಿಡ್ ಮಿಲ್ಲರ್‌, ಟ್ರಿಸ್ಟನ್ ಸ್ಟಬ್ಸ್‌, ವೇಯ್ನ್ ಪಾರ್ನೆಲ್‌/ ಮಾರ್ಕೊ ಯಾನ್ಸನ್‌, ಕೇಶವ್ ಮಹಾರಾಜ್‌, ಕಗಿಸೋ ರಬಾಡ, ಏನ್ರಿಚ್ ನೋಕಿಯ, ಲುಂಗಿ ಎನ್‌ಗಿಡಿ.

ಪಂದ್ಯ: ಸಂಜೆ 4.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಪಿಚ್‌ ರಿಪೋರ್ಚ್‌

ಪರ್ತ್ ಪಿಚ್‌ನಲ್ಲಿ ವೇಗ, ಬೌನ್ಸ್‌ ಇದೆ. ಆರಂಭಿಕ ಸ್ಪೆಲ್‌ಗಳಲ್ಲಿ ಸ್ವಿಂಗ್‌ ಬೌಲಿಂಗ್‌ಗೂ ನೆರವಾಗಲಿದೆ. ಆದರೆ ಸರಿಯಾದ ಲೆಂಥ್‌ಗಳನ್ನು ಬೌಲ್‌ ಮಾಡಿದರಷ್ಟೇ ಯಶಸ್ಸು ಸಿಗಲಿದೆ. ಬೌಂಡರಿಗಳು ದೊಡ್ಡದಿದ್ದು ಬ್ಯಾಟರ್‌ಗಳಿಗೆ ರನ್‌ ಗಳಿಸುವುದು ಸವಾಲಾಗಲಿದೆ. ಇಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್‌ ಮೊತ್ತ 143 ರನ್‌. ಕೇವಲ ಒಮ್ಮೆ ಮಾತ್ರ ಟಿ20ಯಲ್ಲಿ 200ಕ್ಕಿಂತ ಹೆಚ್ಚು ಮೊತ್ತ ದಾಖಲಾಗಿದೆ.