T20 World Cup: ಲಂಕಾ ಎದುರು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ, ಉಭಯ ತಂಡದಲ್ಲೂ ಒಂದೊಂದು ಬದಲಾವಣೆ
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಲಂಕಾ-ನ್ಯೂಜಿಲೆಂಡ್ ಮುಖಾಮುಖಿ
ಟಾಸ್ ಗೆದ್ದ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ
ಲಂಕಾ ಪಾಲಿಗೆ ಸೆಮೀಸ್ ದೃಷ್ಠಿಯಿಂದ ಮಹತ್ವದ ಪಂದ್ಯ
ಸಿಡ್ನಿ(ಅ.29): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 27ನೇ ಪಂದ್ಯದಲ್ಲಿಂದು ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಉಭಯ ತಂಡಗಳಲ್ಲೂ ಒಂದೊಂದು ಬದಲಾವಣೆ ಮಾಡಲಾಗಿದೆ.
ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ಆಸ್ಟ್ರೇಲಿಯಾ ಎದುರಿನ ಪಂದ್ಯದ ವೇಳೆ ಗಾಯದ ಸಮಸ್ಯೆಯಿಂದ ಬಿನುರಾ ಫರ್ನಾಂಡೋ ಕೇವಲ ಒಂದು ಓವರ್ ಬೌಲಿಂಗ್ ಮಾಡಿ ತಂಡದಿಂದ ಹೊರಬಿದ್ದಿದ್ದರು. ಇದೀಗ ಬಿನುರಾ ಫರ್ನಾಂಡೋ ಬದಲಿಗೆ ಕಸನ್ ರಜಿತ್ ತಂಡ ಕೂಡಿಕೊಂಡಿದ್ದಾರೆ. ಇನ್ನು ನಿರೀಕ್ಷೆಯಂತೆಯೇ ನ್ಯೂಜಿಲೆಂಡ್ ತಂಡದಲ್ಲಿ ಕೂಡಾ ಒಂದು ಬದಲಾವಣೆ ಮಾಡಲಾಗಿದ್ದು, ಮಾರ್ಕ್ ಚಾಪ್ಮನ್ ಬದಲಿಗೆ ಡೇರಲ್ ಮಿಚೆಲ್ ತಂಡ ಕೂಡಿಕೊಂಡಿದ್ದಾರೆ.
ಸದ್ಯ ನ್ಯೂಜಿಲೆಂಡ್ ತಂಡವು 2 ಪಂದ್ಯಗಳಿಂದ ಒಂದು ಗೆಲುವು ಹಾಗೂ ಒಂದು ಪಂದ್ಯದಲ್ಲಿ ಒಂದಂಕ ಹಂಚಿಕೊಂಡಿದ್ದರಿಂದ 3 ಅಂಕಗಳ ಸಹಿತ ಮೊದಲ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನೊಂದೆಡೆ ದಶುನ್ ಶನಕಾ ನೇತೃತ್ವದ ಶ್ರೀಲಂಕಾ ತಂಡವು ಎರಡು ಪಂದ್ಯಗಳನ್ನಾಡಿ ತಲಾ ಒಂದು ಗೆಲುವು ಮತ್ತು ಸೋಲಿನೊಂದಿಗೆ 2 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸೆಮೀಸ್ ಕನಸು ಜೀವಂತವಾಗಿರಿಸಿಕೊಳ್ಳಲಿದೆ.
T20 World Cup ಶ್ರೀಲಂಕಾಕ್ಕಿಂದು ಬಲಿಷ್ಠ ನ್ಯೂಜಿಲೆಂಡ್ ಸವಾಲು..!
ಆತಿಥೇಯ ಆಸ್ಟ್ರೇಲಿಯಾ ಎದುರು 89 ರನ್‌ಗಳ ಅರ್ಹ ಗೆಲುವು ದಾಖಲಿಸಿದ್ದ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು, ಎರಡನೇ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ದ ಗೆದ್ದು ಬೀಗುವ ವಿಶ್ವಾಸದಲ್ಲಿತ್ತು. ಆದರೆ ಆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡಿದ್ದವು. ಇದೀಗ ಲಂಕಾ ಎದುರಿನ ಪಂದ್ಯಕ್ಕೂ ಮುನ್ನ ಡೇರಲ್ ಮಿಚೆಲ್ ಸಂಪೂರ್ಣ ಫಿಟ್ ಆಗಿದ್ದು, ಕಿವೀಸ್ ತಂಡ ಕೂಡಿಕೊಂಡಿದ್ದಾರೆ. ಫಿನ್ ಅಲೆನ್ ಹಾಗೂ ಡೆವೊನ್ ಕಾನ್‌ವೇ ಸ್ಪೋಟಕ ಆರಂಭ ಒದಗಿಸಿಕೊಡುವ ವಿಶ್ವಾಸದಲ್ಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಕೇನ್ ವಿಲಿಯಮ್ಸ್, ಗ್ಲೆನ್ ಫಿಲಿಫ್ಸ್ ಜತೆಗೆ ಡೇರಲ್ ಮಿಚೆಲ್ ಕೂಡಾ ತಂಡ ಕೂಡಿಕೊಂಡರೆ ನ್ಯೂಜಿಲೆಂಡ್ ತಂಡವು ಮತ್ತಷ್ಟು ಬಲಿಷ್ಠವಾಗಲಿದೆ. ಇನ್ನು ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್, ಟಿಮ್ ಸೌಥಿ ಹಾಗೂ ಲಾಕಿ ಫರ್ಗ್ಯೂಸನ್, ಲಂಕಾ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.
ತಂಡಗಳು ಹೀಗಿವೆ ನೋಡಿ
ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್‌ವೇ, ಕೇನ್ ವಿಲಿಯಮ್ಸ್(ನಾಯಕ), ಗ್ಲೆನ್ ಫಿಲಿಫ್ಸ್, ಡೇರಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಲಾಕಿ ಫರ್ಗ್ಯೂಸನ್, ಟ್ರೆಂಟ್ ಬೌಲ್ಟ್.
ಶ್ರೀಲಂಕಾ: ಪಥುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭನುಕಾ ರಾಜಪಕ್ಸಾ, ದಶುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕ ಕರುಣರತ್ನೆ, ಮಹೀಶ್ ತೀಕ್ಷಣ, ಲಹಿರು ಕುಮಾರ, ಕಸುನ್ ರಜಿತ.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್.