ಅಭಿಷೇಕ್ ಶರ್ಮಾ ಇಂಗ್ಲೆಂಡ್ ವಿರುದ್ಧದ ೧೩೫ ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ ನಂತರ ಟಿ೨೦ ಬ್ಯಾಟಿಂಗ್ ಶ್ರೇಯಾಂಕದಲ್ಲಿ ೨ನೇ ಸ್ಥಾನಕ್ಕೇರಿದ್ದಾರೆ. ಈ ಸಾಧನೆಯೊಂದಿಗೆ ೩೮ ಸ್ಥಾನ ಜಿಗಿದ ಅವರು, ಅಗ್ರಸ್ಥಾನದಲ್ಲಿರುವ ಟ್ರ್ಯಾವಿಸ್ ಹೆಡ್‌ಗಿಂತ ಕೇವಲ ೨೬ ಅಂಕಗಳ ಅಂತರದಲ್ಲಿದ್ದಾರೆ. ವರುಣ್ ಚಕ್ರವರ್ತಿ ಬೌಲಿಂಗ್ ಶ್ರೇಯಾಂಕದಲ್ಲಿ ಜಂಟಿ ೨ನೇ ಸ್ಥಾನಕ್ಕೆ ಏರಿದ್ದಾರೆ. ಅರ್ಶದೀಪ್ ಸಿಂಗ್ ಟಾಪ್ ೧೦ರೊಳಗೆ ಪ್ರವೇಶಿಸಿದ್ದಾರೆ.

ದುಬೈ: ಭಾರತದ ಯುವ, ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಐಸಿಸಿ ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 2ನೇ ಸ್ಥಾನಕ್ಕೇರಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ 54 ಎಸೆತಗಳಲ್ಲಿ 135 ರನ್ ಸಿಡಿಸಿದ 24 ವರ್ಷದ ಅಭಿಷೇಕ್, ಬುಧವಾರ ಪ್ರಕಟಗೊಂಡ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 829 ರೇಟಿಂಗ್ ಅಂಕಗಳೊಂದಿಗೆ 38 ಸ್ಥಾನಮೇಲಕ್ಕೇರಿದ್ದಾರೆ.

ಇಂಗ್ಲೆಂಡ್ ಎದುರಿನ ಕೊನೆಯ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಇದಾದ ಬಳಿಕವೂ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದ ಅಭಿಷೇಕ್ ಶರ್ಮಾ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು. ಒಟ್ಟು 54 ಎಸೆತಗಳನ್ನು ಎದುರಿಸಿ ಬರೋಬ್ಬರಿ 13 ಮುಗಿಲೆತ್ತರದ ಸಿಕ್ಸರ್ ಸಹಿತ ಆಕರ್ಷಕ 135 ರನ್ ಸಿಡಿಸಿದ್ದರು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ದಾಖಲಾದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ.

ರೋಹಿತ್ ಶರ್ಮಾ ಮೇಲೆ ಬಿಸಿಸಿಐ ಒತ್ತಡ; ಚಾಂಪಿಯನ್ಸ್ ಟ್ರೋಫಿ ಬಳಿಕ ಹಿಟ್‌ಮ್ಯಾನ್ ನಿವೃತ್ತಿ?

ಸದ್ಯ ಅಗ್ರ-5 ಬ್ಯಾಟರ್‌ಗಳಲ್ಲಿ ಮೂವರು ಭಾರತೀಯರಿದ್ದಾರೆ. ತಿಲಕ್ ವರ್ಮಾ 3ನೇ, ಸೂರ್ಯಕುಮಾರ್ 5ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಟ್ರ್ಯಾವಿಸ್ ಹೆಡ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಟ್ರ್ಯಾವಿಸ್ ಹೆಡ್‌ ಅವರಿಗಿಂತ ಅಭಿಷೇಕ್ ಶರ್ಮಾ ಕೇವಲ 26 ರೇಟಿಂಗ್ ಅಂಕ ಹಿಂದಿದ್ದಾರೆ. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಪರ ಟ್ರ್ಯಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ಸದ್ಯದ ಇವರಿಬ್ಬರ ಫಾರ್ಮ್ ಫ್ರಾಂಚೈಸಿ ಹಿರಿಹಿರಿ ಹಿಗ್ಗುವಂತೆ ಮಾಡಿದೆ.

ಇಂದಿನಿಂದ ಭಾರತ vs ಇಂಗ್ಲೆಂಡ್‌ ಏಕದಿನ ಸರಣಿ: ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಅಗ್ನಿಪರೀಕ್ಷೆ

ಇನ್ನು, ಬೌಲರ್‌ಗಳ ಪಟ್ಟಿಯಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ 3 ಸ್ನಾನ ಮೇಲೇರಿ ಜಂಟಿ 2ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವರುಣ್ ಚಕ್ರವರ್ತಿ 14 ವಿಕೆಟ್ ಕಬಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಇನ್ನು ಎಡಗೈ ವೇಗಿ ಅರ್ಶದೀಪ್ ಸಿಂಗ್ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆದಿದ್ದು, ಒಂಬತ್ತನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.