ಹೊಸ ವರ್ಷದ ಆರಂಭದಲ್ಲಿ ಟೀಂ ಇಂಡಿಯಾ ಟಿ20 ಮತ್ತು ಏಕದಿನ ಕ್ರಿಕೆಟ್ ಮಾದರಿಗಳಲ್ಲಿ ಅಗ್ರಸ್ಥಾನಕ್ಕೇರಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಟಿ20ಯಲ್ಲಿ ನಂ.1 ಆಗಿದ್ದರೆ, ಏಕದಿನದಲ್ಲೂ ಭಾರತವೇ ಮೊದಲ ಸ್ಥಾನದಲ್ಲಿದೆ.
ದುಬೈ: 2025ಕ್ಕೆ ಗುಡ್ ಬೈ ಹೇಳಿ, 2026ಕ್ಕೆ ಅದ್ದೂರಿಯಾಗಿ ವೆಲ್ಕಮ್ ಮಾಡಿಯಾಗಿದೆ. ಇದೀಗ ಟೀಂ ಇಂಡಿಯಾ ಕೂಡಾ ಟಿ20 ಮಾದರಿಯಲ್ಲಿ ನಂ.1 ಸ್ಥಾನಿಯಾಗಿಯೇ ಹೊಸ ವರ್ಷಕ್ಕೆ ಕಾಲಿಟ್ಟಿದೆ. ಈ ವರ್ಷವೇ ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಯು ನಡೆಯಲಿದ್ದು, ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಆತಿಥ್ಯ ವಹಿಸಿವೆ. ಇದೀಗ ಐಸಿಸಿ ನೂತನ ಟಿ20 ರ‍್ಯಾಂಕಿಂಗ್ ಪ್ರಕಟವಾಗಿದ್ದು, ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಅಗ್ರಸ್ಥಾನಿಯಾಗಿ ಹೊಸ ವರ್ಷಕ್ಕೆ ಕಾಲಿಟ್ಟಿದೆ.
ಹೌದು, ಕಳೆದೊಂದು ವರ್ಷದಿಂದ ಟೀಂ ಇಂಡಿಯಾ, ಚುಟುಕು ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಸದ್ಯ ಭಾರತ 272 ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 267 ಪಾಯಿಂಟ್‌ಗಳೊಂದಿಗೆ ಆಸ್ಟ್ರೇಲಿಯಾ ಎರಡನೇ ಮತ್ತು 258 ಪಾಯಿಂಟ್‌ಗಳೊಂದಿಗೆ ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ.
ಏಕದಿನದಲ್ಲೂ ಭಾರತವೇ ನಂಬರ್ 1
ಭಾರತ ತಂಡವು ಕಳೆದ ವರ್ಷ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದು, ಟಿ20 ಮಾದರಿಯ ಜತೆಗೆ ಏಕದಿನ ಮಾದರಿಯಲ್ಲೂ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಶುಭ್‌ಮನ್ ಗಿಲ್ ನೇತೃತ್ವದ ಭಾರತ ಏಕದಿನ ತಂಡವು 121 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡರೆ, 113 ಪಾಯಿಂಟ್‌ಗಳೊಂದಿಗೆ ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ. 109 ಪಾಯಿಂಟ್‌ಗಳೊಂದಿಗೆ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಆಸೀಸ್ ಬಳಿ 124 ಪಾಯಿಂಟ್‌ಗಳಿವೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. 104 ಪಾಯಿಂಟ್‌ಗಳೊಂದಿಗೆ ಭಾರತ ನಾಲ್ಕನೇ ಸ್ಥಾನದಲ್ಲಿದೆ.
ಇನ್ನು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಭಾರತ ಆರನೇ ಸ್ಥಾನದಲ್ಲಿದೆ. ಆಸೀಸ್ ಆಡಿದ ಏಳು ಪಂದ್ಯಗಳಲ್ಲಿ ಆರರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಆಸೀಸ್ 85.71 ಪಾಯಿಂಟ್ ಶೇಕಡಾವಾರು ಮತ್ತು 72 ಪಾಯಿಂಟ್‌ಗಳನ್ನು ಖಾತೆಯಲ್ಲಿ ಹೊಂದಿದೆ. ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್‌ಗಳಲ್ಲಿ ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡ ನ್ಯೂಜಿಲೆಂಡ್ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಅವರಿಗೆ 77.78 ಪಾಯಿಂಟ್ ಶೇಕಡಾವಾರು ಇದೆ. ಕಿವೀಸ್ 28 ಪಾಯಿಂಟ್‌ಗಳನ್ನು ಗಳಿಸಿದೆ. ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ ಇದು ನ್ಯೂಜಿಲೆಂಡ್‌ನ ಮೊದಲ ಸರಣಿಯಾಗಿತ್ತು.
ಮೂರನೇ ಸ್ಥಾನಕ್ಕೆ ಕುಸಿದ ಹಾಲಿ ಚಾಂಪಿಯನ್ ಹರಿಣಗಳು
ನ್ಯೂಜಿಲೆಂಡ್ ತಂಡದ ಅದ್ಭುತ ಪ್ರದರ್ಶನದಿಂದಾಗಿ ಹಾಲಿ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ಮೂರನೇ ಸ್ಥಾನಕ್ಕೆ ಕುಸಿದಿದೆ. ಭಾರತದ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ಹಾಲಿ ಚಾಂಪಿಯನ್ನರು ನಾಲ್ಕು ಟೆಸ್ಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಮೂರು ಗೆಲುವು ಮತ್ತು ಒಂದು ಸೋಲಿನೊಂದಿಗೆ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ 36 ಪಾಯಿಂಟ್ ಮತ್ತು 75 ಪಾಯಿಂಟ್ ಶೇಕಡಾವಾರು ಹೊಂದಿದೆ. ಆಡಿದ ಎರಡು ಟೆಸ್ಟ್‌ಗಳಲ್ಲಿ ಒಂದು ಗೆಲುವು ಮತ್ತು ಒಂದು ಡ್ರಾದೊಂದಿಗೆ 16 ಪಾಯಿಂಟ್ ಮತ್ತು 66.67 ಪಾಯಿಂಟ್ ಶೇಕಡಾವಾರು ಹೊಂದಿರುವ ಶ್ರೀಲಂಕಾ ನಾಲ್ಕನೇ ಸ್ಥಾನದಲ್ಲಿದೆ. ಎರಡು ಟೆಸ್ಟ್‌ಗಳಲ್ಲಿ ಒಂದು ಗೆಲುವು ಮತ್ತು ಒಂದು ಸೋಲಿನೊಂದಿಗೆ 12 ಪಾಯಿಂಟ್ ಮತ್ತು 50 ಪಾಯಿಂಟ್ ಶೇಕಡಾವಾರು ಹೊಂದಿರುವ ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಟೆಸ್ಟ್‌ಗಳನ್ನು ಆಡಿದ ತಂಡ ಭಾರತ. ಒಂಬತ್ತು ಟೆಸ್ಟ್‌ಗಳನ್ನು ಆಡಿರುವ ಭಾರತ ನಾಲ್ಕು ಗೆಲುವು, ನಾಲ್ಕು ಸೋಲು ಮತ್ತು ಒಂದು ಡ್ರಾದೊಂದಿಗೆ 52 ಪಾಯಿಂಟ್ ಮತ್ತು 48.15 ಪಾಯಿಂಟ್ ಶೇಕಡಾವಾರು ಗಳಿಸಿ ಸದ್ಯ ಆರನೇ ಸ್ಥಾನದಲ್ಲಿದೆ.


