* ಟಿ20 ವಿಶ್ವಕಪ್ ಸೂಪರ್ 12 ಹಂತಕ್ಕೇರಲು ನಮೀಬಿಯಾ ವರ್ಸಸ್ ಐರ್ಲೆಂಡ್ ಫೈಟ್* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಉಭಯ ತಂಡಗಳು* ಹ್ಯಾಟ್ರಿಕ್ ಗೆಲುವಿನ ಕನವರಿಕೆಯಲ್ಲಿದೆ ಶ್ರೀಲಂಕಾ
ಶಾರ್ಜಾ(ಅ.22): ಐಸಿಸಿ ಟಿ20 ವಿಶ್ವಕಪ್ (ICC T20 World Cup)ನ ಅರ್ಹತಾ ಸುತ್ತಿನ ಕೊನೆಯ ದಿನವಾದ ಶುಕ್ರವಾರ ಸೂಪರ್-12 ಸುತ್ತು ಪ್ರವೇಶಿಸುವ 4ನೇ ಹಾಗೂ ಅಂತಿಮ ತಂಡ ಯಾವುದೆಂದು ನಿರ್ಧಾರವಾಗಲಿದೆ. ‘ಎ’ ಗುಂಪಿನಲ್ಲಿ ನಮೀಬಿಯಾ (Namibia) ಹಾಗೂ ಐರ್ಲೆಂಡ್ (Ireland) ನಡುವೆ ಪಂದ್ಯ ನಡೆಯಲಿದ್ದು, ಗೆಲ್ಲುವ ತಂಡ ಶನಿವಾರ ಆರಂಭವಾಗಲಿರುವ ಸೂಪರ್-12ರ ಹಂತಕ್ಕೆ ಅರ್ಹತೆ ಪಡೆಯಲಿದೆ.
ಗುಂಪಿನಿಂದ ಶ್ರೀಲಂಕಾ ಈಗಾಗಲೇ ಪ್ರಧಾನ ಸುತ್ತು ತಲುಪಿದ್ದು, ಲಂಕಾ ವಿರುದ್ಧ ಸೋತು, ನೆದರ್‌ಲೆಂಡ್ಸ್ ವಿರುದ್ಧ ಗೆದ್ದಿರುವ ಈ ಎರಡೂ ತಂಡಗಳು ತಲಾ 2 ಅಂಕಗಳನ್ನು ಗಳಿಸಿವೆ. ನೆಟ್ ರನ್‌ರೇಟ್ ಆಧಾರದಲ್ಲಿ ಐರ್ಲೆಂಡ್ 2ನೇ ಹಾಗೂ ನಮೀಬಿಯಾ 3ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಜಯಗಳಿಸುವ ತಂಡ ಗುಂಪಿನ 2ನೇ ತಂಡವಾಗಿ ಸೂಪರ್-12ರ ಸುತ್ತು ಪ್ರವೇಶಿಸಲಿದೆ.
ಐರ್ಲೆಂಡ್ ತಂಡವು ಪೌಲ್ ಸ್ಟ್ರೈರ್ಲಿಂಗ್, ಕೆವಿನ್ ಒ ಬ್ರಿಯನ್, ಆಂಡ್ರ್ಯೂ ಬಲ್ಬಿರ್ನ್ ಅವರನ್ನು ಬ್ಯಾಟಿಂಗ್‌ನಲ್ಲಿ ನೆಚ್ಚಿಕೊಂಡಿದೆ. ಕಳೆದ ಪಂದ್ಯದಲ್ಲಿ ಶ್ರೀಲಂಕಾ ಎದುರು ಐರ್ಲೆಂಡ್‌ನ ಜೋಶುವಾ ಲಿಟ್ಲ್ 23 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆದಿದ್ದರು. ಮಾರ್ಕ್ ಅಡೀರ್ ಕೊಂಚ ದುಬಾರಿಯಾದರೂ 2 ವಿಕೆಟ್ ಕಬಳಿಸಿ ಮಿಂಚಿದ್ದರು. ಐರ್ಲೆಂಡ್ ತಂಡವು ಸೂಪರ್ 12 ಹಂತಕ್ಕೇರಬೇಕಿದ್ದರೆ ಆಲ್ರೌಂಡ್ ಪ್ರದರ್ಶನ ತೋರಬೇಕಿದೆ.
T20 World Cup ಇಂಡೋ-ಪಾಕ್ ಪಂದ್ಯದ ಜಾಹೀರಾತು: 10 ಸೆಕೆಂಡ್‌ಗೆ 30 ಲಕ್ಷ ರೂ..!
ಶುಕ್ರವಾರ 2ನೇ ಪಂದ್ಯದಲ್ಲಿ ಶ್ರೀಲಂಕಾಗೆ ನೆದರ್‌ಲೆಂಡ್ಸ್ ಎದುರಾಗಲಿದೆ. ಲಂಕಾ ಹ್ಯಾಟ್ರಿಕ್ ಜಯ ಸಾಧಿಸುವ ವಿಶ್ವಾಸದಲ್ಲಿದ್ದರೆ, ನೆದರ್‌ಲೆಂಡ್ಸ್ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳುವ ಒತ್ತಡದಲ್ಲಿದೆ. ಐರ್ಲೆಂಡ್ ವಿರುದ್ದ ಶ್ರೀಲಂಕಾ ತಂಡವು ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಪತುಮ ನಿಶಾಂಕ (61) ಆಲ್ರೌಂಡರ್ ವನಿಂದು ಹಸರಂಗ(71) ಹಾಗೂ ನಾಯಕ ಶನಕಾ(21) ಹೊರತುಪಡಿಸಿ ಉಳಿದ್ಯಾವ ಆಟಗಾರರು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಹೀಗಾಗಿ ಲಂಕಾ ತಂಡವು ಹ್ಯಾಟ್ರಿಕ್ ಗೆಲುವು ದಾಖಲಿಸಬೇಕಿದ್ದರೆ, ಬ್ಯಾಟಿಂಗ್ ಲಯ ಕಂಡುಕೊಳ್ಳಲು ಎದುರು ನೋಡುತ್ತಿದೆ.
T20 World Cup: ಈ 4 ತಂಡಗಳು ಸೆಮಿಫೈನಲ್‌ಗೇರಲಿವೆ ಎಂದ ಬ್ರಾಡ್ ಹಾಗ್..!
ಈಗಾಗಲೇ ಅರ್ಹತಾ ಸುತ್ತಿನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಸೂಪರ್ 12 ಹಂತಕ್ಕೆ ಅರ್ಹತಾ ಪಡೆದಿವೆ. ಇದೀಗ ಐರ್ಲೆಂಡ್ ಹಾಗೂ ನಮೀಬಿಯಾ ತಂಡಗಳ ನಡುವೆ ಗೆಲುವು ದಾಖಲಿಸುವ ತಂಡಗಳು ಸೂಪರ್ 12 ಹಂತಕ್ಕೆ ಪ್ರವೇಶ ಪಡೆಯಲಿದೆ. ಈಗಾಗಲೇ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್, ಪಾಕಿಸ್ತಾನ, ಭಾರತ, ದಕ್ಷಿಣ ಆಫ್ರಿಕಾ, ಆಪ್ಘಾನಿಸ್ತಾನ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ತಂಡಗಳು ನೇರ ಅರ್ಹತೆ ಪಡೆದಿವೆ. ಈ 8 ತಂಡಗಳ ಜತೆಗೆ ಅರ್ಹತಾ ಸುತ್ತಿನ 4 ತಂಡಗಳು ಸೇರಿ ಒಟ್ಟು 12 ತಂಡಗಳು ಸೂಪರ್ 12 ಹಂತದಲ್ಲಿ ಸೆಣಸಾಟ ನಡೆಸಲಿವೆ.
ಪಂದ್ಯ:
ನಮೀಬಿಯಾ-ಐರ್ಲೆಂಡ್, ಮಧ್ಯಾಹ್ನ 3.30ಕ್ಕೆ
ಶ್ರೀಲಂಕಾ-ನೆದರ್‌ಲೆಂಡ್ಸ್, ಸಂಜೆ 7.30ಕ್ಕೆ
