13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಐಸಿಸಿ ಭರದ ಸಿದ್ದತೆವಿಶ್ವಕಪ್‌ ಟ್ರೋಫಿಯನ್ನು ವಿಶಿಷ್ಟ ರೀತಿಯಲ್ಲಿ ಸೋಮವಾರ ಬಾಹ್ಯಾಕಾಶದಲ್ಲಿ ಅನಾವರಣ2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ

ದುಬೈ: ಬಹುನಿರೀಕ್ಷಿತ 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್‌ ಟ್ರೋಫಿಯನ್ನು ವಿಶಿಷ್ಟ ರೀತಿಯಲ್ಲಿ ಸೋಮವಾರ ಬಾಹ್ಯಾಕಾಶದಲ್ಲಿ ಅನಾವರಣಗೊಳಿಸಲಾಗಿದೆ. ಈ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ ಯಾವುದೇ ಕ್ರೀಡೆಯ ಮೊದಲ ಟ್ರೋಫಿ ಎನಿಸಿಕೊಂಡಿತು. ವಿಶ್ವಕಪ್‌ ಅ.5ರಂದು ಆರಂಭಗೊಳ್ಳಲಿದ್ದು, ಇದರ ಟ್ರೋಫಿ ಟೂರ್‌ ವಿಶ್ವದ ವಿವಿಧ ದೇಶಗಳಲ್ಲಿ ಸಂಚರಿಸಲಿದೆ. 

ಇದರ ಭಾಗವಾಗಿ ಸೋಮವಾರ ಟ್ರೋಫಿಯನ್ನು 1,20,000 ಫೀಟ್‌ ಎತ್ತರಕ್ಕೆ ಏರ್‌ ಬಲೂನ್‌ ಮೂಲಕ ಕಳುಹಿಸಿ ಅನಾವರಣಗೊಳಿಸಲಾಯಿತು. ಬಾಹ್ಯಾಕಾಶದಲ್ಲೇ ಕ್ಲಿಕ್ಕಿಸಿದ ಟ್ರೋಫಿಯ ಫೋಟೋಗಳನ್ನು ಐಸಿಸಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್‌ ಆಗಿದೆ. ಟ್ರೋಫಿ ಟೂರ್‌ ಇಂಗ್ಲೆಂಡ್‌, ಪಾಕಿಸ್ತಾನ, ಫ್ರಾನ್ಸ್‌, ಕುವೈತ್‌ ಸೇರಿದಂತೆ 18 ರಾಷ್ಟ್ರಗಳಲ್ಲಿ ಸಂಚರಿಸಲಿದ್ದು, ಸೆಪ್ಟೆಂಬರ್ 4ರಂದು ಭಾರತದಲ್ಲಿ ಮುಕ್ತಾಯಗೊಳ್ಳಲಿದೆ.

Scroll to load tweet…

ಏಕದಿನ ವಿಶ್ವಕಪ್‌ ಅಧಿಕೃತ ವೇಳಾಪಟ್ಟಿ ಇಂದು ಪ್ರಕಟ

ಮುಂಬೈ: ಮುಂಬರುವ ಬಹುನಿರೀಕ್ಷಿತ 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿ ಇಂದು ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ. ಮುಂಬೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಐಸಿಸಿ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.ಟೂರ್ನಿ ಆರಂಭಕ್ಕೆ ಸರಿಯಾಗಿ 100 ದಿನಗಳು ಬಾಕಿ ಇರುವಂತೆ ಐಸಿಸಿಯು ವೇಳಾಪಟ್ಟಿಯನ್ನು ಘೋಷಿಸಲಿದೆ. ಈ ಮೊದಲು ಟೂರ್ನಿಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಗೊಂಡಿತ್ತು. ಬಹುತೇಕ ಅದೇ ವೇಳಾಪಟ್ಟಿಯನ್ನು ಬಿಸಿಸಿಐ, ಐಸಿಸಿ ಅಧಿಕೃತಗೊಳಿಸಿದೆ ಎಂದು ತಿಳಿದುಬಂದಿದೆ.

ಅಹಮದಾಬಾದ್‌ನ ಮೋದಿ ಸ್ಟೇಡಿಯಂನಲ್ಲಿ ಆಡಲು ಒಪ್ಪಿಕೊಂಡ ಪಾಕ್‌; ವಿಶ್ವಕಪ್ ವೇಳಾಪಟ್ಟಿ ಪ್ರಕಟಣೆಗೆ ಕ್ಷಣಗಣನೆ

ತನ್ನ ಪಂದ್ಯಗಳು ನಡೆಯುವ ಸ್ಥಳಗಳನ್ನು ಬದಲಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಲ್ಲಿಸಿದ್ದ ಮನವಿಯನ್ನು ಐಸಿಸಿ ತಿರಸ್ಕರಿದೆ ಎನ್ನಲಾಗಿದೆ. ಹೀಗಾಗಿ ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಸಾಧ್ಯತೆಯಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಟೂರ್ನಿಗೆ ಅ.5ರಂದು ಚಾಲನೆ ಸಿಗಲಿದೆ. ಬೆಂಗಳೂರು ಸೇರಿದಂತೆ 9 ಕ್ರೀಡಾಂಗಣಗಳು ಟೂರ್ನಿಗೆ ಆತಿಥ್ಯ ವಹಿಸಲಿದೆ ಎಂದು ತಿಳಿದುಬಂದಿದೆ.

ವೆಸ್ಟ್‌ಇಂಡೀಸ್‌ ವಿರುದ್ಧ ಡಚ್‌ಗೆ ‘ಸೂಪರ್‌’ ಜಯ!

ಹರಾರೆ: ಭಾರೀ ರೋಚಕತೆ ಸೃಷ್ಟಿಸಿದ್ದ ವೆಸ್ಟ್‌ಇಂಡೀಸ್‌ ವಿರುದ್ಧದ ಏಕದಿನ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ನೆದರ್‌ಲೆಂಡ್ಸ್‌ ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿದೆ. ಇದು 2 ಬಾರಿ ಚಾಂಪಿಯನ್‌ ವಿಂಡೀಸ್‌ಗೆ ಸತತ 2ನೇ ಸೋಲು. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌, ನಿಕೋಲಸ್‌ ಪೂರನ್‌(65 ಎಸೆತದಲ್ಲಿ 104) ಶತಕದ ನೆರವಿನಿಂದ 6 ವಿಕೆಟ್‌ಗೆ 376 ರನ್‌ ಕಲೆಹಾಕಿತು. ಬೃಹತ್‌ ಗುರಿ ಬೆನ್ನತ್ತಿದ ನೆದರ್‌ಲೆಂಡ್ಸ್‌ ತೇಜ ನಿಡಮನೂರು(111) ಶತಕದಿಂದಾಗಿ 50 ಓವರಲ್ಲಿ 9 ವಿಕೆಟ್‌ಗೆ 374 ರನ್‌ ಗಳಿಸಿತು. ಕೊನೆ ಎಸೆತದಲ್ಲಿ ವಿಕೆಟ್‌ ಕಳೆದುಕೊಳ್ಳುವುದರೊಂದಿಗೆ ಪಂದ್ಯ ಟೈ ಆಯಿತು.

ಹೀಗಾಗಿ ಫಲಿತಾಂಶ ನಿರ್ಣಯಿಸಲು ಸೂಪರ್‌ ಓವರ್‌ ಮೊರೆಹೋಗಲಾಯಿತು. ನೆದರ್‌ಲೆಂಡ್ಸ್‌ ವ್ಯಾನ್‌ ಡೀಕ್‌ರ ಸ್ಫೋಟಕ ಆಟ(3 ಬೌಂಡರಿ, 3 ಸಿಕ್ಸರ್‌)ದಿಂದಾಗಿ 30 ರನ್‌ ದೋಚಿದರೆ, ವಿಂಡೀಸ್‌ 8 ರನ್‌ಗೆ ಆಲೌಟಾಯಿತು.

Scroll to load tweet…

ಜಿಂಬಾಬ್ವೆಗೆ 303 ರನ್‌ ಗೆಲುವು!

ಅಮೆರಿಕ ವಿರುದ್ಧ ಜಿಂಬಾಬ್ವೆ 304 ರನ್‌ ಬೃಹತ್‌ ಗೆಲುವು ಸಾಧಿಸಿದ್ದು, ಪುರುಷರ ಏಕದಿನಲ್ಲಿ 2ನೇ ಗರಿಷ್ಠ ರನ್‌ ಅಂತರದ ಗೆಲುವು ಎನಿಸಿಕೊಂಡಿತು. ಇತ್ತೀಚೆಗಷ್ಟೇ ಭಾರತ, ಶ್ರೀಲಂಕಾ ವಿರುದ್ಧ 317 ರನ್‌ಗಳಿಂದ ಗೆದ್ದಿದ್ದು ದಾಖಲೆಯಾಗಿಯೇ ಉಳಿದಿದೆ. ಸೋಮವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ 6 ವಿಕೆಟ್‌ಗೆ 408 ರನ್‌ ಗಳಿಸಿತು. ಏಕದಿನಲ್ಲಿ ಇದು ಜಿಂಬಾಬ್ವೆಯ ಮೊದಲ 400 ಮೊತ್ತ. ದೊಡ್ಡ ಗುರಿ ಬೆನ್ನತ್ತಿದ ಅಮೆರಿಕ 104 ರನ್‌ಗೆ ಆಲೌಟಾಯಿತು.

ಸತತ 3 ಪಂದ್ಯದಲ್ಲಿ 5 ವಿಕೆಟ್‌: ಹಸರಂಗ ದಾಖಲೆ

ಹರಾರೆ: ಶ್ರೀಲಂಕಾದ ವಾನಿಂಡು ಹಸರಂಗ ಏಕದಿನ ಕ್ರಿಕೆಟ್‌ನಲ್ಲಿ ಸತತ 3 ಪಂದ್ಯಗಳಲ್ಲಿ 5 ವಿಕೆಟ್‌ ಗೊಂಚಲು ಪಡೆದ ಮೊದಲ ಸ್ಪಿನ್ನರ್‌ ಹಾಗೂ ಒಟ್ಟಾರೆ 2ನೇ ಬೌಲರ್‌ ಎನಿಸಿಕೊಂಡಿದ್ದಾರೆ. ಭಾನುವಾರ ಐರ್ಲೆಂಡ್‌ ವಿರುದ್ಧ ಏಕದಿನ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ 79ಕ್ಕೆ 5 ವಿಕೆಟ್‌ ಕಿತ್ತು ಈ ಸಾಧನೆ ಮಾಡಿದರು. ಇದಕ್ಕೂ ಮುನ್ನ ಯುಎಇ ವಿರುದ್ಧ 24ಕ್ಕೆ 6, ಒಮಾನ್‌ ವಿರುದ್ಧ 13 ರನ್‌ಗೆ 5 ವಿಕೆಟ್‌ ಪಡೆದಿದ್ದರು. ಪಾಕಿಸ್ತಾನದ ವೇಗಿ ವಖಾರ್‌ ಯೂನಿಸ್‌ 1990ರಲ್ಲಿ ಸತತ 3 ಪಂದ್ಯಗಳಲ್ಲಿ 5 ವಿಕೆಟ್‌ ಗೊಂಚಲು ಪಡೆದಿದ್ದರು.