T20 World Cup ಕೇನ್ ವಿಲಿಯಮ್ಸನ್ ಸ್ಪೋಟಕ ಫಿಫ್ಟಿ, ಐರ್ಲೆಂಡ್‌ಗೆ ಕಠಿಣ ಗುರಿ ನೀಡಿದ ನ್ಯೂಜಿಲೆಂಡ್
ಐರ್ಲೆಂಡ್‌ಗೆ ಗೆಲ್ಲಲು ಸವಾಲಿನ ಗುರಿ ನಿಗದಿ ಮಾಡಿದ ನ್ಯೂಜಿಲೆಂಡ್ ಕ್ರಿಕೆಟ್ ತಂಡ
ಆಕರ್ಷಕ ಅರ್ಧಶತಕದ ಮೂಲಕ ಮಿಂಚಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್
ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಗಮನ ಸೆಳೆದ ಜೋಶ್ವಾ ಲಿಟಲ್
ಅಡಿಲೇಡ್(ನ.04): ಕಳೆದ ಕೆಲ ಪಂದ್ಯಗಳಲ್ಲಿ ಮಂದಗತಿಯ ಬ್ಯಾಟಿಂಗ್ ಮೂಲಕ ಟೀಕೆಗೆ ಗುರಿಯಾಗಿದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ನಾಕೌಟ್ ಪಂದ್ಯಗಳು ಹತ್ತಿರವಾಗುತ್ತಿದ್ದಂತೆಯೇ ಮೈಚಳಿಬಿಟ್ಟು ಬ್ಯಾಟಿಂಗ್ ಮಾಡಲಾರಂಭಿಸಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್(61) ಬಾರಿಸಿದ ಸ್ಪೋಟಕ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡವು 6 ವಿಕೆಟ್ ಕಳೆದುಕೊಂಡು 185 ರನ್ ಬಾರಿಸಿದ್ದು, ಐರ್ಲೆಂಡ್ ತಂಡಕ್ಕೆ ಕಠಿಣ ಗುರಿ ನೀಡಿದೆ.
ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ನ್ಯೂಜಿಲೆಂಡ್ ತಂಡಕ್ಕೆ ಡೆವೊನ್ ಕಾನ್‌ವೇ ಹಾಗೂ ಫಿನ್ ಆ್ಯಲೆನ್ ಸ್ಪೋಟಕ ಆರಂಭವನ್ನೇ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 5.5 ಓವರ್‌ಗಳಲ್ಲಿ 52 ರನ್‌ಗಳ ಜತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿ ಕೊಟ್ಟರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಫಿನ್ ಆ್ಯಲೆನ್ 18 ಎಸೆತಗಳಲ್ಲಿ 5 ಬೌಂಡರಿ ಹಾಗು 1 ಸಿಕ್ಸರ್ ಸಹಿತ 32 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಡೆವೊನ್ ಕಾನ್‌ವೇ 28 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಕೇನ್ ವಿಲಿಯಮ್ಸನ್ ಆಕರ್ಷಕ ಬ್ಯಾಟಿಂಗ್: ಕಳೆದ ಪಂದ್ಯದಲ್ಲಿ ಮಂದಗತಿಯ ಬ್ಯಾಟಿಂಗ್ ಮೂಲಕ ಟೀಕೆಗೆ ಗುರಿಯಾಗಿದ್ದ ಕೇನ್ ವಿಲಿಯಮ್ಸನ್, ಇದೀಗ ಐರ್ಲೆಂಡ್ ಎದುರು ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಮಿಂಚಿದರು. ವಿಲಿಯಮ್ಸನ್ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಒಟ್ಟು 35 ಎಸೆತಗಳನ್ನು ಎದುರಿಸಿದ ಕೇನ್ ವಿಲಿಯಮ್ಸನ್ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 61 ರನ್ ಬಾರಿಸಿ ಜೋಶ್ವಾ ಲಿಟಲ್‌ಗೆ ವಿಕೆಟ್ ಒಪ್ಪಿಸಿದರು.
T20 World Cup ಕಿವೀಸ್ ಎದುರು ಟಾಸ್ ಗೆದ್ದ ಐರ್ಲೆಂಡ್ ಬೌಲಿಂಗ್ ಆಯ್ಕೆ
ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಮಿಂಚಿದ ಲಿಟಲ್: ಐರ್ಲೆಂಡ್ ತಂಡದ ಮಾರಕ ವೇಗಿ ಜೋಶ್ವಾ ಲಿಟಲ್, ಮತ್ತೊಮ್ಮೆ ಮಿಂಚಿನ ದಾಳಿ ನಡೆಸುವ ಮೂಲಕ ಆಸರೆಯಾದರು. ಪ್ರಸಕ್ತ ವರ್ಷದ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಸಾಧನೆ ಮಾಡಿರುವ ಜೋಶ್ವಾ ಲಿಟಲ್, 19ನೇ ಓವರ್‌ನಲ್ಲಿ ಸತತ 3 ಎಸೆತಗಳಲ್ಲಿ ಕೇನ್ ವಿಲಿಯಮ್ಸನ್, ಜೇಮ್ಸ್ ನೀಶಮ್ ಹಾಗೂ ಮಿಚೆಲ್ ಸ್ಯಾಂಟ್ನರ್ ವಿಕೆಟ್ ಕಬಳಿಸುವ ಮೂಲಕ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಈ ಮೂಲಕ ಪ್ರಸಕ್ತ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಾರ್ತಿಕ್ ಮೇಯಪ್ಪನ್ ಬಳಿಕ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಎರಡನೇ ಬೌಲರ್ ಎನ್ನುವ ಹಿರಿಮೆಗೆ ಜೋಶ್ವಾ ಲಿಟಲ್ ಪಾತ್ರರಾಗಿದ್ದಾರೆ.
ಇನ್ನು ಗ್ಲೆನ್ ಫಿಲಿಫ್ಸ್ 9 ಎಸೆತಗಳಲ್ಲಿ 17 ರನ್ ನೀಡಿಸಿದರೆ, ಕೊನೆಯಲ್ಲಿ ಡೇರಲ್ ಮಿಚೆಲ್ 21 ಎಸೆತಗಳಲ್ಲಿ 2 ಬೌಂಡರಿ ಸಹಿತ ಅಜೇಯ 31 ರನ್ ಬಾರಿಸುವ ಮೂಲಕ ನ್ಯೂಜಿಲೆಂಡ್ ತಂಡವು 180ರ ಗಡಿ ದಾಟುವಂತೆ ನೋಡಿಕೊಂಡರು.