T20 World Cup ಕಿವೀಸ್ ಎದುರು ಹೀನಾಯ ಸೋಲುಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ..!
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗೆ ಸೋಲುಣಿಸಿದ ನ್ಯೂಜಿಲೆಂಡ್
ಸೂಪರ್ 12 ಹಂತದ ಮೊದಲ ಪಂದ್ಯದಲ್ಲೇ ಆತಿಥೇಯ ಆಸ್ಟ್ರೇಲಿಯಾಗೆ ಹೀನಾಯ ಸೋಲು
ನ್ಯೂಜಿಲೆಂಡ್ ಸಂಘಟಿತ ಪ್ರದರ್ಶನಕ್ಕೆ ತಲೆಬಾಗಿದ ಆಸ್ಟ್ರೇಲಿಯಾ
ಸಿಡ್ನಿ(ಅ.22): ಫಿನ್ ಆ್ಯಲೆನ್ ಹಾಗೂ ಡೆವೊನ್ ಕಾನ್‌ವೇ ಸ್ಪೋಟಕ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ನ್ಯೂಜಿಲೆಂಡ್ ನೀಡಿದ್ದ 201 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಕೇವಲ 111 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 89 ರನ್‌ಗಳ ಹೀನಾಯ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ತಂಡವು ಕಳೆದ ಟಿ20 ವಿಶ್ವಕಪ್ ಸೋಲಿನ ಲೆಕ್ಕ ಚುಕ್ತಾ ಮಾಡಿದೆ.
ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ನೀಡಿದ ಕಠಿಣ ಗುರಿ ಬೆನ್ನತ್ತಿದ ಆತಿಥೇಯ ಆಸ್ಟ್ರೇಲಿಯಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಕೇವಲ 5 ರನ್ ಬಾರಿಸಿ ಟಿಮ್ ಸೌಥಿ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ನಾಯಕ ಆ್ಯರೋನ್ ಫಿಂಚ್(13) ಹಾಗೂ ಮಿಚೆಲ್ ಮಾರ್ಶ್(16) ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 28 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗುವ ಯತ್ನ ನಡೆಸಿದರು. ಆದರೆ ಮತ್ತೊಂದು ತುದಿಯಲ್ಲಿ ಮ್ಯಾಕ್ಸ್‌ವೆಲ್‌ಗೆ ಉತ್ತಮ ಸಾಥ್ ದೊರೆಯಲಿಲ್ಲ. ಮಾರ್ಕಸ್ ಸ್ಟೋನಿಸ್ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಟಿಮ್ ಡೇವಿಡ್ 11 ಹಾಗೂ ಮ್ಯಾಥ್ಯೂ ವೇಡ್ 2 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಪ್ಯಾಟ್ ಕಮಿನ್ಸ್ 21 ರನ್ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಒಂದೇ ಓವರ್‌ನಲ್ಲಿ ಟ್ರೆಂಟ್ ಬೌಲ್ಟ್, ಆಸೀಸ್ ಬಾಲಂಗೋಚಿಗಳಾದ ಮಿಚೆಲ್ ಸ್ಟಾರ್ಕ್, ಹಾಗೂ ಆಡಂ ಜಂಪಾರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಕಿವೀಸ್ ಗೆಲುವನ್ನು ಮತ್ತೊಮ್ಮೆ ಖಚಿತಪಡಿಸಿದರು.
T20 World Cup: ಆ್ಯಲೆನ್, ಕಾನ್‌ವೇ ಸ್ಪೋಟಕ ಬ್ಯಾಟಿಂಗ್, ಆಸೀಸ್‌ಗೆ ಕಠಿಣ ಗುರಿ ನೀಡಿದ ಕಿವೀಸ್..!
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ನ್ಯೂಜಿಲೆಂಡ್ ತಂಡಕ್ಕೆ ಫಿನ್ ಆ್ಯಲೆನ್ ಹಾಗೂ ಡೆವೊನ್ ಕಾನ್‌ವೇ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಪವರ್ ಪ್ಲೇ ನಲ್ಲೇ ಈ ಜೋಡಿ ಕಾಂಗರೂ ಪಡೆಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಮೊದಲ 4 ಓವರ್ ತುಂಬುವುದರೊಳಗಾಗಿ ನ್ಯೂಜಿಲೆಂಡ್ ತಂಡವು 50ರ ಗಡಿದಾಟಿತ್ತು. ಅದರಲ್ಲೂ ಮಾರ್ಟಿನ್ ಗಪ್ಟಿಲ್ ಹಿಂದಿಕ್ಕಿ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ಫಿನ್ ಆ್ಯಲನ್ ಕೇವಲ 16 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 42 ರನ್ ಬಾರಿಸುವ ಮೂಲಕ ಕಿವೀಸ್ ತಂಡಕ್ಕೆ ಡ್ರೀಮ್ ಓಪನ್ನಿಂಗ್ ಮಾಡಿಕೊಟ್ಟರು. ಮತ್ತೊಂದು ತುದಿಯಲ್ಲಿ ಕಾನ್‌ವೇ ಉತ್ತಮ ಸಾಥ್ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 25 ಎಸೆತಗಳಲ್ಲಿ 56 ರನ್‌ಗಳ ಜತೆಯಾಟ ನಿಭಾಯಿಸಿತು.
ಆರಂಭದಲ್ಲಿ ಫಿನ್ ಆ್ಯಲೆನ್ ಅಬ್ಬರಿಸುವವರೆಗೂ ತಣ್ಣಗಿದ್ದ, ಡೆವೊನ್ ಕಾನ್‌ವೇ, ಆ ಬಳಿಕ ಕೇನ್ ವಿಲಿಯಮ್ಸನ್ ಜತೆಗೂಡಿ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಚೆಂಡನ್ನು ನಾನಾ ಮೂಲೆಗೆ ಅಟ್ಟಿದ ಕಾನ್‌ವೇ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಡೆವೊನ್ ಕಾನ್‌ವೇ 58 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 92 ರನ್ ಬಾರಿಸಿದರು.
ಇನ್ನು ಎರಡನೇ ವಿಕೆಟ್‌ಗೆ ಕೇನ್ ವಿಲಿಯಮ್ಸನ್ ಹಾಗೂ ಡೆವೊನ್ ಕಾನ್‌ವೇ ಜೋಡಿ 53 ಎಸೆತಗಳಲ್ಲಿ 69 ರನ್‌ಗಳ ಜತೆಯಾಟವಾಡಿತು. ಕೇನ್ ವಿಲಿಯಮ್ಸನ್ 23 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಗ್ಲೆನ್ ಫಿಲಿಪ್ಸ್ 12 ರನ್ ಬಾರಿಸಿ ಹೇಜಲ್‌ವುಡ್‌ಗೆ ಎರಡನೇ ಬಲಿಯಾದರು. ಇನ್ನು ಕೊನೆಯಲ್ಲಿ ಜೇಮ್ಸ್ ನೀಶಮ್ ಕೇವಲ 13 ಎಸೆತಗಳಲ್ಲಿ 2 ಸಿಕ್ಸರ್ ಸಹಿತ ಅಜೇಯ 26 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ತಲುಪಿಸುವಲ್ಲಿ ಯಶಸ್ವಿಯಾದರು.