T20 World Cup: ಟೀಂ ಇಂಡಿಯಾ ಎದುರು ಟಾಸ್ ಗೆದ್ದ ಬಾಂಗ್ಲಾ ಬೌಲಿಂಗ್ ಆಯ್ಕೆ
ಅಡಿಲೇಡ್ ಮೈದಾನದಲ್ಲಿ ಬಾಂಗ್ಲಾದೇಶ-ಭಾರತ ಮುಖಾಮುಖಿ
ಟಾಸ್ ಗೆದ್ದ ಬಾಂಗ್ಲಾ ನಾಯಕ ಮೊದಲು ಬೌಲಿಂಗ್ ಆಯ್ಕೆ
ಉಭಯ ತಂಡಗಳಲ್ಲೂ ಒಂದು ಮಹತ್ವದ ಬದಲಾವಣೆ
ಅಡಿಲೇಡ್(ನ.02): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 35ನೇ ಪಂದ್ಯದಲ್ಲಿಂದು ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಸೂಪರ್ 12 ಹಂತದ ಗ್ರೂಪ್ 2 ಹಂತದಿಂದ ಸೆಮೀಸ್ ಪ್ರವೇಶಿಸುವ ದೃಷ್ಟಿಯಿಂದ ಭಾರತದ ಪಾಲಿಗೆ ಈ ಪಂದ್ಯ ಸಾಕಷ್ಟು ಮಹತ್ವದ್ದೆನಿಸಿದೆ.
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಈ ಮಹತ್ವದ ಪಂದ್ಯಕ್ಕೆ ಇಲ್ಲಿನ ಅಡಿಲೇಡ್ ಓವಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಇನ್ನು ಬಾಂಗ್ಲಾದೇಶ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಸೌಮ್ಯ ಸರ್ಕಾರ್ ಬದಲಿಗೆ ಶೌರಿಫುಲ್ ಇಸ್ಲಾಂ ತಂಡ ಕೂಡಿಕೊಂಡಿದ್ದಾರೆ. ಇನ್ನು ಭಾರತ ತಂಡದಲ್ಲಿ ನಿರೀಕ್ಷೆಯಂತೆಯೇ ಒಂದು ಬದಲಾವಣೆ ಮಾಡಲಾಗಿದ್ದು ದೀಪಕ್ ಹೂಡಾ ಬದಲಿಗೆ ಅಕ್ಷರ್ ಪಟೇಲ್ ತಂಡ ಕೂಡಿಕೊಂಡಿದ್ದಾರೆ.
ಸೂರ್ಯಕುಮಾರ್ ಯಾದವ್ ಭೀತಿಯಲ್ಲಿ ಬಾಂಗ್ಲಾ: ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ಈಗಾಗಲೇ ಕಳೆದೆರಡು ಪಂದ್ಯಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಮಿಂಚಿದ್ದು, ಇದೀಗ ಹ್ಯಾಟ್ರಿಕ್ ಅರ್ಧಶತಕ ಚಚ್ಚುವ ನಿರೀಕ್ಷೆಯಲ್ಲಿದ್ದಾರೆ. ಚೆಂಡನ್ನು ಬೌಂಡರಿಯ ಎಲ್ಲಾ ಮೂಲೆಗಳಿಗೆ ಅಟ್ಟುವ ಕ್ಷಮತೆ ಹೊಂದಿರುವ ಸೂರ್ಯ ಅವರನ್ನು ಕಟ್ಟಿಹಾಕುವುದು ಬಾಂಗ್ಲಾದೇಶ ಬೌಲರ್‌ಗಳಿಗೆ ಸವಾಲಾಗುವ ಸಾಧ್ಯತೆಯಿದೆ.
ನಾವು ವಿಶ್ವಕಪ್ ಗೆಲ್ಲಲು ಬಂದಿಲ್ಲ, ಆದರೆ..? ಅಚ್ಚರಿಯ ಹೇಳಿಕೆ ನೀಡಿ ಟ್ರೋಲ್ ಆದ ಶಕೀಬ್ ಅಲ್ ಹಸನ್!
ವಿರಾಟ್ ಕೊಹ್ಲಿ ಪಾಲಿಗೆ ಅದೃಷ್ಟದ ಸ್ಥಾನ: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಸದ್ಯ ಅದ್ಭುತ ಫಾರ್ಮ್‌ನಲ್ಲಿದ್ದು, ಅಡಿಲೇಡ್ ಓವಲ್ ಮೈದಾನದಲ್ಲಿಯೂ ಕೊಹ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಈ ಮೈದಾನದಲ್ಲಿ ವಿರಾಟ್ ಕೊಹ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ 5 ಶತಕ ಸಿಡಿಸಿದ್ದಾರೆ. ಇನ್ನು ಈ ಮೈದಾನದಲ್ಲಿ ಒಮ್ಮೆ ಮಾತ್ರ ವಿರಾಟ್ ಕೊಹ್ಲಿ ಟಿ20 ಪಂದ್ಯವನ್ನಾಡಿದ್ದು, ಆ ಪಂದ್ಯದಲ್ಲಿ ಅಜೇಯ 90 ರನ್ ಬಾರಿಸಿದ್ದರು.
ಸದ್ಯ ಸೂಪರ್ 12 ಹಂತದ ಗ್ರೂಪ್ 2ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 3 ಪಂದ್ಯಗಳನ್ನಾಡಿ 2 ಗೆಲುವು ಹಾಗೂ ಒಂದು ಸೋಲಿನೊಂದಿಗೆ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಈ ಪಂದ್ಯವನ್ನು ಜಯಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿದೆ. ಇನ್ನು ಬಾಂಗ್ಲಾದೇಶ ತಂಡವು ಕೂಡಾ ಮೂರು ಪಂದ್ಯಗಳನ್ನಾಡಿ 2 ಗೆಲುವು ಹಾಗೂ ಒಂದು ಸೋಲಿನೊಂದಿಗೆ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಭಾರತದ ಎದುರು ಅಚ್ಚರಿಯ ಫಲಿತಾಂಶವನ್ನು ಎದುರು ನೋಡುತ್ತಿದೆ.
ತಂಡಗಳು ಹೀಗಿವೆ ನೋಡಿ
ಭಾರತ: ಕೆ ಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಅಶ್‌ರ್‍ದೀಪ್ ಸಿಂಗ್.
ಬಾಂಗ್ಲಾ: ನಜ್ಮುಲ್ ಹುಸೈನ್ ಶಾಂಟೋ, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್(ನಾಯಕ), ಅಫೀಫ್ ಹೊಸೈನ್, ನುರುಲ್ ಹಸನ್, ಮೊಸಾದೆಕ್, ಯಾಸಿರ್, ಟಸ್ಕಿನ್ ಅಹಮ್ಮದ್, ಮುಸ್ತಾಫಿಜುರ್, ಹಸನ್, ಶೌರಿಫುಲ್ ಹೊಸೈನ್
ಪಂದ್ಯ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಚ್
ಅಡಿಲೇಡ್ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಹೆಚ್ಚು ಸಹಕಾರಿಯಾಗಿರಲಿದೆ. ಇಲ್ಲಿ ಮೊದಲ ಇನ್ನಿಂಗ್‌್ಸನ ಸರಾಸರಿ ಮೊತ್ತ 170 ರನ್. ಚೇಸ್ ಮಾಡುವ ತಂಡಕ್ಕೆ ಅನುಕೂಲ ಹೆಚ್ಚು ಅನುಕೂಲವಾಗುವ ಸಾಧ್ಯತೆಯಿದೆ.