* ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಆಸ್ಟ್ರೇಲಿಯಾ* ದಕ್ಷಿಣ ಆಫ್ರಿಕಾ ಎದುರು 5 ವಿಕೆಟ್‌ಗಳ ಜಯ ಸಾಧಿಸಿದ ಆಸೀಸ್‌* ಅಲ್ಪ ಮೊತ್ತ ದಾಖಲಿಸಿಯೂ ಪ್ರಬಲ ಪೈಪೋಟಿ ನೀಡಿದ ಆಫ್ರಿಕಾ

ಅಬುಧಾಬಿ(ಅ.23): ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯ ಸೂಪರ್ 12 ಹಂತದ ಉದ್ಘಾಟನಾ ಪಂದ್ಯ ಸಾಕಷ್ಟು ರೋಚಕ ಕಾದಾಟಕ್ಕೆ ಸಾಕ್ಷಿಯಾಯಿತು. ದಕ್ಷಿಣ ಆಫ್ರಿಕಾ (South Africa Cricket) ನೀಡಿದ್ದ 119 ರನ್‌ಗಳ ಸಾದಾರಣ ಗುರಿಯನ್ನು ಆಸ್ಟ್ರೇಲಿಯಾ 2 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ

ದಕ್ಷಿಣ ಆಫ್ರಿಕಾ ನೀಡಿದ್ದ 119 ರನ್‌ಗಳ ಸಾದಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ (Australia Cricket Team) ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆನ್ರಿಚ್ ನೊಕಿಯೆ ಬೌಲಿಂಗ್‌ನಲ್ಲಿ ಆ್ಯರೋನ್ ಫಿಂಚ್‌ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇನ್ನು ಮೂರು ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಡೇವಿಡ್ ವಾರ್ನರ್ (David Warner) ಅವರನ್ನು ಕಗಿಸೋ ರಬಾಡ ಪೆವಿಲಿಯನ್ನಿಗಟ್ಟಿದರು. ಇನ್ನು ಮಿಚೆಲ್ ಮಾರ್ಷ್ ಆಟ ಕೇವಲ 11 ರನ್‌ಗಳಿಗೆ ಸೀಮಿತವಾಯಿತು.

Scroll to load tweet…

ಆಸರೆಯಾದ ಮ್ಯಾಕ್ಸ್‌ವೆಲ್‌-ಸ್ಟೀವ್ ಸ್ಮಿತ್: ಒಂದು ಹಂತದಲ್ಲಿ 8 ಓವರ್ ಅಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 38 ರನ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾ ತಂಡಕ್ಕೆ 4ನೇ ವಿಕೆಟ್‌ಗೆ ಅನುಭವಿ ಆಟಗಾರರಾದ ಸ್ಟೀವ್ ಸ್ಮಿತ್ (Steve Smith) ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್ (Glenn Maxwell) ಆಸರೆಯಾದರು. ಈ ಜೋಡಿ 42 ರನ್‌ಗಳ ಜತೆಯಾಟವಾಡಿ ತಂಡವನ್ನು ಆತಂಕದಿಂದ ಪಾರು ಮಾಡಿತು. ಸ್ಟೀವ್ ಸ್ಮಿತ್ 34 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 35 ರನ್ ಬಾರಿಸಿದರು. ಬಳಿಕ ಬೌಂಡರಿ ಬಾರಿಸುವ ಯತ್ನದಲ್ಲಿ ಏಯ್ಡನ್ ಮಾರ್ಕ್‌ರಮ್ ಹಿಡಿದ ಅದ್ಭುತ ಕ್ಯಾಚ್‌ಗೆ ಸ್ಮಿತ್ ಪೆವಿಲಿಯನ್ ಸೇರಬೇಕಾಯಿತು.

T20 World Cup: ಆಸೀಸ್ ಮಾರಕ ದಾಳಿ, ಆಫ್ರಿಕಾ ಎದುರು ಗೆಲ್ಲಲು 119 ರನ್‌ ಗುರಿ

ಇದರ ಬೆನ್ನಲ್ಲೇ 18 ರನ್‌ ಬಾರಿಸಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್ ರಿವರ್ಸ್‌ ಸ್ವೀಪ್ ಮಾಡುವ ಯತ್ನದಲ್ಲಿ ಶಂಸಿ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಈ ವೇಳೆ 6ನೇ ವಿಕೆಟ್‌ಗೆ ಜತೆಯಾದ ಮಾರ್ಕಸ್‌ ಸ್ಟೋಯ್ನಿಸ್ ಹಾಗೂ ಮ್ಯಾಥ್ಯೂ ವೇಡ್ ಜೋಡಿಗೆ ತಂಡವನ್ನು ಗೆಲುವಿನ ದಡ ಸೇರಿಸಲು ಇನ್ನೂ 38 ರನ್‌ಗಳ ಅಗತ್ಯವಿತ್ತು. ಕೊನೆಯಲ್ಲಿ ಸ್ಟೋನಿಸ್ 16 ಎಸೆತಗಳಲ್ಲಿ 24 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಸ್ಟೋನಿಸ್‌ಗೆ ವಿಕೆಟ್‌ ಕೀಪಿಂಗ್ ಬ್ಯಾಟರ್ ಮ್ಯಾಥ್ಯೂ ವೇಡ್ 15 ರನ್ ಬಾರಿಸಿ ಉತ್ತಮ ಸಾಥ್ ನೀಡಿದರು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲಿಳಿದ ದಕ್ಷಿಣ ಆಫ್ರಿಕಾ ತಂಡವು ಆಸೀಸ್‌ ದಾಳಿಗೆ ತತ್ತರಿಸಿ ಹೋಯಿತು. ದಕ್ಷಿಣ ಆಫ್ರಿಕಾ ಪವರ್‌ ಪ್ಲೇನಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ತಂಡ 23 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದ್ದರು. ಏಯ್ಡನ್‌ ಮಾರ್ಕ್‌ರಮ್‌ ಸಮಯೋಚಿತ 40 ರನ್‌ ಬಾರಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಕೊನೆಯಲ್ಲಿ ಕಗಿಸೋ ರಬಾಡ ಅಜೇಯ 19 ರನ್ ಬಾರಿಸಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ದಕ್ಷಿಣ ಆಫ್ರಿಕಾದ ಆರು ಬ್ಯಾಟರ್‌ಗಳು ಒಂದಂಕಿ ಮೊತ್ತ ದಾಖಲಿಸಿದರು.

ಸಂಕ್ಷಿಪ್ತ ಸ್ಕೋರ್

ದಕ್ಷಿಣ ಆಫ್ರಿಕಾ: 118/9
ಏಯ್ಡನ್ ಮಾರ್ಕ್‌ರಮ್‌: 40
ಜೋಶ್ ಹೇಜಲ್‌ವುಡ್: 19/2

ಆಸ್ಟ್ರೇಲಿಯಾ: 121/5

ಸ್ಟೀವ್ ಸ್ಮಿತ್: 35

ನೊಕಿಯೆ: 21/2