T20 World Cup: 4 ಎಸೆತಕ್ಕೆ 4 ವಿಕೆಟ್, ಐರ್ಲೆಂಡ್ ಎದುರು ಕೇವಲ 106 ರನ್ ಬಾರಿಸಿದ ನೆದರ್‌ಲೆಂಡ್ಸ್..!
* ಐರ್ಲೆಂಡ್ ಎದುರು ನೆದರ್‌ಲೆಂಡ್ಸ್ 106 ರನ್‌ಗಳಿಗೆ ಆಲೌಟ್
* 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿದ ಐರ್ಲೆಂಡ್ ವೇಗಿ ಕರ್ಟಿಸ್ ಕ್ಯಾಂಫೇರ್
* ಐರ್ಲೆಂಡ್ ಪರ ಟಿ20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ಬೌಲರ್
ಅಬುಧಾಬಿ(ಅ.18): ವೇಗದ ಬೌಲರ್ ಕರ್ಟಿಸ್ (Curtis Campher) ಕ್ಯಾಂಫೇರ್ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸುವ ಮೂಲಕ ನೆದರ್‌ಲೆಂಡ್ಸ್ (Netherlands Cricket Team) ತಂಡವನ್ನು ಕೇವಲ 106 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಐರ್ಲೆಂಡ್ (Ireland Cricket Team) ತಂಡ ಯಶಸ್ವಿಯಾಗಿದೆ. ಇದರೊಂದಿಗೆ 2021ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಹ್ಯಾಟ್ರಿಕ್ ದಾಖಲಾಗಿದೆ.
ಟಾಸ್ ಗೆದ್ದ ನೆದರ್‌ಲೆಂಡ್ಸ್ ತಂಡದ ನಾಯಕ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ನೆದರ್‌ಲೆಂಡ್ಸ್ ತಂಡವು ಮೊದಲ ಓವರ್‌ನಲ್ಲೇ ಆರಂಭಿಕ ಬ್ಯಾಟ್ಸ್‌ಮನ್ ಬೆನ್ ಕೋಪರ್ ವಿಕೆಟ್ ಕಳೆದುಕೊಂಡಿತು. ಇಲ್ಲದ ರನ್ ಕದಿಯಲು ಹೋಗಿ ಕೂಪರ್ ಪೆವಿಲಿಯನ್ ಸೇರಬೇಕಾಯಿತು. ಇನ್ನು ಲೀಡೆ 7 ರನ್ ಬಾರಿಸಿ ಪೆವಿಲಿಯನ್ ಸೇರಿದರು.
T20 World Cup: ಶುಭಾರಂಭದ ನಿರೀಕ್ಷೆಯಲ್ಲಿ ಐರ್ಲೆಂಡ್, ಶ್ರೀಲಂಕಾ..!
4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿ ಕರ್ಟಿಸ್ ಕ್ಯಾಂಫೇರ್: ನೆದರ್‌ಲೆಂಡ್ಸ್ ತಂಡವು ಆರಂಭಿಕ ಆಘಾತದ ಹೊರತಾಗಿಯೂ 9 ಓವರ್ ಅಂತ್ಯದ ವೇಳೆಗೆ ಕೇವಲ 2 ವಿಕೆಟ್ ಕಳೆದು 50 ರನ್ ಕಲೆಹಾಕಿತ್ತು. ಈ ವೇಳೆ ತಮ್ಮ ಕೂಟದ ಎರಡನೇ ಓವರ್ ಬೌಲಿಂಗ್ ಮಾಡಿದ ಕರ್ಟಿಸ್ ಕ್ಯಾಂಫೇರ್ ಮಾರಕ ದಾಳಿ ನಡೆಸುವ ಮೂಲಕ ಒಂದೇ ಓವರ್‌ನಲ್ಲಿ ಸತತ 4 ವಿಕೆಟ್ ಕಬಳಿಸಿ ನೆದರ್‌ಲೆಂಡ್ಸ್ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಕಾಲಿನ್ ಅಕೇರ್‌ಮನ್, ರೆಯಾನ್ ಡೆಸ್ಕೆಟ್, ಸ್ಕಾಟ್ ಎಡ್ವರ್ಡ್ಸ್ ಹಾಗೂ ವ್ಯಾನ್ ಡರ್ ಮೆರ್ವೆ ಅವರನ್ನು ಸತತ 4 ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಮಿಂಚಿನ ಪ್ರದರ್ಶನ ತೋರಿದರು. ಇದರೊಂದಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಐರ್ಲೆಂಡ್‌ನ ಮೊದಲ ಬೌಲರ್ ಎನ್ನುವ ಕೀರ್ತಿಗೆ 22 ವರ್ಷದ ಕರ್ಟಿಸ್ ಕ್ಯಾಂಫೇರ್ ಪಾತ್ರರಾದರು.
T20 World Cup: ಐರ್ಲೆಂಡ್ ಎದುರು ಟಾಸ್ ಗೆದ್ದ ನೆದರ್‌ಲೆಂಡ್ಸ್ ಬ್ಯಾಟಿಂಗ್ ಆಯ್ಕೆ
ಇನ್ನು ಟಿ20 ಕ್ರಿಕೆಟ್‌ನಲ್ಲಿ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎನ್ನುವ ಕೀರ್ತಿಗೂ ಕರ್ಟಿಸ್ ಕ್ಯಾಂಫೇರ್ ಪಾತ್ರರಾಗಿದ್ದಾರೆ. ಈ ಮೊದಲು ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ ಹಾಗೂ ಆಪ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿದ್ದರು.
ಮ್ಯಾಕ್ಸ್ ಓಡೌಡ್ ಏಕಾಂಗಿ ಹೋರಾಟ: ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೆ, ಮತ್ತೊಂದು ತುದಿಯಲ್ಲಿ ನೆದರ್‌ಲೆಂಡ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಕ್ಸ್ ಓಡೌಡ್ ಸಮಯೋಚಿತ ಅರ್ಧಶತಕ ಬಾರಿಸುವ ಮೂಲಕ ತಂಡ ಮೂರಂಕಿ ಮೊತ್ತ ದಾಖಲಿಸಲು ನೆರವಾದರು. ಒಟ್ಟು 47 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್ ಓಡೌಡ್ 7 ಬೌಂಡರಿ ಸಹಿತ 51 ರನ್ ಬಾರಿಸಿ ಏಳನೇಯವರಾಗಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ನಾಯಕ ಸೀಲರ್ 21 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಐರ್ಲೆಂಡ್ ತಂಡದ ನಾಲ್ವರು ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದರೆ, ಕೇವಲ ನಾಲ್ವರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾದರು.