Asianet Suvarna News Asianet Suvarna News

T20 World Cup ಶ್ರೀಲಂಕಾಕ್ಕಿಂದು ಬಲಿಷ್ಠ ನ್ಯೂಜಿಲೆಂಡ್ ಸವಾಲು..!

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿಂದು ಲಂಕಾಗೆ ಕಿವೀಸ್‌ ಸವಾಲು
ಗೆಲ್ಲಲೇಬೇಕಾದ ಒತ್ತಡದಲ್ಲಿ ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ
ಸೆಮೀಸ್‌ಗೆ ಮತ್ತಷ್ಟು ಹತ್ತಿರವಾಗುವ ನಿರೀಕ್ಷೆಯಲ್ಲಿ  ಕೇನ್ ವಿಲಿಯಮ್ಸ್‌ ಪಡೆ

ICC T20 World Cup 2022 New Zealand take on Sri Lanka in Sydney kvn
Author
First Published Oct 29, 2022, 9:48 AM IST

ಸಿಡ್ನಿ(ಅ.29): ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾಗೆ ಸೋಲುಣಿಸುವ ಮೂಲಕ ಐಸಿಸಿ ಟಿ20 ವಿಶ್ವಕಪ್‌ ಅಭಿಯಾನ ಆರಂಭಿಸಿದ್ದ ಕಳೆದ ಬಾರಿ ರನ್ನರ್‌-ಅಪ್‌ ನ್ಯೂಜಿಲೆಂಡ್‌ 2ನೇ ಗೆಲುವಿನ ನಿರೀಕ್ಷೆಯಲ್ಲಿದ್ದು, ಶನಿವಾರ ಮಾಜಿ ಚಾಂಪಿಯನ್‌ ಶ್ರೀಲಂಕಾ ವಿರುದ್ಧ ಸೆಣಸಾಡಲಿದೆ. 

ಸದ್ಯ ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಸ್‌ 2 ಪಂದ್ಯಗಳಲ್ಲಿ 3 ಅಂಕಗಳೊಂದಿಗೆ ಗ್ರೂಫ್‌ ಆಫ್‌ ಡೆತ್‌ ಎಂದೇ ಕರೆಸಿಕೊಳ್ಳುವ ಗುಂಪು 1ರಲ್ಲಿ ಅಗ್ರಸ್ಥಾನದಲ್ಲಿದ್ದು, ನಾಕೌಟ್‌ ಹಂತಕ್ಕೇರುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಲಂಕಾ ವಿರುದ್ಧ ಗೆಲುವು ಸಾಧಿಸಿದರೆ ಅಗ್ರಸ್ಥಾನ ಭದ್ರಪಡಿಸಿಕೊಳ್ಳುವ ಜೊತೆಗೆ ನಾಕೌಟ್‌ಗೆ ಮತ್ತಷ್ಟು ಹತ್ತಿರವಾಗಲಿದೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್‌ಗೇರಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿಕೊಂಡಿರುವ ನ್ಯೂಜಿಲೆಂಡ್ ತಂಡವು, ಲಂಕಾ ಎದುರು ಇದೀಗ ಸಾಂಘಿಕ ಪ್ರದರ್ಶನ ತೋರಲು ಎದುರು ನೋಡುತ್ತಿದೆ.

ಆತಿಥೇಯ ಆಸ್ಟ್ರೇಲಿಯಾ ಎದುರು 89 ರನ್‌ಗಳ ಅರ್ಹ ಗೆಲುವು ದಾಖಲಿಸಿದ್ದ ಕಿವೀಸ್‌ ಪಡೆ, ಎರಡನೇ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ದ ಗೆದ್ದು ಬೀಗುವ ವಿಶ್ವಾಸದಲ್ಲಿತ್ತು. ಆದರೆ ಆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡಿದ್ದವು. ಇದೀಗ ಲಂಕಾ ಎದುರಿನ ಪಂದ್ಯಕ್ಕೂ ಮುನ್ನ ಡೇರಲ್ ಮಿಚೆಲ್ ಸಂಪೂರ್ಣ ಫಿಟ್ ಆಗಿದ್ದು, ಆಯ್ಕೆಗೆ ಲಭ್ಯವಿರುವುದು ಕಿವೀಸ್ ಪಡೆಯ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಫಿನ್ ಅಲೆನ್ ಹಾಗೂ ಡೆವೊನ್ ಕಾನ್‌ವೇ ಸ್ಪೋಟಕ ಆರಂಭ ಒದಗಿಸಿಕೊಡುವ ವಿಶ್ವಾಸದಲ್ಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಕೇನ್ ವಿಲಿಯಮ್ಸ್‌, ಗ್ಲೆನ್ ಫಿಲಿಫ್ಸ್‌ ಜತೆಗೆ ಡೇರಲ್ ಮಿಚೆಲ್ ಕೂಡಾ ತಂಡ ಕೂಡಿಕೊಂಡರೆ ನ್ಯೂಜಿಲೆಂಡ್ ತಂಡವು ಮತ್ತಷ್ಟು ಬಲಿಷ್ಠವಾಗಲಿದೆ. ಇನ್ನು ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್, ಟಿಮ್ ಸೌಥಿ ಹಾಗೂ ಲಾಕಿ ಫರ್ಗ್ಯೂಸನ್, ಲಂಕಾ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. 

ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು, ಅಕ್ತರ್ ಭವಿಷ್ಯಕ್ಕೆ ಭಾರತೀಯರ ಆಕ್ರೋಶ!

ಮತ್ತೊಂದೆಡೆ ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಗೆದ್ದರೂ ಬಳಿಕ ಆಸೀಸ್‌ಗೆ ಶರಣಾಗಿದ್ದು ಲಂಕಾಕ್ಕೆ ಹಿನ್ನಡೆಯುಂಟು ಮಾಡಿದ್ದು, ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ನಾಕೌಟ್‌ ಕನಸು ಜೀವಂತವಾಗಿರಲಿದೆ. ಬಲಿಷ್ಠ ನ್ಯೂಜಿಲೆಂಡ್ ಎದುರು ಗೆಲುವು ದಾಖಲಿಸಬೇಕಿದ್ದರೆ, ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಪಥುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಚರಿತ್ ಅಸಲಂಕಾ ಹಾಗೂ ಭನುಕಾ ರಾಜಪಕ್ಸಾ ಹಾಗೂ ದಶುನ್ ಶನಕಾ ತಂಡಕ್ಕೆ ಆಸರೆಯಾಗಬೇಕಿದೆ. ಇನ್ನು ಮಿಸ್ಟ್ರಿ ಸ್ಪಿನ್ನರ್‌ಗಳಾದ ವನಿಂದು ಹಸರಂಗ, ಮಹೀಶ್ ತೀಕ್ಷಣ ಜತೆಗೆ ವೇಗಿಗಳಾದ ಲಹಿರು ಕುಮಾರ, ಚಮಿಕಾ ಕರುಣರತ್ನೆ ಮಾರಕ ದಾಳಿ ಸಂಘಟಿಸಬೇಕಿದೆ.

ಸಂಭಾವ್ಯ ತಂಡಗಳು ಹೀಗಿವೆ:

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್‌ವೇ, ಕೇನ್ ವಿಲಿಯಮ್ಸ್‌(ನಾಯಕ), ಗ್ಲೆನ್ ಫಿಲಿಫ್ಸ್‌, ಡೇರಲ್ ಮಿಚೆಲ್, ಜೇಮ್ಸ್‌ ನೀಶಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಲಾಕಿ ಫರ್ಗ್ಯೂಸನ್, ಟ್ರೆಂಟ್ ಬೌಲ್ಟ್.

ಶ್ರೀಲಂಕಾ: ಪಥುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭನುಕಾ ರಾಜಪಕ್ಸಾ, ದಶುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕ ಕರುಣರತ್ನೆ, ಮಹೀಶ್ ತೀಕ್ಷಣ, ಲಹಿರು ಕುಮಾರ, ಕಸುನ್ ರಜಿತ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಹಾಟ್‌ಸ್ಟಾರ್.

Follow Us:
Download App:
  • android
  • ios