Asianet Suvarna News Asianet Suvarna News

T20 World Cup: ಶಾಹೀನ್ ಅಫ್ರಿದಿ ಮಾರಕ ದಾಳಿ, ಪಾಕ್‌ಗೆ ಸೆಮೀಸ್‌ಗೇರಲು ಸಾಧಾರಣ ಗುರಿ..!

ಅಡಿಲೇಡ್‌ ಓವಲ್ ಮೈದಾನದಲ್ಲಿ ಬಾಂಗ್ಲಾದೇಶ-ಪಾಕಿಸ್ತಾನ ನಡುವೆ ಫೈಟ್
ಮೊದಲು ಬ್ಯಾಟ್ ಮಾಡಿ ಕೇವಲ 127 ರನ್ ಕಲೆಹಾಕಿದ ಬಾಂಗ್ಲಾದೇಶ
ಪಾಕಿಸ್ತಾನ ಸೆಮೀಸ್‌ಗೇರಲು ಕೇವಲ 128 ರನ್ ಗುರಿ

ICC T20 World Cup Bangladesh set 128 runs target to Pakistan kvn
Author
First Published Nov 6, 2022, 11:27 AM IST

ಅಡಿಲೇಡ್(ನ.06): ನಜ್ಮುಲ್ ಹೊಸೈನ್ ಶಾಂಟೋ ಬಾರಿಸಿದ ಆಕರ್ಷಕ ಅರ್ಧಶತಕದ ಹೊರತಾಗಿಯೂ ಶಾಹಿನ್ ಅಫ್ರಿದಿ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡವು ನಿಗದಿತ 20 ಓವರ್‌ಗಳಲ್ಲಿ  8 ವಿಕೆಟ್ ಕಳೆದುಕೊಂಡು ಕೇವಲ 127 ರನ್‌ಗಳನ್ನು ಕಲೆಹಾಕಿದ್ದು, ಪಾಕಿಸ್ತಾನ ತಂಡಕ್ಕೆ ಸಾಧಾರಣ ಗುರಿ ನೀಡಿದೆ. ಸೆಮೀಸ್‌ ಪ್ರವೇಶಿಸುವ ದೃಷ್ಠಿಯಿಂದ ಉಭಯ ತಂಡಗಳ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ.

ಇಲ್ಲಿನ ಅಡಿಲೇಡ್ ಓವಲ್‌ ಮೈದಾನದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್‌ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಕಳೆದ ಪಂದ್ಯದಲ್ಲಿ ಭಾರತ ವಿರುದ್ದ ಸ್ಪೋಟಕ ಅರ್ಧಶತಕ ಚಚ್ಚಿದ್ದ ಲಿಟನ್ ದಾಸ್‌, ಕೇವಲ 10 ರನ್ ಬಾರಿಸಿ ಶಾಹೀನ್‌ ಅಫ್ರಿದಿ ಬೌಲಿಂಗ್‌ನಲ್ಲಿ ಶಾನ್ ಮಸೂದ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ನಜ್ಮುಲ್‌ ಹೊಸೈನ್ ಶಾಂಟೋ ಹಾಗೂ ಸೌಮ್ಯ ಸರ್ಕಾರ್ ಎರಡನೇ ವಿಕೆಟ್‌ಗೆ 52 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸೌಮ್ಯ ಸರ್ಕಾರ್ 17 ಎಸೆತಗಳಲ್ಲಿ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೇ, ಮರು ಎಸೆತದಲ್ಲೇ ಶಕೀಬ್ ಅಲ್ ಹಸನ್ ಕೂಡಾ ಶಾದಾಬ್‌ ಖಾನ್‌ಗೆ ವಿಕೆಟ್ ಒಪ್ಪಿಸಿದರು.

ನಜ್ಮುಲ್ ಹೊಸೈನ್ ಏಕಾಂಗಿ ಹೋರಾಟ: ಬಾಂಗ್ಲಾದೇಶದ ಆರಂಭಿಕ ಬ್ಯಾಟರ್ ನಜ್ಮುಲ್ ಹೊಸೈನ್ ಶಾಂಟೋ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ಶಾಂಟೋ ಕೇವಲ 48 ಎಸೆತಗಳಲ್ಲಿ 7 ಬೌಂಡರಿ ಸಹಿತ 54 ರನ್ ಬಾರಿಸಿ, ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಅಫಿಫ್ ಹೊಸೈನ್ ಅಜೇಯ 24 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡಿದರು.

T20 World Cup: ಇಂದು 3 ಪಂದ್ಯ, 4 ತಂಡಗಳ ಭವಿಷ್ಯ ನಿರ್ಧಾರ..!

ಮಾರಕ ದಾಳಿ ನಡೆಸಿದ ಶಾಹೀನ್ ಅಫ್ರಿದಿ: ಕಳೆದ ಕೆಲ ಪಂದ್ಯಗಳಲ್ಲಿ ಬೌಲಿಂಗ್ ಮೊನಚು ಕಳೆದುಕೊಂಡಿದ್ದ ಎಡಗೈ ವೇಗಿ ಶಾಹೀನ್ ಅಫ್ರಿದಿ, ಮಹತ್ವದ ಪಂದ್ಯದಲ್ಲಿ ಮಾರಕ ದಾಳಿ ನಡೆಸುವ ಮೂಲಕ ಬಾಂಗ್ಲಾದೇಶ ತಂಡವನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಶಾಹೀನ್ ಅಫ್ರಿದಿ 4 ಓವರ್ ಬೌಲಿಂಗ್ ಮಾಡಿ ಕೇವಲ 22 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇನ್ನು ಶಾದಾಬ್ ಖಾನ್ 2, ಹ್ಯಾರಿಸ್ ರೌಫ್ ಮತ್ತು ಇಫ್ತಿಕಾರ್ ಅಹಮ್ಮದ್ ತಲಾ ಒಂದೊಂದು ವಿಕೆಟ್ ಕಬಳಿಸುವ ಮೂಲಕ ಉತ್ತಮ ಸಾಥ್ ನೀಡಿದರು.
 

Follow Us:
Download App:
  • android
  • ios