T20 World Cup: ಜಿಂಬಾಬ್ವೆ ಎದುರು ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ, ಒಂದೊಂದು ಬದಲಾವಣೆ..!
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಜಿಂಬಾಬ್ವೆ-ಬಾಂಗ್ಲಾದೇಶ ಫೈಟ್
ಟಾಸ್ ಗೆದ್ದ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ಕೆ
ಉಭಯ ತಂಡಗಳಲ್ಲೂ ತಲಾ ಒಂದೊಂದು ಬದಲಾವಣೆ
ಬ್ರಿಸ್ಬೇನ್(ಅ.30): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 28ನೇ ಪಂದ್ಯದಲ್ಲಿಂದು ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಸೆಮೀಸ್ ಪ್ರವೇಶಿಸುವ ನಿಟ್ಟಿನಲ್ಲಿ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದ್ದು, ತಲಾ ಒಂದೊಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿವೆ.
ಸೂಪರ್ 12 ಹಂತದ ಗ್ರೂಪ್ 2 ಹಂತದ ಕಾದಾಟದಲ್ಲಿಂದು ಗೆಲುವಿಗಾಗಿ ಜಿಂಬಾಬ್ವೆ ಹಾಗೂ ಬಾಂಗ್ಲಾದೇಶ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯಕ್ಕೆ ಇಲ್ಲಿನ ಗಾಬಾ ಮೈದಾನ ಆತಿಥ್ಯವನ್ನು ವಹಿಸಿದೆ. ಬಾಂಗ್ಲಾದೇಶ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಲಾಗಿದ್ದು, ಮೆಹದಿ ಹಸನ್ ಬದಲಿಗೆ ಯಾಸಿರ್ ಅಲಿ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ಜಿಂಬಾಬ್ವೆ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದ್ದು, ಲೂಕ್ ಜೋಂಗ್ವೆ ಬದಲಿಗೆ ತೆಂಡೈ ಚಟಾರಾ ತಂಡ ಕೂಡಿಕೊಂಡಿದ್ದಾರೆ.
ಹೋಬರ್ಟ್‌ನಲ್ಲಿ ನಡೆದಿದ್ದ ಸೂಪರ್ 12 ಹಂತದ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ತಂಡವು, ನೆದರ್‌ಲೆಂಡ್ಸ್ ಎದುರು ಪ್ರಯಾಸದ ಗೆಲುವು ದಾಖಲಿಸಿತ್ತು. ಆದರೆ ದಕ್ಷಿಣ ಆಫ್ರಿಕಾ ಎದುರು ಹೀನಾಯ ಸೋಲು ಅನುಭವಿಸುವ ಮೂಲಕ ಬಾಂಗ್ಲಾದೇಶ ತಂಡವು ಕೊಂಚ ಆತಂಕಕ್ಕೆ ಒಳಗಾಗಿದೆ. ಅದರಲ್ಲೂ ಬಾಂಗ್ಲಾದೇಶ ಬ್ಯಾಟರ್‌ಗಳು ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಯನೀಯ ವೈಫಲ್ಯ ಅನುಭವಿಸುತ್ತಿದ್ದು, ತಂಡದ ಪರ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ 38 ರನ್ ಎನಿಸಿಕೊಂಡಿದೆ. ಜಿಂಬಾಬ್ವೆ ಎದುರು ಜಯ ದಾಖಲಿಸಬೇಕಿದ್ದರೆ, ಬಾಂಗ್ಲಾದೇಶ ತಂಡದ ಬ್ಯಾಟರ್‌ಗಳಾದ ಲಿಟನ್ ದಾಸ್, ಸೌಮ್ಯ ಸರ್ಕಾರ್, ಶಕೀಬ್ ಅಲ್ ಹಸನ್ ಅವರಂತಹ ಬ್ಯಾಟರ್‌ಗಳು ಮೈಚಳಿ ಬಿಟ್ಟು ಬ್ಯಾಟ್ ಬೀಸಬೇಕಿದೆ.
T20 World Cup: ದಕ್ಷಿಣ ಆಫ್ರಿಕಾ ವಿರುದ್ದ ರಾಹುಲ್ ಬದಲು ಪಂತ್ ಇನಿಂಗ್ಸ್ ಆರಂಭಿಸ್ತಾರಾ?
ಇನ್ನೊಂದೆಡೆ ಜಿಂಬಾಬ್ವೆ ತಂಡವು ಸೂಪರ್ 12 ಹಂತದಲ್ಲಿ ಈಗಾಗಲೇ ಬಲಿಷ್ಠ ತಂಡಗಳಾದ ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ವಿರುದ್ದ ಸೆಣಸಾಡಿದ್ದೂ ಒಮ್ಮೆಯೂ ಸೋಲು ಅನುಭವಿಸಿಲ್ಲ. ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಉಭಯ ತಂಡಗಳು ತಲಾ ಒಂದೊಂದು ಅಂಕ ಗಳಿಸಿಕೊಂಡಿದ್ದವು. ಇನ್ನು ಕಳೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ರೋಚಕ ಗೆಲುವು ಸಾಧಿಸುವ ಮೂಲಕ ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇದೀಗ ಬಾಂಗ್ಲಾದೇಶ ಎದುರು ದಿಟ್ಟ ಪ್ರದರ್ಶನ ತೋರುವ ಮೂಲಕ ಸೆಮೀಸ್‌ನತ್ತ ದಾಪುಗಾಲಿಡಲು ಜಿಂಬಾಬ್ವೆ ತಂಡವು ಹಾತೊರೆಯುತ್ತಿದೆ.
ತಂಡಗಳು ಹೀಗಿವೆ ನೋಡಿ
ಜಿಂಬಾಬ್ವೆ:
ವೆಸ್ಲೆ ಮದೆವೆರೆ, ಕ್ರೇಗ್ ಎರ್ವಿನ್(ನಾಯಕ), ಸೀನ್ ವಿಲಿಯಮ್ಸ್, ಸಿಕಂದರ್ ರಾಜಾ, ರೇಗಿಸ್ ಚಕಾಬ್ವಾ(ವಿಕೆಟ್ ಕೀಪರ್), ಮಿಲ್ಟನ್ ಶುಂಬಾ, ರೆಯಾನ್ ಬರ್ಲ್, ತೆಂಡೈ ಚಟಾರಾ, ರಿಚರ್ಡ್ ಗರಾವ, ಬ್ರಾಡ್ ಇವಾನ್ಸ್, ಬ್ಲೆಸ್ಸಿಂಗ್ ಮುಜರಬಾನಿ.
ಬಾಂಗ್ಲಾದೇಶ:
ನಜ್ಮುಲ್ ಹೊಸೈನ್ ಶಾಂಟೋ, ಸೌಮ್ಯ ಸರ್ಕಾರ್, ಲಿಟನ್ ದಾಸ್, ಶಕೀಬ್ ಅಲ್ ಹಸನ್(ನಾಯಕ), ಅಫಿಫ್ ಹೊಸೈನ್, ಯಾಸಿರ್ ಅಲಿ, ನೂರುಲ್ ಹಸನ್(ವಿಕೆಟ್ ಕೀಪರ್), ಮೊಸದ್ದೆಕ್ ಹೊಸೈನ್, ಮುಷ್ತಾಫಿಜುರ್ ರೆಹಮಾನ್, ಹಸನ್ ಮೆಹಮೂದ್, ಟಸ್ಕಿನ್ ಅಹಮ್ಮದ್.