ದುಬೈನಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದು, ನ್ಯೂಜಿಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿದೆ. ಉಭಯ ತಂಡಗಳು ಐಸಿಸಿ ಟೂರ್ನಿಗಳಲ್ಲಿ ತಲಾ ಆರು ಪಂದ್ಯಗಳನ್ನು ಗೆದ್ದಿವೆ.

ದುಬೈ: 2025ನೇ ಸಾಲಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿಂದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದೆ.

ನಿರೀಕ್ಷೆಯಂತೆಯೇ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆಸ್ಟ್ರೇಲಿಯಾ ಎದುರು ಸೆಮಿಫೈನಲ್‌ನಲ್ಲಿ ಕಣಕ್ಕಿಳಿದ ತಂಡವೇ ಇಂದು ಫೈನಲ್‌ನಲ್ಲಿ ಕಣಕ್ಕಿಳಿದಿದೆ. ಇನ್ನೊಂದೆಡೆ ನ್ಯೂಜಿಲೆಂಡ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು ಮ್ಯಾಟ್ ಹೆನ್ರಿ ತಂಡದಿಂದ ಹೊರಬಿದ್ದಿದ್ದು, ನೇಥನ್ ಸ್ಮಿತ್ ತಂಡ ಕೂಡಿಕೊಂಡಿದ್ದಾರೆ.

Scroll to load tweet…

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಸತತ 4 ಪಂದ್ಯಗಳನ್ನು ಜಯಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನೊಂದೆಡೆ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ತಂಡವು ಗ್ರೂಪ್ ಹಂತದಲ್ಲಿ ಭಾರತ ಎದುರು ಮುಗ್ಗರಿಸಿದ್ದರೂ ಸೆಮೀಸ್‌ನಲ್ಲಿ ದಕ್ಷಿಣ ಆಫ್ರಿಕಾ ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಫೈನಲ್‌: ಭಾರತ-ನ್ಯೂಜಿಲೆಂಡ್ ಹೈವೋಲ್ಟೇಜ್ ಫೈಟ್‌ನ ಪ್ರತಿಕ್ಷಣದ ಅಪ್‌ಡೇಟ್ಸ್‌

ಕಪ್‌ ಗೆಲ್ಲುವ ಫೇವರಿಟ್‌ ಎಂದೇ ಕರೆಸಿಕೊಂಡು ಟೂರ್ನಿಗೆ ಕಾಲಿಟ್ಟಿರುವ ಟೀಂ ಇಂಡಿಯಾ, ಸತತ 3ನೇ ಹಾಗೂ ಒಟ್ಟಾರೆ 5ನೇ ಬಾರಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ಗೇರಿದೆ.

ಸತತ 15 ಟಾಸ್ ಸೋತ ಭಾರತ: 

2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಬಳಿಕ ಟೀಂ ಇಂಡಿಯಾ ಸತತ 15ನೇ ಬಾರಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಟಾಸ್ ಗೆಲ್ಲಲು ವಿಫಲವಾಗಿದೆ. ಈ ಪೈಕಿ ರೋಹಿತ್ ಶರ್ಮಾ ಸತತ 12 ಬಾರಿ ಟಾಸ್ ಸೋತರೇ, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಕೆ ಎಲ್ ರಾಹುಲ್ ಮೂರು ಪಂದ್ಯಗಳಲ್ಲಿ ಟಾಸ್ ಸೋತಿದ್ದರು.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ರೋಹಿತ್-ಕೊಹ್ಲಿ ನಿವೃತ್ತಿಯಾಗ್ತಾರಾ? ಶುಭ್‌ಮನ್ ಗಿಲ್ ಹೇಳಿದ್ದೇನು?

ಐಸಿಸಿ ಟೂರ್ನಿಯಲ್ಲಿ 6-6 ಗೆಲುವಿನ ದಾಖಲೆ

ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಈ ವರೆಗೂ 12 ಬಾರಿ ಮುಖಾಮುಖಿಯಾಗಿವೆ. 2 ತಂಡಗಳೂ ತಲಾ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ವಿಶ್ವಕಪ್‌ನಲ್ಲಿ 5-5 ಹಾಗೂ ಚಾಂಪಿಯನ್ಸ್‌ ಟ್ರೋಫಿಯಲ್ಲಿ 1-1 ಗೆಲುವಿನ ದಾಖಲೆ ಹೊಂದಿವೆ.

ಉಭಯ ತಂಡಗಳ ಆಟಗಾರರ ಪಟ್ಟಿ ಹೀಗಿದೆ:

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಅಕ್ಷರ್‌ ಪಟೇಲ್, ಕೆ ಎಲ್ ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್, ಮೊಹಮ್ಮದ್ ಶಮಿ, ವರುಣ್‌ ಚಕ್ರವರ್ತಿ.

ನ್ಯೂಜಿಲೆಂಡ್‌: ವಿಲ್ ಯಂಗ್‌, ರಚಿನ್‌ ರವೀಂದ್ರ, ಕೇನ್ ವಿಲಿಯಮ್ಸನ್‌, ಡ್ಯಾರಿಲ್‌ ಮಿಚೆಲ್, ಟಾಮ್ ಲೇಥಮ್‌, ಗ್ಲೆನ್ ಫಿಲಿಪ್ಸ್‌, ಮಿಚೆಲ್ ಬ್ರೇಸ್‌ವೆಲ್‌, ಮಿಚೆಲ್ ಸ್ಯಾಂಟ್ನರ್‌(ನಾಯಕ), ಕೈಲ್ ಜೇಮಿಸನ್‌, ನೇಥನ್ ಸ್ಮಿತ್‌, ವಿಲಿಯಂ ಒರೌರ್ಕೆ