T20 World Cup: ಲಂಕಾ ಎದುರು ಟಾಸ್ ಗೆದ್ದ ಐರ್ಲೆಂಡ್ ಬ್ಯಾಟಿಂಗ್ ಆಯ್ಕೆ
ಸೂಪರ್ ಹಂತದಲ್ಲಿಂದು ಲಂಕಾ-ಐರ್ಲೆಂಡ್ ಕಾದಾಟ
ಟಾಸ್ ಗೆದ್ದ ಐರ್ಲೆಂಡ್ ತಂಡವು ಬ್ಯಾಟಿಂಗ್ ಆಯ್ಕೆ
ಅರ್ಹತಾ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ತೋರಿರುವ ಉಭಯ ತಂಡಗಳು
ಹೋಬರ್ಟ್(ಅ.23): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಸೂಪರ್ 12 ಹಂತಕ್ಕೆ ಲಗ್ಗೆಯಿಟ್ಟಿರುವ ಏಷ್ಯಾಕಪ್ ಹಾಲಿ ಚಾಂಪಿಯನ್ ಶ್ರೀಲಂಕಾ ಹಾಗೂ ಐರ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಐರ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.
ಈ ಪಂದ್ಯಕ್ಕೆ ಇಲ್ಲಿನ ಬೆಲ್ಲಿರಿವ್ ಓವೆಲ್ ಮೈದಾನ ಆತಿಥ್ಯವನ್ನು ವಹಿಸಿದ್ದು, ಮೊದಲ ಬ್ಯಾಟಿಂಗ್ ಮಾಡಲು ತೀರ್ಮಾನಿಸಿರುವ ಐರ್ಲೆಂಡ್ ತಂಡವು ಬೃಹತ್ ಮೊತ್ತ ಕಲೆಹಾಕಿ ಲಂಕಾ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಐರ್ಲೆಂಡ್ ತಂಡದಲ್ಲಿ ಸ್ಪೋಟಕ ಬ್ಯಾಟರ್‌ಗಳ ದಂಡೇ ಇದ್ದು, ಪೌಲ್ ಸ್ಟರ್ಲಿಂಗ್, ನಾಯಕ ಆಂಡ್ರ್ಯೂ ಬಲ್ಬೈರ್ನಿ, ಹ್ಯಾರಿ ಟೆಕ್ಟರ್,ಲಾರ್ಕನ್ ಟಕರ್ ಅವರಂತ ಟಿ20 ಸ್ಪೆಷಲಿಸ್ಟ್ ಬ್ಯಾಟರ್‌ಗಳಿದ್ದಾರೆ. ಇನ್ನು ಐರ್ಲೆಂಡ್ ತಂಡವು ಅರ್ಹತಾ ಸುತ್ತಿನ ಕಾದಾಟದಲ್ಲಿ ಇದೇ ಮೈದಾನದಲ್ಲಿ ಅಡಿರುವುದರಿಂದ ಪಿಚ್ ಯಾವ ರೀತಿ ವರ್ತಿಸಲಿದೆ ಎನ್ನುವ ಸ್ಪಷ್ಟ ಕಲ್ಪನೆ ಐರ್ಲೆಂಡ್ ತಂಡಕ್ಕಿದೆ. ಅದರಲ್ಲೂ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ದ 9 ವಿಕೆಟ್‌ಗಳ ಜಯ ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಐರ್ಲೆಂಡ್ ತಂಡವು ಇದೀಗ ಸೂಪರ್ 12 ಹಂತದಲ್ಲೂ ಶುಭಾರಂಭ ಮಾಡುವ ಲೆಕ್ಕಾಚಾರದಲ್ಲಿದೆ.
T20 World Cup ಕಿವೀಸ್ ಎದುರು ಹೀನಾಯ ಸೋಲುಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ..!
ಇನ್ನು ಏಷ್ಯಾಕಪ್ ಚಾಂಪಿಯನ್ ಲಂಕಾ ತಂಡ ಕೂಡಾ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲೇ ಮುಗ್ಗರಿಸಿತ್ತು. ಹೀಗಿದ್ದೂ, ಆ ಬಳಿಕ ಸತತ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸುವ ಮೂಲಕ ಸೂಪರ್ 12 ಹಂತಕ್ಕೆ ಲಗ್ಗೆಯಿಟ್ಟಿದೆ. ಕುಸಾಲ್ ಮೆಂಡಿಸ್, ಚರಿತ್ ಅಸಲಂಕ, ಭನುಕಾ ರಾಜಪಕ್ಸ, ನಾಯಕ ದಶುನ್ ಶನಕ ಲಂಕಾ ತಂಡದ ಬ್ಯಾಟಿಂಗ್ ಆಧಾರ ಸ್ತಂಭ ಎನಿಸಿಕೊಂಡಿದ್ಧಾರೆ. ಇನ್ನು ಬೌಲಿಂಗ್‌ನಲ್ಲಿ ಸ್ಟಾರ್ ಸ್ಪಿನ್ನರ್‌ಗಳಾದ ವನಿಂದು ಹಸರಂಗ, ಮಹೀಶ್ ತೀಕ್ಷಣ ಜತೆಗೆ ವೇಗಿಗಳಾದ ಬಿನುರಾ ಫರ್ನಾಂಡೋ, ಲಹಿರು ಕುಮಾರ, ಚಮಿಕ ಕರುಣರತ್ನೆ ಮಾರಕ ದಾಳಿ ಸಂಘಟಿಸಿದರೆ, ಐರ್ಲೆಂಡ್ ಎದುರು ಗೆಲುವು ಕಷ್ಟವೇನಲ್ಲ.
ತಂಡಗಳು ಹೀಗಿವೆ ನೋಡಿ
ಶ್ರೀಲಂಕಾ ಕ್ರಿಕೆಟ್ ತಂಡ:
ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಅಸೇನ್ ಬಂಢಾರ, ಭನುಕಾ ರಾಜಪಕ್ಸಾ, ದಶುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕ ಕರುಣರತ್ನೆ, ಮಹೀಶ್ ತೀಕ್ಷಣ, ಬಿನುರ ಫರ್ನಾಂಡೋ, ಲಹಿರು ಕುಮಾರ.
ಐರ್ಲೆಂಡ್ ಕ್ರಿಕೆಟ್ ತಂಡ:
ಪೌಲ್ ಸ್ಟರ್ಲಿಂಗ್, ಆಂಡ್ರ್ಯೂ ಬಲ್ಬ್ರೈನ್, ಲಾರ್ಕನ್ ಟಕರ್(ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕುರ್ಟಿಸ್ ಕ್ಯಾಂಪರ್, ಜಾರ್ಜ್ ಡಾಕ್ರೆಲ್, ಗೆರಾತ್ ಡೆಲ್ನಿ, ಮಾರ್ಕ್ ಅಡೈರ್, ಸಿಮಿ ಸಿಂಗ್, ಬ್ಯಾರಿ ಮೆಕ್‌ಕ್ರಾಥಿ, ಜೋಶ್ವಾ ಲಿಟ್ಲ್.