Asianet Suvarna News Asianet Suvarna News

T20 World Cup Eng vs NZ ಫೈನಲ್‌ ಟಿಕೆಟ್‌ಗೆ ಇಂಗ್ಲೆಂಡ್-ಕಿವೀಸ್‌ ಫೈಟ್

* ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಂದು ಮೊದಲ ಸೆಮಿಫೈನಲ್ ಕಾದಾಟ

* ಅಬುಧಾಭಿಯಲ್ಲಿ ನಡೆಯಲಿದೆ ನ್ಯೂಜಿಲೆಂಡ್-ಇಂಗ್ಲೆಂಡ್ ನಡುವೆ ಹೈವೋಲ್ಟೇಜ್

* ಬಲಿಷ್ಠ ಇಂಗ್ಲೆಂಡ್‌ಗೆ ಶಾಕ್ ನೀಡುತ್ತಾ ನ್ಯೂಜಿಲೆಂಡ್ ಕ್ರಿಕೆಟ್ ತಂಡ

ICC T20 World Cup England take on New Zealand in Semi Final for Final ticket in Abu Dhabi kvn
Author
Abu Dhabi - United Arab Emirates, First Published Nov 10, 2021, 7:38 AM IST

ಅಬುಧಾಬಿ(ನ.10): ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ (ICC T20 World Cup) ಪ್ರವೇಶಿಸಿದ ಇಂಗ್ಲೆಂಡ್‌, ‘ಡಾರ್ಕ್ ಹಾರ್ಸ್‌’ ಎನಿಸಿಕೊಂಡೇ ಭರ್ಜರಿ ಪ್ರದರ್ಶನ ತೋರುತ್ತಿರುವ ನ್ಯೂಜಿಲೆಂಡ್‌ ಬುಧವಾರ ಮೊದಲ ಸೆಮಿಫೈನಲ್‌ನಲ್ಲಿ ಸೆಣಸಲಿವೆ.

ಸೂಪರ್‌-12 ಹಂತದ ಮೊದಲ 4 ಪಂದ್ಯಗಳಲ್ಲಿ ಅಬ್ಬರಿಸಿದ್ದ ಇಂಗ್ಲೆಂಡ್‌, ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲುಂಡಿತ್ತು. ಮತ್ತೊಂದೆಡೆ ನ್ಯೂಜಿಲೆಂಡ್‌ ಮೊದಲ ಪಂದ್ಯದಲ್ಲಿ ಸೋತರೂ, ಬಳಿಕ ಸತತ 4 ಗೆಲುವು ಸಾಧಿಸಿ, ಭಾರತವನ್ನು ಹೊರಹಾಕುವುದರೊಂದಿಗೆ ಸೆಮೀಸ್‌ ಪ್ರವೇಶಿಸಿತು.

2019ರ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್‌ (England Cricket Team) ವಿರುದ್ಧ ಸೆಣಸಿದ್ದ ನ್ಯೂಜಿಲೆಂಡ್‌ (New Zealand Cricket Team) ಬೌಂಡರಿ ನಿಯಮದ ಕಾರಣ ಟ್ರೋಫಿ ಎತ್ತಿಹಿಡಿಯುವ ಅವಕಾಶದಿಂದ ವಂಚಿತಗೊಂಡಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಇದು ಉತ್ತಮ ಅವಕಾಶ.

T20 World cup 2021: ಆಫ್ಘಾನ್ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು, ಸೆಮೀಸ್ ರೇಸ್‌ನಿಂದ ಭಾರತ ಔಟ್!

ಗಾಯಾಳುಗಳ ಸಮಸ್ಯೆ: ಇಂಗ್ಲೆಂಡ್‌ಗೆ ಇಬ್ಬರು ಪ್ರಮುಖ ಆಟಗಾರರ ಅನುಪಸ್ಥಿತಿ ಕಾಡಬಹುದು. ಡೆತ್‌ ಓವರ್‌ ಸ್ಪೆಷಲಿಸ್ಟ್‌ ಆಗಿ ಉತ್ತಮ ಪ್ರದರ್ಶನ ತೋರುತ್ತಿದ್ದ ವೇಗಿ ಟೈಮಲ್‌ ಮಿಲ್ಸ್‌ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ ಜೇಸನ್‌ ರಾಯ್‌ (Jason Roy) ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮಿಲ್ಸ್‌ ಬದಲು ಹಿಂದಿನ ಪಂದ್ಯದಲ್ಲಿ ಆಡಿದ ಮಾರ್ಕ್ ವುಡ್‌ ಅಷ್ಟೊಂದು ಪರಿಣಾಮಕಾರಿ ಎನಿಸಿರಲಿಲ್ಲ. ಇದೇ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ದೊಡ್ಡ ಮೊತ್ತ ಕಲೆಹಾಕಿತ್ತು.

ರಾಯ್‌ ಬದಲು ಸೆಮೀಸ್‌ನಲ್ಲಿ ಜೋಸ್‌ ಬಟ್ಲರ್‌ (Jos Buttler) ಜೊತೆ ಜಾನಿ ಬೇರ್‌ಸ್ಟೋವ್‌ (Jonny Bairstow) ಇನ್ನಿಂಗ್ಸ್‌ ಆರಂಭಿಸಬಹುದು. ಇವರಿಬ್ಬರು ಹೆಚ್ಚಿನ ಜವಾಬ್ದಾರಿ ವಹಿಸಿ ಆಡಬೇಕಾಗುತ್ತೆ. ಮೋಯಿನ್‌ ಅಲಿ ಹಾಗೂ ಆದಿಲ್‌ ರಶೀದ್‌ರ ಸ್ಪಿನ್‌ ಬೌಲಿಂಗ್‌ ನಿರ್ಣಾಯಕ ಪಾತ್ರ ವಹಿಸಲಿದೆ. ಮೋಯಿನ್‌ ಬ್ಯಾಟಿಂಗ್‌ನಲ್ಲೂ ದೊಡ್ಡ ಕೊಡುಗೆ ನೀಡಬೇಕಾಗಬಹುದು.

T20 World Cup 2021: ಸೋಲಿಲ್ಲದ ಸರದಾರನಾಗಿ ಸೆಮೀಸ್ ಪ್ರವೇಶಿಸಿದ ಪಾಕಿಸ್ತಾನ!

ಬೌಲರ್‌ಗಳೇ ಟ್ರಂಪ್‌ ಕಾರ್ಡ್ಸ್: ಮಾರ್ಟಿನ್‌ ಗಪ್ಟಿಲ್‌, ಕೇನ್‌ ವಿಲಿಯಮ್ಸನ್‌, ಡೇವಾನ್‌ ಕಾನ್‌ವೇಯಂತಹ ಗುಣಮಟ್ಟದ ಬ್ಯಾಟ್ಸ್‌ಮನ್‌ಗಳಿದ್ದರೂ ನ್ಯೂಜಿಲೆಂಡ್‌ ಸೆಮೀಸ್‌ಗೇರುವಲ್ಲಿ ಬೌಲರ್‌ಗಳ ಪಾತ್ರವೇ ಹೆಚ್ಚು. ಬಲಿಷ್ಠ ಭಾರತವನ್ನು ಕೇವಲ 110 ರನ್‌ಗೆ ಕಟ್ಟಿಹಾಕಿದ್ದ ಕಿವೀಸ್‌ ಬೌಲರ್‌ಗಳು, ಅಪಾಯಕಾರಿ ಆಫ್ಘಾನಿಸ್ತಾನವನ್ನು 125ಕ್ಕೆ ನಿಯಂತ್ರಿಸಿದ್ದರು. ಟ್ರೆಂಟ್‌ ಬೌಲ್ಟ್‌, ಟಿಮ್‌ ಸೌಥಿ ಮತ್ತೊಮ್ಮೆ ಮಿಂಚಬೇಕಿದೆ. ಸ್ಪಿನ್ನರ್‌ಗಳಾದ ಇಶ್‌ ಸೋಧಿ ಹಾಗೂ ಮಿಚೆಲ್‌ ಸ್ಯಾಂಟ್ನರ್‌ ಮೇಲೆ ನಾಯಕ ವಿಲಿಯಮ್ಸನ್‌ ಹೆಚ್ಚಿನ ನಿರೀಕ್ಷೆ ಇಡಲಿದ್ದಾರೆ. ಮೇಲ್ನೋಟಕ್ಕೆ ಇಂಗ್ಲೆಂಡ್‌ ಗೆಲ್ಲುವ ನೆಚ್ಚಿನ ತಂಡ ಎನಿಸಿದರೂ, ನ್ಯೂಜಿಲೆಂಡ್‌ ತಂಡವನ್ನು ಎಂದಿಗೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎನ್ನುವುದು ಎಲ್ಲಾ ತಂಡಗಳಿಗೂ ತಿಳಿದಿದೆ.

ಟಿ20 ಕ್ರಿಕೆಟ್‌ನಲ್ಲಿ ಇದುವರೆಗೂ ಉಭಯ ತಂಡಗಳು 21 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಇಂಗ್ಲೆಂಡ್ ಕೊಂಚ ಮೇಲುಗೈ ಸಾಧಿಸಿದೆ. ಅಂದರೆ 21 ಪಂದ್ಯಗಳ ಪೈಕಿ 13 ಪಂದ್ಯಗಳಲ್ಲಿ ಇಂಗ್ಲೆಂಡ್ ಗೆಲುವು ದಾಖಲಿಸಿದ್ದರೆ, 7 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಗೆಲುವಿನ ನಗೆ ಬೀರಿದೆ. ಇನ್ನೊಂದು ಪಂದ್ಯದಲ್ಲಿ ಫಲಿತಾಂಶ ಹೊರಬಿದ್ದಿರಲಿಲ್ಲ.

ಪಿಚ್‌ ರಿಪೋರ್ಟ್‌: ಯುಎಇಯ ಮೂರು ತಾಣಗಳ ಪೈಕಿ ಅಬು ಧಾಬಿಯ ಪಿಚ್‌ ಬ್ಯಾಟಿಂಗ್‌ ಸ್ನೇಹಿ ಎನಿಸಿದ್ದು, ದೊಡ್ಡ ಮೊತ್ತ ನಿರೀಕ್ಷಿಸಬಹುದು. ಕಳೆದ 5 ಪಂದ್ಯಗಳಲ್ಲಿ 3ರಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ 189 ರನ್‌ಗಿಂತ ಹೆಚ್ಚು ಕಲೆಹಾಕಿದೆ. ಮಧ್ಯದ ಪಿಚ್‌ನಲ್ಲಿ ಪಂದ್ಯ ನಡೆಯಲಿದ್ದು, ಬ್ಯಾಟ್ಸ್‌ಮನ್‌ಗಳಿಗೆ ಸಣ್ಣ ಬೌಂಡರಿಯ ಲಾಭ ಸಿಗುವುದಿಲ್ಲ. ಸ್ಪಿನ್ನರ್‌ಗಳ ಪಾತ್ರ ನಿರ್ಣಾಯಕವಾಗಬಹುದು.

ಸಂಭವನೀಯ ಆಟಗಾರರ ಪಟ್ಟಿ

ಇಂಗ್ಲೆಂಡ್‌: ಜೋಸ್ ಬಟ್ಲರ್‌, ಜಾನಿ ಬೇರ್‌ಸ್ಟೋವ್‌, ಡೇವಿಡ್ ಮಲಾನ್‌, ಇಯಾನ್ ಮಾರ್ಗನ್‌(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್‌, ಮೋಯಿನ್‌ ಅಲಿ, ಸ್ಯಾಮ್ ಬಿಲ್ಲಿಂಗ್ಸ್‌, ಕ್ರಿಸ್ ವೋಕ್ಸ್‌, ಕ್ರಿಸ್ ಜೋರ್ಡನ್‌, ಆದಿಲ್ ರಶೀದ್‌, ಮಾರ್ಕ್ ವುಡ್‌.

ನ್ಯೂಜಿಲೆಂಡ್‌: ಮಾರ್ಟಿನ್ ಗಪ್ಟಿಲ್‌, ಡೇರಲ್ ಮಿಚೆಲ್‌, ಕೇನ್ ವಿಲಿಯಮ್ಸನ್‌(ನಾಯಕ), ಡೇವಿಡ್ ಕಾನ್‌ವೇ, ಗ್ಲೆನ್‌ ಫಿಲಿಫ್ಸ್‌, ಜೇಮ್ಸ್ ನೀಶಮ್‌, ಮಿಚೆಲ್ ಸ್ಯಾಂಟ್ನರ್‌, ಆ್ಯಡಂ ಮಿಲ್ನೆ, ಟಿಮ್‌ ಸೌಥಿ, ಇಶ್‌ ಸೋಧಿ, ಟ್ರೆಂಟ್‌ ಬೌಲ್ಟ್‌.

ಸ್ಥಳ: ಅಬುಧಾಬಿ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Follow Us:
Download App:
  • android
  • ios