* ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ ಕಾದಾಟಕ್ಕೆ ಕ್ಷಣಗಣನೆ ಆರಂಭ* ದುಬೈ ಮೈದಾನದಲ್ಲಿಂದು ಆಸೀಸ್‌-ಕಿವೀಸ್‌ ಸೆಣಸಾಟ* ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಕನವರಿಕೆಯಲ್ಲಿವೆ ಉಭಯ ತಂಡಗಳು

ದುಬೈ(ನ.14): ಉದ್ವೇಗ, ಆಕ್ರಮಣಕಾರಿ ಗುಣಗಳಿಂದ ಕೂಡಿರುವ ಆಸ್ಪ್ರೇಲಿಯಾ ಭಾನುವಾರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ (T20 World Cup Final) ಜಾಣ್ಮೆ, ತಂತ್ರಗಾರಿಕೆಯಿಂದಲೇ ಮುನ್ನುಗ್ಗುತ್ತಿರುವ ನ್ಯೂಜಿಲೆಂಡ್‌ ವಿರುದ್ಧ ಟ್ರೋಫಿಗಾಗಿ ಸೆಣಸಲಿದೆ. ಟಿ20 ಮಾದರಿಯಲ್ಲಿ ವಿಶ್ವ ಕ್ರಿಕೆಟ್‌ಗೆ ಹೊಸ ಚಾಂಪಿಯನ್‌ ಸಿಗಲಿದ್ದು, ಆ ತಂಡ ಯಾವುದು ಎನ್ನುವುದನ್ನು ದುಬೈನಲ್ಲಿ ಸಿದ್ಧಗೊಂಡಿರುವ ಫೈನಲ್‌ ವೇದಿಕೆ ನಿರ್ಧರಿಸಲಿದೆ.

ಏಕದಿನ ಮಾದರಿಯಲ್ಲಿ 5 ಬಾರಿ ಚಾಂಪಿಯನ್‌ ಆಗಿರುವ ಆಸ್ಪ್ರೇಲಿಯಾ (Australia Cricket Team), ಟಿ20 ಮಾದರಿಯಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ತಂಡ 2010ರಲ್ಲಿ ರನ್ನರ್‌-ಅಪ್‌ ಆಗಿದ್ದೇ ಶ್ರೇಷ್ಠ ಸಾಧನೆ ಎನಿಸಿದೆ. ಇನ್ನು ಹಾಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ ನ್ಯೂಜಿಲೆಂಡ್‌ (New Zealand Cricket Team) ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದೆ. ಎರಡೂ ತಂಡಗಳು ಚೊಚ್ಚಲ ಟಿ20 ವಿಶ್ವಕಪ್‌ ಗೆಲುವಿನ ಮೇಲೆ ಕಣ್ಣಿಟ್ಟಿವೆ.

ಉತ್ತಮ ಲಯದಲ್ಲಿ ಕಿವೀಸ್‌: ಸೂಪರ್‌-12 ಹಂತದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದ ನ್ಯೂಜಿಲೆಂಡ್‌, ಸೆಮಿಫೈನಲ್‌ನಲ್ಲಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎನಿಸಿದ್ದ ಇಂಗ್ಲೆಂಡ್‌ ವಿರುದ್ಧ ತನ್ನ ಬ್ಯಾಟಿಂಗ್‌ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. ಮಾರ್ಟಿನ್‌ ಗಪ್ಟಿಲ್‌ ಆಸ್ಪ್ರೇಲಿಯಾ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಡ್ಯಾರೆಲ್‌ ಮಿಚೆಲ್‌ ಸೆಮೀಸ್‌ನಲ್ಲಿ ತಮ್ಮ ವೃತ್ತಿಬದುಕಿನ ಶ್ರೇಷ್ಠ ಇನ್ನಿಂಗ್ಸ್‌ ಆಡಿದ ಖುಷಿಯಲ್ಲೇ ಫೈನಲ್‌ಗೆ ಕಾಲಿಡಲಿದ್ದಾರೆ. ಕೇನ್‌ ವಿಲಿಯಮ್ಸನ್‌ರಿಂದ (Kane Williamson) ದೊಡ್ಡ ಇನ್ನಿಂಗ್ಸ್‌ ಬಾಕಿ ಇದೆ. ಫೈನಲ್‌ನಲ್ಲಿ ಕೇನ್‌ ಅಬ್ಬರಿಸಿದರೆ ತಂಡಕ್ಕೆ ಅದಕ್ಕಿಂತ ಖುಷಿ ಮತ್ತೊಂದಿರುವುದಿಲ್ಲ. ಜೇಮ್ಸ್‌ ನೀಶಮ್‌ ಮಧ್ಯಮ ಕ್ರಮಾಂಕದಲ್ಲಿ ತಾವೊಬ್ಬ ಪರಿಣಾಮಕಾರಿ ಆಟಗಾರ ಎನ್ನುವುದನ್ನು ಇಂಗ್ಲೆಂಡ್‌ ವಿರುದ್ಧ ಸಾಬೀತು ಪಡಿಸಿದ್ದಾರೆ. ಡೇವಾನ್‌ ಕಾನ್‌ವೇ ಗಾಯಗೊಂಡು ಹೊರಬಿದ್ದಿರುವುದು ಕಿವೀಸ್‌ಗೆ ದೊಡ್ಡ ನಷ್ಟ ಉಂಟು ಮಾಡುವ ಸಾಧ್ಯತೆ ಇದೆ.

T20 World Cup: Aus vs NZ ಆಸೀಸ್‌ vs ಕಿವೀಸ್ ನಡುವಿನ ಕಾದಾಟದಲ್ಲಿ ಗೆಲ್ಲೋರು ಯಾರು..? ಭವಿಷ್ಯ ನುಡಿದ ವಾರ್ನ್‌..!

ಆಸೀಸ್‌ ಆರಂಭಿಕರನ್ನು ಟ್ರೆಂಟ್‌ ಬೌಲ್ಟ್‌ ಹಾಗೂ ಟಿಮ್‌ ಸೌಥಿ ಕಟ್ಟಿಹಾಕಬೇಕಿದೆ. 3ನೇ ವೇಗಿ ಆ್ಯಡಂ ಮಿಲ್ನೆ ತಮ್ಮ ಮೇಲಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಮಧ್ಯ ಓವರ್‌ಗಳಲ್ಲಿ ಲೆಗ್‌ ಸ್ಪಿನ್ನರ್‌ ಇಶ್‌ ಸೋಧಿಯ ಪ್ರದರ್ಶನ, ಕಿವೀಸ್‌ ಪಾಲಿಗೆ ಅತ್ಯಂತ ಮುಖ್ಯ.

ಆಸೀಸ್‌ ಅಸ್ತ್ರಗಳು ಯಾವ್ಯಾವು?: ಸೆಮೀಸ್‌ನಲ್ಲಿ ಶಾಹೀನ್‌ ಅಫ್ರಿದಿಯ ವೇಗದ ಇನ್‌ಸ್ವಿಂಗರ್‌ಗಳ ಎದುರು ಆ್ಯರೋನ್‌ ಫಿಂಚ್‌ (Aaron Finch) ಹೆಚ್ಚೇನೂ ಸಾಹಸ ತೋರಲು ಆಗಿರಲಿಲ್ಲ. ಆದರೆ ಕಿವೀಸ್‌ ವಿರುದ್ಧ ಫಿಂಚ್‌ ಉತ್ತಮ ದಾಖಲೆ ಹೊಂದಿದ್ದಾರೆ. ಲಯ ತಾತ್ಕಾಲಿಕ, ಶ್ರೇಷ್ಠತೆ ಶಾಶ್ವತ ಎನ್ನುವುದನ್ನು ಕಳೆದೆರಡು ಪಂದ್ಯಗಳಲ್ಲಿ ಡೇವಿಡ್‌ ವಾರ್ನರ್‌ (David Warner) ತೋರಿಸಿದ್ದಾರೆ. ವಾರ್ನರ್‌ ಸಿಡಿದರೆ ಕಿವೀಸ್‌ಗೆ ಸಂಕಷ್ಟ ಕಟ್ಟಿಟ್ಟಬುತ್ತಿ. ಟೂರ್ನಿಯಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ (Glenn Maxwell), ಸ್ಟೀವ್‌ ಸ್ಮಿತ್‌ (Steve Smith) ಪರಿಣಾಮಕಾರಿ ಇನ್ನಿಂಗ್ಸ್‌ ಆಡುವುದು ಬಾಕಿ ಇದೆ. ಮಾರ್ಕಸ್‌ ಸ್ಟೋಯ್ನಿಸ್‌ ಹಾಗೂ ಮ್ಯಾಥ್ಯೂ ವೇಡ್‌ (Matthew Wade) ತಾವೆಷ್ಟು ಅಪಾಯಕಾರಿ ಎನ್ನುವುದನ್ನು ತೋರಿಸಿದ್ದು, ಕಿವೀಸ್‌ ತನ್ನ ಡೆತ್‌ ಓವರ್‌ ಬೌಲಿಂಗ್‌ ಯೋಜನೆಯನ್ನು ಸ್ವಲ್ಪವೂ ಎಡವಟ್ಟಾಗದಂತೆ ಕಾರ್ಯರೂಪಕ್ಕೆ ತರಬೇಕಿದೆ.

ಟೂರ್ನಿಯಲ್ಲಿ ಅತ್ಯುತ್ತಮ 10.91 ಸರಾಸರಿಯೊಂದಿಗೆ 12 ವಿಕೆಟ್‌ ಕಬಳಿಸಿರುವ ಲೆಗ್‌ ಸ್ಪಿನ್ನರ್‌ ಆ್ಯಡಂ ಜಂಪಾ, ಫೈನಲ್‌ನಲ್ಲೂ ಆಸೀಸ್‌ಗೆ ಟ್ರಂಪ್‌ಕಾರ್ಡ್‌ ಆಗಬಹುದು. ಕಾಂಗರೂ ಪಡೆಗೆ ವಿಶ್ವ ದರ್ಜೆಯ ವೇಗಿಗಳಾದ ಮಿಚೆಲ್‌ ಸ್ಟಾರ್ಕ್, ಪ್ಯಾಟ್‌ ಕಮಿನ್ಸ್‌ ಹಾಗೂ ಜೋಶ್‌ ಹೇಜಲ್‌ವುಡ್‌ ಬಲ ಇದ್ದೇ ಇದೆ.

ಪಿಚ್‌ ರಿಪೋರ್ಟ್‌

ಈ ವಿಶ್ವಕಪ್‌ನಲ್ಲಿ ದುಬೈ ಒಟ್ಟು 12 ಪಂದ್ಯಗಳಿಗೆ ಆತಿಥ್ಯ ವಹಿಸಿದ್ದು, 11ರಲ್ಲಿ ಮೊದಲು ಫೀಲ್ಡ್‌ ಮಾಡಿದ ತಂಡ ಗೆದ್ದಿದೆ. ಹೀಗಾಗಿ ಟಾಸ್‌ ನಿರ್ಣಾಯಕ ಪಾತ್ರ ವಹಿಸಲಿದೆ. ಸಂಜೆ ಬಳಿಕ ಇಬ್ಬನಿ ಬೀಳುವ ಕಾರಣ 2ನೇ ಇನ್ನಿಂಗ್ಸ್‌ ವೇಳೆ ಬೌಲ್‌ ಮಾಡುವುದು ಕಷ್ಟವಾಗಬಹುದು. ಸೆಮೀಸ್‌ನಲ್ಲಿ ಆಸ್ಪ್ರೇಲಿಯಾ ಗಳಿಸಿದ 177 ರನ್‌ ಇಲ್ಲಿ ದಾಖಲಾಗಿರುವ ಗರಿಷ್ಠ ಮೊತ್ತ. ಹೀಗಾಗಿ ಮೊದಲು ಬ್ಯಾಟ್‌ ಮಾಡುವ ತಂಡ 180ಕ್ಕಿಂತ ಹೆಚ್ಚು ರನ್‌ ಕಲೆಹಾಕಿದರೆ ಗೆಲ್ಲುವ ಸಾಧ್ಯತೆ ಹೆಚ್ಚಾಗಬಹುದು.

ಸಂಭವನೀಯ ಆಟಗಾರರ ಪಟ್ಟಿ

ಆಸ್ಪ್ರೇಲಿಯಾ: ಆ್ಯರೋನ್‌ ಫಿಂಚ್‌(ನಾಯಕ), ಡೇವಿಡ್‌ ವಾರ್ನರ್‌, ಮಿಚೆಲ್‌ ಮಾಷ್‌ರ್‍, ಸ್ಟೀವ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯ್ನಿಸ್‌, ಮ್ಯಾಥ್ಯೂ ವೇಡ್‌, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್, ಆ್ಯಡಂ ಜಂಪಾ, ಜೋಶ್‌ ಹೇಜಲ್‌ವುಡ್‌.

ನ್ಯೂಜಿಲೆಂಡ್‌: ಮಾರ್ಟಿನ್‌ ಗಪ್ಟಿಲ್‌, ಡ್ಯಾರೆಲ್‌ ಮಿಚೆಲ್‌, ಕೇನ್‌ ವಿಲಿಯಮ್ಸನ್‌(ನಾಯಕ), ಟಿಮ್‌ ಸೀಫರ್ಟ್‌, ಗ್ಲೆನ್‌ ಫಿಲಿಫ್ಸ್‌, ಜೇಮ್ಸ್‌ ನೀಶಮ್‌, ಮಿಚೆಲ್‌ ಸ್ಯಾಂಟ್ನರ್‌, ಟಿಮ್‌ ಸೌಥಿ, ಇಶ್‌ ಸೋಧಿ, ಟ್ರೆಂಟ್‌ ಬೌಲ್ಟ್‌, ಆ್ಯಡಂ ಮಿಲ್ನೆ.

ಸ್ಥಳ: ದುಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌