ಶೀಘ್ರದಲ್ಲೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟ..!
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭ
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 10 ತಂಡಗಳು ಭಾಗಿ
ಏಕದಿನ ವಿಶ್ವಕಪ್ನ ವೇಳಾಪಟ್ಟಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ವೇಳೆ ಬಿಡುಗಡೆಯಾಗಲಿದೆ
ಅಹಮದಾಬಾದ್(ಮೇ.28): ಮುಂಬರುವ ಐಸಿಸಿ ಏಕದಿನ ವಿಶ್ವಕಪ್ನ ವೇಳಾಪಟ್ಟಿಯನ್ನು ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ವೇಳೆ ಬಿಡುಗಡೆಯಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. ಬಹುನಿರೀಕ್ಷಿತ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಜೂನ್ 07ರಿಂದ 11ರವರೆಗೆ ಲಂಡನ್‌ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ. ಚಾಂಪಿಯನ್ ಪಟ್ಟಕ್ಕಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ.
ಶನಿವಾರ ಬಿಸಿಸಿಐ ವಿಶೇಷ ಸಭೆ ಬಳಿಕ ಮಾತನಾಡಿದ ಅವರು, ‘ವಿಶ್ವಕಪ್ ನಡೆಯುವ ಕ್ರೀಡಾಂಗಣಗಳ ಪಟ್ಟಿ, ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ಟೆಸ್ಟ್ ಫೈನಲ್ ವೇಳೆ ಸುದ್ದಿಗೋಷ್ಠಿ ಮೂಲಕ ಬಿಡುಗಡೆ ಮಾಡುತ್ತೇವೆ. ಏಷ್ಯಾಕಪ್ ಆತಿಥ್ಯದ ಬಗ್ಗೆ ಎಸಿಸಿ ಸದಸ್ಯರ ಜೊತೆಗಿನ ಸಭೆ ಬಳಿಕ ನಿರ್ಧರಿಸುತ್ತೇವೆ’ ಎಂದಿದ್ದಾರೆ. ಅಲ್ಲದೇ ವಿಶ್ವಕಪ್, ವುಮೆನ್ಸ್ ಪ್ರೀಮಿಯರ್ ಲೀಗ್ ಆಯೋಜನಾ ಸಮಿತಿ ಹಾಗೂ ಲೈಂಗಿಕ ಕಿರುಕುಳ ತಡೆಗೆ ವಿಶೇಷ ಸಮಿತಿಯನ್ನು ಶೀಘ್ರದಲ್ಲೇ ರಚಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಖ್ಯಾತ ಕ್ರಿಕೆಟ್ ವೆಬ್‌ಸೈಟ್ ESPNCricinfo ಪ್ರಕಾರ, 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ನಡೆಯಲಿದೆ. 10 ತಂಡಗಳು ಪಾಲ್ಗೊಳ್ಳಲಿರುವ ಈ ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಬೆಂಗಳೂರು, ಚೆನ್ನೈ, ಡೆಲ್ಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತಾ, ಲಖನೌ, ಇಂದೋರ್, ರಾಜ್‌ಕೋಟ್, ಮುಂಬೈ ಹಾಗೂ ತಿರುವನಂತಪುರಂ ಸೇರಿದಂತೆ ಒಟ್ಟು ದೇಶದ 12 ನಗರಗಳಲ್ಲಿ ಪಂದ್ಯಾಟಗಳು ಜರುಗಲಿವೆ ಎಂದು ವರದಿಯಾಗಿದೆ. ಈಗಾಗಲೇ ಎಂಟು ತಂಡಗಳು 2023ರ ಏಕದಿನ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆಯನ್ನು ಪಡೆದಿದ್ದು, ಇನ್ನೆರಡು ತಂಡಗಳು ಅರ್ಹತಾ ಸುತ್ತಿನಲ್ಲಿ ಗೆದ್ದು, ಏಕದಿನ ವಿಶ್ವಕಪ್ ಪ್ರಧಾನ ಸುತ್ತಿಗೆ ಲಗ್ಗೆಯಿಡಲಿವೆ.
ಆತಿಥೇಯ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಈಗಾಗಲೇ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿವೆ. ಇನ್ನು ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ತಂಡ ಕೂಡಾ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಪಡೆಯಲು ಯಶಸ್ವಿಯಾಗಿದೆ.
IPL 2023: ಹಲವು ಅಪರೂಪದ ದಾಖಲೆಗೆ ಸಾಕ್ಷಿಯಾಗುತ್ತಾ ಐಪಿಎಲ್ ಫೈನಲ್..?
ಇನ್ನೆರಡು ಸ್ಥಾನಗಳಿಗಾಗಿ ಜೂನ್ ಹಾಗೂ ಜುಲೈನಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಜಿಂಬಾಬ್ವೆಯಲ್ಲಿ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ಗಳಾದ ವೆಸ್ಟ್ ಇಂಡೀಸ್, ಶ್ರೀಲಂಕ ಸೇರಿದಂತೆ ಆತಿಥೇಯ ಜಿಂಬಾಬ್ವೆ, ನೆದರ್‌ಲೆಂಡ್ಸ್, ಐರ್ಲೆಂಡ್, ನೇಪಾಳ, ಓಮನ್, ಸ್ಕಾಟ್ಲೆಂಡ್, ಯುಎಇ ತಂಡಗಳು ಸೆಣಸಾಡಲಿವೆ.
ಅಕ್ಟೋಬರ್ 05ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏಕದಿನ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿವೆ. ಇನ್ನು ಫೈನಲ್ ಪಂದ್ಯವು ಇದೇ ಮೈದಾನದಲ್ಲಿ ನವೆಂಬರ್ 19ರಂದು ಜರುಗಲಿದೆ ಎನ್ನಲಾಗುತ್ತಿದೆ.