ICC Removes Bangladesh from T20 World Cup 2026; Scotland Joins ಐಸಿಸಿ ಅಂತಿಮ ತೀರ್ಪು ನೀಡಿದೆ. ಬಾಂಗ್ಲಾದೇಶವನ್ನು ಟಿ20 ವಿಶ್ವಕಪ್‌ನಿಂದ ಹೊರಹಾಕಲಾಗಿದ್ದು, ಸ್ಕಾಟ್ಲೆಂಡ್ ತಂಡಕ್ಕೆ ಚಾನ್ಸ್ ನೀಡಿದೆ.
ದುಬೈ (ಜ.24):ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಬಾಂಗ್ಲಾದೇಶ ತಂಡ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶನಿವಾರ ಪುರುಷರ ಟಿ 20 ವಿಶ್ವಕಪ್ 2026 ರಿಂದ ಬಾಂಗ್ಲಾದೇಶವನ್ನು ಹೊರಹಾಕಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಭಾಗವಹಿಸುವಿಕೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಬುಧವಾರ 24 ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಬಿಸಿಬಿ ತನ್ನ ನಿಲುವಿನಿಂದ ಹಿಂದೆ ಸರಿಯಲು ನಿರಾಕರಿಸಿತು, ಬಿಸಿಬಿ ಅಧ್ಯಕ್ಷ ಅಮಿನುಲ್ ಇಸ್ಲಾಂ ಮತ್ತು ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಭಾರತಕ್ಕೆ ಪ್ರಯಾಣಿಸುವುದು ಸುರಕ್ಷಿತವಲ್ಲ ಎಂದು ಮತ್ತೊಮ್ಮೆ ಐಸಿಸಿಗೆ ತಿಳಿಸಿದ್ದರು. ಬಿಕ್ಕಟ್ಟನ್ನು ಪರಿಹರಿಸಲು ಬಾಂಗ್ಲಾದೇಶ ಶುಕ್ರವಾರ ಒಂದು ಅಂತಿಮ ಪ್ರಯತ್ನ ಮಾಡಿತು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಮತ್ತು ಅಂತಿಮವಾಗಿ ಸ್ಕಾಟ್ಲೆಂಡ್ ತಂಡಕ್ಕೆ ಟಿ20 ವಿಶ್ವಕಪ್‌ಗೆ ಅವಕಾಶ ನೀಡಲಾಗಿದೆ. ಜಾಗತಿಕ ಕ್ರೀಡಾಕೂಟದಿಂದ ಕ್ರಿಕೆಟ್ ತಂಡವನ್ನು ಹೊರಹಾಕಿದ ಪ್ರಕರಣ ಇದೇ ಮೊದಲಾಗಿದೆ.
ಫೆಬ್ರವರಿ 7 ರಿಂದ ಟಿ20 ವಿಶ್ವಕಪ್ ಆರಂಭ
ಫೆಬ್ರವರಿ 7 ರಿಂದ ಪ್ರಾರಂಭವಾಗುವ ಟೂರ್ನಮೆಂಟ್‌ಗಾಗಿ ಭಾರತಕ್ಕೆ ಪ್ರಯಾಣಿಸಲು ಬಾಂಗ್ಲಾದೇಶ ಸರ್ಕಾರ ಅನುಮತಿ ನೀಡಿಲ್ಲ ಎಂದು ಬಿಸಿಬಿ ತಿಳಿಸಿದ ನಂತರ, ಐಸಿಸಿ ಶುಕ್ರವಾರ ಸಂಜೆ ಬಿಸಿಬಿಗೆ ಈ ನಿರ್ಧಾರವನ್ನು ತಿಳಿಸಿ ಇಮೇಲ್ ಕಳುಹಿಸಿದೆ ಎಂದು ತಿಳಿದುಬಂದಿದೆ. ಗುರುವಾರ ಐಸಿಸಿಗೆ ನೀಡಿದ ಪತ್ರದಲ್ಲಿ, ಬಿಸಿಬಿ ಈ ಸಮಸ್ಯೆಯನ್ನು ಐಸಿಸಿಯ ವಿವಾದ ಪರಿಹಾರ ಸಮಿತಿ (ಡಿಆರ್‌ಸಿ)ಗೆ ಕೊಂಡೊಯ್ಯಲು ಬಯಸಿತ್ತು. ಬಿಸಿಬಿ ಇದನ್ನು ಯಾವ ಆಧಾರದ ಮೇಲೆ ಡಿಆರ್‌ಸಿಗೆ ಕೊಂಡೊಯ್ಯುತ್ತಿದೆ ಅಥವಾ ಐಸಿಸಿಯ ಪ್ರತಿಕ್ರಿಯೆ ಏನೆಂದು ಈವರೆಗೂ ತಿಳಿದಿಲ್ಲ. ಡಿಆರ್‌ಸಿ ಸ್ವತಂತ್ರ ಸಮಿತಿಯಾಗಿದ್ದು, ಸದಸ್ಯ ಮಂಡಳಿ ಮತ್ತು ಆಡಳಿತ ಮಂಡಳಿಯ ನಡುವಿನ ವಿವಾದಗಳು ಸೇರಿದಂತೆ ವಿವಿಧ ರೀತಿಯ ವಿವಾದಗಳನ್ನು ಪರಿಹರಿಸಲು ಸಹಾಯ ಮಾಡಲು ಐಸಿಸಿಯಿಂದ ಸಭೆ ಸೇರುತ್ತದೆ.
ಬಾಂಗ್ಲಾದೇಶ ಭಾರತಕ್ಕೆ ಪ್ರಯಾಣಿಸದಿದ್ದರೆ ಬದಲಿ ತಂಡಕ್ಕಾಗಿ ಐಸಿಸಿ ಮಂಡಳಿಯು ಸ್ಪಷ್ಟ ಬಹುಮತದಿಂದ ಮತ ಚಲಾಯಿಸಿರುವುದರಿಂದ, ಬಿಸಿಬಿ ಡಿಆರ್‌ಸಿ ಮಾರ್ಗವನ್ನು ತೆಗೆದುಕೊಳ್ಳಬಹುದೇ ಎಂದು ನೋಡಬೇಕಾಗಿದೆ. "ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ನಂತರ ತಂಡವನ್ನು ಹೊರಗೆ ಕಳುಹಿಸಲಾಗಿದೆ ಎಂದು ದೃಢಪಡಿಸುವ ಪತ್ರವನ್ನು ಐಸಿಸಿ ಬಿಸಿಬಿಗೆ ಕಳುಹಿಸಿದೆ. ಬದಲಿ ತಂಡವಾಗಿ ಆಯ್ಕೆ ಮಾಡಲಾದ ಬಗ್ಗೆ ಸ್ಕಾಟ್ಲೆಂಡ್‌ಗೆ ಸಹ ತಿಳಿಸಲಾಗಿದೆ. ಔಪಚಾರಿಕತೆಗಳು ಮುಗಿದಿವೆ" ಎಂದು ಐಸಿಸಿಯ ಮೂಲಗಳು ತಿಳಿಸಿವೆ.
ಮುಸ್ತಾಫಿಜುರ್ ರೆಹಮಾನ್‌ಗೆ ಗೇಟ್‌ಪಾಸ್ ನೀಡಿದ್ದ ಕ್ಷಣದಿಂದ ಶುರುವಾದ ವಿವಾದ
ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಹೊರಗಿಟ್ಟ ನಂತರ, ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಆಡದೇ ಇರುವ ನಿರ್ಧಾರವನ್ನು ಬೆದರಿಕೆಯಾಗಿ ಬಳಸಿಕೊಂಡಿತ್ತು. ಈ ಬಗ್ಗೆ ಐಸಿಸಿಗೆ ಪದೇ ಪದೇ ಈಮೇಲ್ ಕಳುಹಿಸಿ, ಭಾರತದಲ್ಲಿ ತಂಡಕ್ಕೆ ಭದ್ರತಾ ಆತಂಕ ಇದೆ ಎಂದು ತಿಳಿಸುವ ಪ್ರಯತ್ನ ಮಾಡಿತ್ತು. ಆದರೆ, ಐಸಿಸಿ ತನಿಖೆಯ ಬಳಿಕ ಭಾರತದಲ್ಲಿ ಬಾಂಗ್ಲಾ ತಂಡಕ್ಕೆ ಯಾವುದೇ ಭದ್ರತಾ ಆತಂಕ ಇಲ್ಲ ಅನ್ನೋದನ್ನು ಸ್ಪಷ್ಟಪಡಿಸಿ, ಭಾರತಕ್ಕೆ ತಂಡ ಪ್ರಯಾಣ ಮಾಡಲೇಬೇಕು ಎಂದು ತಿಳಿಸಲಾಗಿತ್ತು.
ಬಿಸಿಬಿ ಅಧಿಕಾರಿಗಳಿಗೆ ತನ್ನ ನಿಲುವನ್ನು ಅರ್ಥಮಾಡಿಸಲು ಐಸಿಸಿ ನಿಯೋಗವೊಂದು ಢಾಕಾಗೆ ಭೇಟಿ ನೀಡಿತು. ಆದರೆ, ಯಾವುದೇ ತೀರ್ಮಾನಕ್ಕೆ ಬರದ ಕಾರಣ, ಜನವರಿ 21 ರೊಳಗೆ ವಿಶ್ವಕಪ್‌ನಲ್ಲಿ ಭಾಗವಹಿಸುವುದು ನಿರ್ಧರಿಸಬೇಕು ಇಲ್ಲದೆ ಇದ್ದಲ್ಲಿ ಬೇರೆ ತಂಡಕ್ಕೆ ಅವಕಾಶ ನೀಡುವುದಾಗಿ ಐಸಿಸಿ ಎಚ್ಚರಿತ್ತು. ಬಳಿಕ ಬಾಂಗ್ಲಾದೇಶ ವೇಳಾಪಟ್ಟಿಯನ್ನು ಬದಲಾಯಿಸಿ ತನ್ನ ಪಂದ್ಯಗಳನ್ನು ಬೇರೆಡೆ ನಡೆಸಲು ಮನವಿ ಮಾಡಿತ್ತು. ಇದಕ್ಕೂ ಐಸಿಸಿ ಯಾವುದೇ ತಲೆಕಡಿಸಿಕೊಂಡಿರಲಿಲ್ಲ. ಕೊನೆಗೆ ಬಿಸಿಬಿಯ ಅಂತಿಮ ನಿರ್ಧಾರ ತಿಳಿಸಲು 24 ಗಂಟೆಯ ಕೊನೆಯ ಕಾಲಾವಕಾಶವನ್ನೂ ನೀಡಲಾಗಿತ್ತು.


