2026ರ ಐಸಿಸಿ ಟಿ20 ವಿಶ್ವಕಪ್‌ಗೆ 15 ಸದಸ್ಯರ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ತಂಡವನ್ನು ಮುನ್ನಡೆಸಲಿದ್ದಾರೆ. ರಚಿನ್ ರವೀಂದ್ರ, ಡೆವೊನ್ ಕಾನ್‌ವೇ ಅವರಂತಹ ತಾರಾ ಆಟಗಾರರು ತಂಡದಲ್ಲಿದ್ದಾರೆ.

ಬೆಂಗಳೂರು: ಮುಂಬರುವ ಫೆಬ್ರವರಿ 07ರಿಂದ ಆರಂಭವಾಗಲಿರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಇಂದು 15 ಆಟಗಾರರನ್ನೊಳಗೊಂಡ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟವಾಗಿದ್ದು, ಅನುಭವಿ ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಕಿವೀಸ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿರುವ ನ್ಯೂಜಿಲೆಂಡ್ ತಂಡವು ಈ ಬಾರಿ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಆಫ್ಘಾನಿಸ್ತಾನ, ಕೆನಡಾ, ಯುಎಇ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ.

ಆರಂಭಿಕ ಪಂದ್ಯಗಳಿಂದ ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯೂಸನ್ ಔಟ್:

ನ್ಯೂಜಿಲೆಂಡ್ ಕ್ರಿಕೆಟ್ ಆಯ್ಕೆ ಸಮಿತಿಯು 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಾಕಷ್ಟು ಬಲಿಷ್ಠ ತಂಡವನ್ನು ಆಯ್ಕೆ ಮಾಡಿದೆ. ಇನ್ನು ಸಾಕಷ್ಟು ಹಿರಿಯ ಹಾಗೂ ಯುವ ಆಟಗಾರರನ್ನೊಳಗೊಂಡ ತಂಡವನ್ನು ಆಯ್ಕೆ ಮಾಡಲಾಗಿದೆ. ತಂಡದ ಮಾರಕ ವೇಗಿಗಳಾದ ಮ್ಯಾಟ್ ಹೆನ್ರಿ ಹಾಗೂ ಲಾಕಿ ಫರ್ಗ್ಯೂಸನ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇವರ ಪತ್ನಿಯರು ತಾಯಿಯಾಗುತ್ತಿರುವುದರಿಂದಾಗಿ ಕೆಲ ಪಂದ್ಯಗಳ ಮಟ್ಟಿಗೆ ಅಲಭ್ಯರಾಗುತ್ತಿದ್ದಾರೆ.

ತಾರಾ ಆಟಗಾರರನ್ನೊಳಗೊಂಡ ತಂಡ:

ಈ ಬಾರಿಯ ನ್ಯೂಜಿಲೆಂಡ್ ತಂಡದಲ್ಲಿ ಅನುಭವಿ ಆಟಗಾರರಾದ ಡೆವೊನ್ ಕಾನ್‌ವೇ, ಲಾಕಿ ಫರ್ಗ್ಯೂಸನ್, ಡೇರಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲನ್ ಫಿಲಿಪ್ಸ್, ಇಶ್ ಸೋಧಿ, ರಚಿನ್ ರವೀಂದ್ರ ಅವರಂತಹ ಅನುಭವಿ ಆಟಗಾರರಿದ್ದಾರೆ. ಇದರ ಜತೆಗೆ ಫಿನ್ ಅಲೆನ್, ಜೇಕಬ್ ಡಫಿ ಅವರಂತಹ ತಾರಾ ಆಟಗಾರರ ಬಲ ಕಿವೀಸ್ ತಂಡಕ್ಕಿದೆ.

ಜೇಕಬ್ ಡಫಿಗಿದು ಮೊದಲ ಟಿ20 ವಿಶ್ವಕಪ್:

ಐಸಿಸಿ ಟಿ20 ಬೌಲರ್‌ಗಳ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ನೀಳಕಾಯದ ವೇಗಿ ಜೇಕಬ್ ಡಫಿ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯಾಡಲು ರೆಡಿಯಾಗಿದ್ದಾರೆ. ಜೇಕಬ್ ಡಫಿ ಸದ್ಯ ಮೂರು ಮಾದರಿಯಲ್ಲೂ ಕಿವೀಸ್ ತಂಡವನ್ನು ಪ್ರತಿನಿಧಿಸಿ ಗಮನ ಸೆಳೆದಿದ್ದಾರೆ. ಕಳೆದ ವರ್ಷ ಜೇಕಬ್ ಡಫಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 81 ವಿಕೆಟ್ ಕಬಳಿಸಿ ಮಿಂಚಿದ್ದರು. ಇದೀಗ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಎದುರಾಳಿ ತಂಡದ ಬ್ಯಾಟರ್‌ಗಳನ್ನು ಕಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅಂದಹಾಗೆ ಇತ್ತೀಚೆಗೆ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಜೇಕಬ್ ಡಫಿಯನ್ನು 2 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.

2015ರಲ್ಲಿ ಅಂತಾರಾಷ್ಟ್ರೀಯ ಟಿ20 ವಿಶ್ವಕಪ್ ಟೂರ್ನಿಗೆ ಪಾದಾರ್ಪಣೆ ಮಾಡಿದ ಮಿಚೆಲ್ ಸ್ಯಾಂಟ್ನರ್, ಕಿವೀಸ್ ಸೀಮಿತ ಓವರ್‌ಗಳ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಕಿವೀಸ್ ಪರ 122 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಸ್ಯಾಂಟ್ನರ್ 130 ವಿಕೆಟ್ ಕಬಳಿಸಿದ್ದಾರೆ. ಇದರ ಜತೆಗೆ ಬ್ಯಾಟಿಂಗ್‌ನಲ್ಲಿ ಎರಡು ಅರ್ಧಶತಕ ಸಹಿತ 848 ರನ್ ಬಾರಿಸಿದ್ದಾರೆ.

ನ್ಯೂಜಿಲೆಂಡ್ ತಂಡವು ಫೆಬ್ರವರಿ 08ರಂದು ಆಫ್ಘಾನಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಮೈದಾನ ಆತಿಥ್ಯ ವಹಿಸಿದೆ. ಇನ್ನು ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ನ್ಯೂಜಿಲೆಂಡ್ ತಂಡವು ಭಾರತ ಪ್ರವಾಸದಲ್ಲಿ 3 ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಭಾರತ ಎದುರಿನ ಸೀಮಿತ ಓವರ್‌ಗಳ ಸರಣಿಯು ಜನವರಿ 11ರಿಂದ ಆರಂಭವಾಗಲಿದೆ.

2026ರ ಟಿ20 ವಿಶ್ವಕಪ್ ಟೂರ್ನಿಗೆ ನ್ಯೂಜಿಲೆಂಡ್ ತಂಡ ಹೀಗಿದೆ:

ಮಿಚೆಲ್ ಸ್ಯಾಂಟ್ನರ್(ನಾಯಕ), ಫಿನ್ ಅಲೆನ್, ಮಿಚೆಲ್ ಬ್ರೇಸ್‌ವೆಲ್, ಮಾರ್ಕ್‌ ಚಾಪ್ಮನ್, ಡೆವೊನ್ ಕಾನ್‌ವೇ, ಜೇಕಬ್ ಡಫಿ, ಲಾಕಿ ಫರ್ಗ್ಯೂಸನ್, ಮ್ಯಾಟ್ ಹೆನ್ರಿ, ಡೇರಲ್ ಮಿಚೆಲ್, ಆಡಂ ಮಿಲ್ನೆ, ಜೇಮ್ಸ್ ನೀಶಮ್, ಗ್ಲೆನ್ ಫಿಲಿಫ್ಸ್‌, ರಚಿನ್ ರವೀಂದ್ರ, ಟಿಮ್ ಸೀಫರ್ಟ್, ಇಶ್ ಸೋಧಿ.

ಮೀಸಲು ಆಟಗಾರ: ಕೈಲ್ ಜೇಮಿಸನ್.