ದುಬೈನಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. 2023ರ ವಿಶ್ವಕಪ್ ಫೈನಲ್ ಬಳಿಕ ಉಭಯ ತಂಡಗಳು ಏಕದಿನ ಮಾದರಿಯಲ್ಲಿ ಸೆಣಸಲಿವೆ. ಭಾರತವು 'ಎ' ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಫೈನಲ್ ರೇಸ್‌ನಲ್ಲಿದೆ. ತಂಡದಲ್ಲಿ ಒಂದು ಬದಲಾವಣೆಯಾಗುವ ಸಾಧ್ಯತೆ ಇದ್ದು, ವರುಣ್ ಚಕ್ರವರ್ತಿ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ದುಬೈ: ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಹೈವೋಲ್ಟೇಜ್ ಕದನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್ ಟಿಕೆಟ್‌ಗಾಗಿ ಕಾದಾಡಲಿವೆ. 2023 ನವೆಂಬರ್ 19ರಂದು ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ ಬಳಿಕ ಏಕದಿನ ಮಾದರಿಯಲ್ಲಿ ಇದೇ ಮಾದರಿಯಲ್ಲಿ ಉಭತ ತಂಡಗಳು ಮುಖಾಮುಖಿಯಾಗುತ್ತಿದ್ದು, ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ರೋಹಿತ್ ಶರ್ಮಾ ಪಡೆ ಸಜ್ಜಾಗಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ 'ಎ' ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೆಮೀಸ್ ಪ್ರವೇಶಿಸಿರುವ ಭಾರತ ತಂಡವು ಮೇಲ್ನೋಟಕ್ಕೆ ಬಲಾಢ್ಯವಾಗಿಯೇ ಗುರುತಿಸಿಕೊಂಡಿದ್ದು, ಫೈನಲ್‌ಗೇರುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗದ ಕುರಿತಂತೆ ಆಯ್ಕೆಯ ಗೊಂದಲಕ್ಕೆ ಸಿಲುಕಿದೆ. ಕಳೆದ ಪಂದ್ಯದಲ್ಲಿ ಹರ್ಷಿತ್ ರಾಣಾಗೆ ವಿಶ್ರಾಂತಿ ನೀಡಿ ಮಿಸ್ಟ್ರಿ ಸ್ಪಿನ್ನರ್ ಖ್ಯಾತಿಯ ವರುಣ್ ಚಕ್ರವರ್ತಿಗೆ ಆಡುವ ಹನ್ನೊಂದರ ಬಳಗದಲ್ಲಿ ಮಣೆ ಹಾಕಲಾಗಿತ್ತು. ಕಿವೀಸ್ ಎದುರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ವರುಣ್ ಚಕ್ರವರ್ತಿ ದುಬೈ ಪಿಚ್‌ನಲ್ಲಿ ತಾವೆಷ್ಟು ಅಪಾಯಕಾರಿ ಬೌಲರ್ ಎನ್ನುವುದನ್ನು ಸಾಬೀತು ಮಾಡಿದ್ದರು. ಹೀಗಾಗಿ ಇಂದು ಟೀಂ ಇಂಡಿಯಾ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಐಸಿಸಿ ನಾಕೌಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಯಾವಾಗಲೂ ಅಪಾಯಕಾರಿ ತಂಡ ಎನಿಸಿಕೊಂಡಿರುವುದರಿಂದ ರೋಹಿತ್ ಶರ್ಮಾ ಪಡೆ ಸಾಕಷ್ಟು ಎಚ್ಚರಿಕೆಯಿಂದಲೇ ಇಂದಿನ ಪಂದ್ಯಕ್ಕೆ ತಂಡವನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದೆ. 

ಇದನ್ನೂ ಓದಿ:ಕಿವೀಸ್ ಕಿವಿಹಿಂಡಿದ ಬೀದರ್ ಹುಡುಗ ವರುಣ್ ಚಕ್ರವರ್ತಿಯ ಬಗ್ಗೆ ನಿಮಗೆಷ್ಟು ಗೊತ್ತು?

ಹೌದು, ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಹಾಗೂ ಉಪನಾಯಕ ಶುಭ್‌ಮನ್ ಗಿಲ್ ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಕೆ ಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಆಲ್ರೌಂಡರ್ ರೂಪದಲ್ಲಿ ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ. ಇನ್ನು ವೇಗದ ಬೌಲರ್ ರೂಪದಲ್ಲಿ ಮೊಹಮ್ಮದ್ ಶಮಿಗೆ ಇಂದು ಹರ್ಷಿತ್ ರಾಣಾ ಸಾಥ್ ನೀಡುವ ಸಾಧ್ಯತೆ ದಟ್ಟವಾಗಿದೆ. ಹೀಗಾದಲ್ಲಿ ತಜ್ಞ ಸ್ಪಿನ್ನರ್ ರೂಪದಲ್ಲಿ ಒಂದು ಸ್ಥಾನಕ್ಕಾಗಿ ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಯಾದವ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇರಲಿದ್ದು, ಬಹುತೇಕ ವರುಣ್ ಚಕ್ರವರ್ತಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಹೀಗಾದಲ್ಲಿ ಕುಲ್ದೀಪ್ ಯಾದವ್ ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ.

ವರುಣ್ ಚಕ್ರವರ್ತಿ ಟ್ರಂಪ್‌ಕಾರ್ಡ್: ಭಾರತ ಈ ಪಂದ್ಯದಲ್ಲೂ ಸ್ಪಿನ್ನರ್‌ಗಳ ಮೇಲೆ ಹೆಚ್ಚು ಅವಲಂಬಿತಗೊಳ್ಳಲಿದೆ. ಕಿವೀಸ್ ವಿರುದ್ಧ ಭಾರತದ ನಾಲ್ವರು ಸ್ಪಿನ್ನರ್‌ಗಳು ಒಟ್ಟು 39 ಓವರ್ ಬೌಲ್ ಮಾಡಿ 9 ವಿಕೆಟ್ ಕಬಳಿಸಿದ್ದರು. ನಾಲ್ವರ ಸ್ಟೆಲ್‌ಗಳಲ್ಲಿ ಒಟ್ಟು 128 ಡಾಟ್ ಬಾಲ್‌ಗಳಿದ್ದವು. ಈ ಪಂದ್ಯದಲ್ಲೂ ವರುಣ್ ಚಕ್ರವರ್ತಿಯೇ ಭಾರತದ ಟ್ರಂಪ್ ಕಾರ್ಡ್ ಆದರೆ ಅಚ್ಚರಿಯಿಲ್ಲ.

ಇದನ್ನೂ ಓದಿ: ಏಕದಿನ ಕ್ರಿಕೆಟ್‌ನಲ್ಲಿ ಇಂಡೋ-ಆಸೀಸ್ ಫೈಟ್; ಐಸಿಸಿ ಟೂರ್ನಿಯಲ್ಲಿ ಕಾಂಗರೂ ಮೇಲೆ ಭಾರತದ ರೆಕಾರ್ಡ್ ಹೇಗಿದೆ?

ಆಸ್ಟ್ರೇಲಿಯಾ ಎದುರಿನ ಸೆಮೀಸ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.

ಪಂದ್ಯ: ಮಧ್ಯಾಹ್ನ 2.30ಕ್ಕೆ (ಭಾರತೀಯ ಕಾಲಮಾನ) 
ಪ್ರಸಾರ: ಸ್ಟಾರ್‌ಸ್ಟೋರ್ಟ್ಸ್, ಜಿಯೋಹಾಟ್‌ಸ್ಟಾರ್