ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಬದ್ದವೈರಿಗಳಾದ ಭಾರತ-ಪಾಕಿಸ್ತಾನ ಕಾದಾಟಕಳೆದ ವರ್ಷದ ಟಿ20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ರೆಡಿಹೈವೋಲ್ಟೇಜ್ ಪಂದ್ಯಕ್ಕೆ ಒಂದು ಲಕ್ಷ ಆಸನದ ಸಾಮರ್ಥ್ಯ ಹೊಂದಿರುವ ಮೆಲ್ಬರ್ನ್ ಕ್ರಿಕೆಟ್ ಮೈದಾನ ಆತಿಥ್ಯ
ಮೆಲ್ಬರ್ನ್(ಅ.23): ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳು ಅಪರೂಪ. ಕೇವಲ ಜಾಗತಿಕ ಮಟ್ಟದ ಟೂರ್ನಿಗಳಲ್ಲಷ್ಟೇ ಬದ್ಧವೈರಿಗಳು ಮುಖಾಮುಖಿಯಾಗಲಿವೆ. 2022ರ ಐಸಿಸಿ ಟಿ20 ವಿಶ್ವಕಪ್‌ನ ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಭಾನುವಾರ ಇಲ್ಲಿನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ ಅ.24, 2021ರಂದು ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಪರಸ್ಪರ ಎದುರಾಗಿದ್ದವು. ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಿ ಪಾಕಿಸ್ತಾನ ಸಂಭ್ರಮಿಸಿತ್ತು. ಆ ಸೋಲಿನ ಸೇಡಿಗೆ ಟೀಂ ಇಂಡಿಯಾ ಕಾಯುತ್ತಿದೆ. ಇತ್ತೀಚೆಗಷ್ಟೇ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 2 ಪಂದ್ಯಗಳನ್ನು ಆಡಿದ್ದ ಭಾರತ ಒಂದರಲ್ಲಿ ಗೆದ್ದು ಮತ್ತೊಂದರಲ್ಲಿ ಸೋಲುಂಡಿತ್ತು.
ಇದೀಗ ಹೊಸ ಉತ್ಸಾಹ, ಹೊಸ ಯೋಜನೆ, ತಂತ್ರಗಾರಿಕೆಯೊಂದಿಗೆ ಎರಡೂ ತಂಡಗಳು ಕಣಕ್ಕಿಳಿಯಲು ಸಜ್ಜಾಗಿವೆ. ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸದೆ ಇದ್ದರೆ, ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುವುದರಲ್ಲಿ ಅನುಮಾನವಿಲ್ಲ.
ಭಾರತಕ್ಕೆ ಆಯ್ಕೆ ಗೊಂದಲ: ಟೀಂ ಇಂಡಿಯಾ ತನ್ನ ಬೌಲಿಂಗ್‌ಗೆ ಸಂಬಂಧಿಸಿದ ಎರಡು ಪ್ರಮುಖ ಆಯ್ಕೆಗಳ ಬಗ್ಗೆ ನಿರ್ಧರಿಸಬೇಕಿದೆ. ಮೊದಲನೇಯದ್ದು ನಾಲ್ವರು ವೇಗಿಗಳ ಪೈಕಿ ಯಾವ ಮೂವರನ್ನು ಆಯ್ಕೆ ಮಾಡುವುದು ಎನ್ನುವುದು. ಮತ್ತೊಂದು ಸ್ಪಿನ್ ಸಂಯೋಜನೆಯ ಬಗ್ಗೆ ನಿರ್ಧರಿಸುವುದು. ಈ ವರ್ಷ ಬಾಬರ್ ಆಜಂ(114.28 ಸ್ಟ್ರೈಕ್‌ರೇಟ್) ಹಾಗೂ ಮೊಹಮದ್ ರಿಜ್ವಾನ್(112.32 ಸ್ಟ್ರೈಕ್‌ರೇಟ್) ಸ್ಪಿನ್ ಬೌಲಿಂಗ್ ಎದುರು ಹೆಚ್ಚಾಗಿ ರನ್ ಗಳಿಸಿಲ್ಲ. ಈ ಇಬ್ಬರು ಆರಂಭಿಕರು ಸಾಮಾನ್ಯವಾಗಿ ಪಾಕಿಸ್ತಾನ ಇನ್ನಿಂಗ್ಸ್‌ನ ದಿಕ್ಕು ನಿರ್ಧರಿಸಲಿದ್ದಾರೆ. ಬಾಬರ್ ಈ ವರ್ಷ ಆಫ್ ಸ್ಪಿನ್ನರ್‌ಗಳ ಎದುರು 35 ಎಸೆತಗಳಲ್ಲಿ 4 ಬಾರಿ ಔಟ್ ಆಗಿದ್ದಾರೆ. ಈ ಅಂಕಿ-ಅಂಶವನ್ನು ಗಮನದಲ್ಲಿಟ್ಟುಕೊಂಡು ಭಾರತ ಆರ್.ಅಶ್ವಿನ್‌ರನ್ನು ಆಡಿಸಬಹುದು. ಇಲ್ಲವೇ ಅಕ್ಷರ್-ಚಹಲ್ ಸಂಯೋಜನೆಯನ್ನೇ ನೆಚ್ಚಿಕೊಳ್ಳಬಹುದು.
IND vs PAK ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಬದ್ಧವೈರಿಗಳ ಹೋರಾಟಕ್ಕೆ ಮಳೆ ಸಾಧ್ಯತೆ ಎಷ್ಟು?
ಉಳಿದಂತೆ ಭಾರತದ ಆಡುವ ಹನ್ನೊಂದರಲ್ಲಿ ಮತ್ತ್ಯಾವುದೇ ಗೊಂದಲವಿಲ್ಲ. ಸದ್ಯ ಟಿ20 ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್ ಎನಿಸಿರುವ ಸೂರ್ಯಕುಮಾರ್ ಯಾದವ್‌ರ ಆಟ ಭಾರತದ ಫಲಿತಾಂಶದ ಮೇಲೆ ಪ್ರಬಲ ಪರಿಣಾಮ ಬೀರುವ ನಿರೀಕ್ಷೆ ಇದೆ.
ಪಾಕ್‌ಗೆ ವೇಗಿಗಳೇ ಜೀವಾಳ: ಫಖರ್ ಜಮಾನ್ ಗಾಯದಿಂದ ಚೇತರಿಸಿಕೊಂಡಿಲ್ಲ. ಅವರು ಆಯ್ಕೆಗೆ ಲಭ್ಯರಿಲ್ಲ. ಶಾನ್ ಮಸೂದ್ ಗುಣಮುಖರಾಗಿದ್ದು ಆಡಲು ಫಿಟ್ ಇದ್ದಾರೆ. ಐವರು ಶ್ರೇಷ್ಠ ವೇಗಿಗಳು ಇದ್ದರೂ ಮೂವರನ್ನಷ್ಟೇ ಆಡಿಸಲು ಸಾಧ್ಯ. ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಆಡುವುದು ಖಚಿತ. ಮತ್ತೊಂದು ಸ್ಥಾನಕ್ಕೆ ನಸೀಂ ಶಾ, ಮೊಹಮದ್ ವಸೀಂ ನಡುವೆ ಪೈಪೋಟಿ ಇದೆ. ಮಧ್ಯಮ ಕ್ರಮಾಂಕದಲ್ಲಿ ಅನುಭವದ ಕೊರತೆ ಇದ್ದು, ಆರಂಭಿಕರು ಕೈಕೊಟ್ಟರೆ ಭಾರೀ ಒತ್ತಡ ಎದುರಾಗಲಿದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್/ ಮೊಹಮ್ಮದ್ ಶಮಿ, ಯುಜುವೇಂದ್ರ ಚಹಲ್/ ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಆರ್ಶದೀಪ್ ಸಿಂಗ್.
ಪಾಕಿಸ್ತಾನ: ಬಾಬರ್ ಆಜಂ(ನಾಯಕ), ಮೊಹಮ್ಮದ್ ರಿಜ್ವಾನ್, ಶಾನ್ ಮಸೂದ್, ಹೈದರ್ ಅಲಿ, ಇಫ್ತಿಕಾರ್ ಅಹಮ್ಮದ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ನಸೀಂ ಶಾ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.
ಪಿಚ್ ರಿಪೋರ್ಚ್
ಎಂಸಿಜಿ ಪಿಚ್ ಬ್ಯಾಟಿಂಗ್ ಯೋಗ್ಯವಾಗಿದ್ದರೂ ವೇಗಿಗಳು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಹೆಚ್ಚು. ಇಲ್ಲಿ ಕೊನೆ 3 ಟಿ20 ಪಂದ್ಯಗಳಲ್ಲಿ 28ರಲ್ಲಿ 23 ವಿಕೆಟ್‌ಗಳು ವೇಗಿಗಳ ಪಾಲಾಗಿವೆ. ಇಲ್ಲಿನ ಸರಾಸರಿ ಮೊದಲ ಇನ್ನಿಂಗ್‌್ಸ ಮೊತ್ತ 145. ಕಳೆದ 3 ಪಂದ್ಯಗಳಲ್ಲೂ ಚೇಸಿಂಗ್ ಮಾಡಿದ ತಂಡ ಜಯಿಸಿದೆ.
ತಗ್ಗಿದ ಮಳೆ ಆತಂಕ
ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕ ಸ್ವಲ್ಪ ಮಟ್ಟಿಗೆ ತಗ್ಗಿದೆ. ಶನಿವಾರ ಮಳೆರಾಯ ಸಂಪೂರ್ಣ ಬಿಡುವು ನೀಡಿದ್ದು, ಭಾನುವಾರ ಮಳೆ ಸಾಧ್ಯತೆ ಶೇ.90ರಿಂದ ಶೇ.60ಕ್ಕೆ ಇಳಿದಿದೆ. ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆಯಾದರೂ ಸ್ಥಳೀಯರ ಪ್ರಕಾರ ಕೆಲ ಓವರ್‌ಗಳು ಕಡಿತಗೊಂಡು ಪಂದ್ಯ ನಡೆಯಲಿದೆ ಎನ್ನಲಾಗುತ್ತಿದೆ.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್
ಸ್ಥಳ: ಎಂಸಿಜಿ
