ದುಬೈ(ಜ.21):ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಮುಕ್ತಾಯವಾದ ಬೆನ್ನಲ್ಲೇ ಸೋಮವಾರ ಐಸಿಸಿ ಏಕದಿನ ಕ್ರಿಕೆಟಿಗರ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಭಾರತೀಯರೇ ನಂ.1 ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಮೊದಲೆರಡು ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಆಸ್ಪ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ಈ ಇಬ್ಬರ ನಡುವೆ 18 ಅಂಕಗಳ ಅಂತರವಿದೆ. ಕೊಹ್ಲಿ 886 ಅಂಕ ಹೊಂದಿದ್ದರೆ, ರೋಹಿತ್‌ 868 ರನ್‌ ಗಳಿಸಿದ್ದಾರೆ. 

ಇನ್ನುಳಿದಂತೆ ಪಾಕಿಸ್ತಾನದ ಬಾಬರ್‌ ಆಜಂ 829 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಶಿಖರ್‌ ಧವನ್‌ 7 ಸ್ಥಾನಗಳ ಏರಿಕೆ ಕಂಡು 15ನೇ ಸ್ಥಾನದಲ್ಲಿದ್ದರೆ, ಕೆ.ಎಲ್‌.ರಾಹುಲ್‌ 21 ಸ್ಥಾನಗಳ ಏರಿಕೆ ಕಂಡು 50ನೇ ಸ್ಥಾನದಲ್ಲಿದ್ದಾರೆ.  ಭಾರತ ವಿರುದ್ಧ ಆಡಿದ 2 ಇನಿಂಗ್ಸ್‌ಗಳಲ್ಲಿ ಒಂದು ಶತಕ ಸಹಿತ 229 ರನ್ ಬಾರಿಸಿದ್ದ ಸ್ಟೀವ್ ಸ್ಮಿತ್ ನಾಲ್ಕು ಸ್ಥಾನ ಏರಿಕೆ ಕಂಡು 23ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ನ್ಯೂಜಿಲೆಂಡ್ ಎಡಗೈ ವೇಗಿ ಟ್ರೆಂಟ್ ಬೋಲ್ಟ್, ಆಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್, ದಕ್ಷಿಣ ಆಫ್ರಿಕಾದ ಕಗಿಸೋ ರಬಾಡ ಹಾಗೂ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಕ್ರಮವಾಗಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ತಂಡಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಏಕದಿನ ಚಾಂಪಿಯನ್ ಇಂಗ್ಲೆಂಡ್ ಮೊದಲ ಸ್ಥಾನದಲ್ಲೇ ಭದ್ರವಾಗಿದೆ.