T20 World Cup: ಆ್ಯಲೆನ್, ಕಾನ್‌ವೇ ಸ್ಪೋಟಕ ಬ್ಯಾಟಿಂಗ್, ಆಸೀಸ್‌ಗೆ ಕಠಿಣ ಗುರಿ ನೀಡಿದ ಕಿವೀಸ್..!
* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸೀಸ್‌ಗೆ ಸವಾಲಿನ ಗುರಿ
* ಕಿವೀಸ್ ಪರ ಸ್ಪೋಟಕ ಬ್ಯಾಟಿಂಗ್ ನಡೆಸಿದ ಫಿನ್ ಆ್ಯಲೆನ್, ಡೆವೊನ್ ಕಾನ್‌ವೇ
* ಅಜೇಯ 92 ರನ್ ಬಾರಿಸಿ ಅಬ್ಬರಿಸಿದ ಕಾನ್‌ವೇ
ಸಿಡ್ನಿ(ಅ.22): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಮೊದಲ ಪಂದ್ಯದಲ್ಲೇ ಅಕ್ಷರಶಃ ರನ್ ಮಳೆಯೇ ಹರಿದಿದೆ. ನ್ಯೂಜಿಲೆಂಡ್ ಆರಂಭಿಕ ಬ್ಯಾಟರ್‌ಗಳಾದ ಫಿನ್ ಆ್ಯಲನ್ ಹಾಗೂ ಡೆವೊನ್ ಕಾನ್‌ವೇ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡವು 3 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿದ್ದು, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗೆ ಕಠಿಣ ಸವಾಲು ನೀಡಿದೆ.
ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ನ್ಯೂಜಿಲೆಂಡ್ ತಂಡಕ್ಕೆ ಫಿನ್ ಆ್ಯಲೆನ್ ಹಾಗೂ ಡೆವೊನ್ ಕಾನ್‌ವೇ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಪವರ್ ಪ್ಲೇ ನಲ್ಲೇ ಈ ಜೋಡಿ ಕಾಂಗರೂ ಪಡೆಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಮೊದಲ 4 ಓವರ್ ತುಂಬುವುದರೊಳಗಾಗಿ ನ್ಯೂಜಿಲೆಂಡ್ ತಂಡವು 50ರ ಗಡಿದಾಟಿತ್ತು. ಅದರಲ್ಲೂ ಮಾರ್ಟಿನ್ ಗಪ್ಟಿಲ್ ಹಿಂದಿಕ್ಕಿ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ಫಿನ್ ಆ್ಯಲನ್ ಕೇವಲ 16 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 42 ರನ್ ಬಾರಿಸುವ ಮೂಲಕ ಕಿವೀಸ್ ತಂಡಕ್ಕೆ ಡ್ರೀಮ್ ಓಪನ್ನಿಂಗ್ ಮಾಡಿಕೊಟ್ಟರು. ಮತ್ತೊಂದು ತುದಿಯಲ್ಲಿ ಕಾನ್‌ವೇ ಉತ್ತಮ ಸಾಥ್ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 25 ಎಸೆತಗಳಲ್ಲಿ 56 ರನ್‌ಗಳ ಜತೆಯಾಟ ನಿಭಾಯಿಸಿತು.
ಆಕರ್ಷಕ ಅರ್ಧಶತಕ ಚಚ್ಚಿದ ಕಾನ್‌ವೇ: ಆರಂಭದಲ್ಲಿ ಫಿನ್ ಆ್ಯಲೆನ್ ಅಬ್ಬರಿಸುವವರೆಗೂ ತಣ್ಣಗಿದ್ದ, ಡೆವೊನ್ ಕಾನ್‌ವೇ, ಆ ಬಳಿಕ ಕೇನ್ ವಿಲಿಯಮ್ಸನ್ ಜತೆಗೂಡಿ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಚೆಂಡನ್ನು ನಾನಾ ಮೂಲೆಗೆ ಅಟ್ಟಿದ ಕಾನ್‌ವೇ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಡೆವೊನ್ ಕಾನ್‌ವೇ 58 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 92 ರನ್ ಬಾರಿಸಿದರು.
ಇನ್ನು ಎರಡನೇ ವಿಕೆಟ್‌ಗೆ ಕೇನ್ ವಿಲಿಯಮ್ಸನ್ ಹಾಗೂ ಡೆವೊನ್ ಕಾನ್‌ವೇ ಜೋಡಿ 53 ಎಸೆತಗಳಲ್ಲಿ 69 ರನ್‌ಗಳ ಜತೆಯಾಟವಾಡಿತು. ಕೇನ್ ವಿಲಿಯಮ್ಸನ್ 23 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಗ್ಲೆನ್ ಫಿಲಿಪ್ಸ್ 12 ರನ್ ಬಾರಿಸಿ ಹೇಜಲ್‌ವುಡ್‌ಗೆ ಎರಡನೇ ಬಲಿಯಾದರು. ಇನ್ನು ಕೊನೆಯಲ್ಲಿ ಜೇಮ್ಸ್ ನೀಶಮ್ ಕೇವಲ 13 ಎಸೆತಗಳಲ್ಲಿ 2 ಸಿಕ್ಸರ್ ಸಹಿತ ಅಜೇಯ 26 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ತಲುಪಿಸುವಲ್ಲಿ ಯಶಸ್ವಿಯಾದರು.