ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಬ್ರಾಡ್‌ಗೆ ಜಾಕ್‌ಪಾಟ್, 8ನೇ ಸ್ಥಾನಕ್ಕೆ ಕುಸಿದ ಬುಮ್ರಾ
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ನೂತನವಾಗಿ ಬಿಡುಗಡೆಯಾದ ಟೆಸ್ಟ್ ಶ್ರೇಯಾಂಕದಲ್ಲಿ 7 ಸ್ಥಾನ ಮೇಲೇರಿ 3ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದುಬೈ(ಜು.30): ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿ ಮುಕ್ತಾಯವಾಗುತ್ತಿದ್ದಂತೆ ಬುಧವಾರ ನೂತನವಾಗಿ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಬೌಲರ್‌ಗಳ ಪಟ್ಟಿ ಪ್ರಕಟಿಸಿದ್ದು, ಇಂಗ್ಲೆಂಡ್ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ 8ನೇ ಸ್ಥಾನಕ್ಕೆ ಕುಸಿದಿದ್ದಾರೆ..
ಹೌದು, 10ನೇ ಸ್ಥಾನದಲ್ಲಿದ್ದ ಬ್ರಾಡ್, 7 ಸ್ಥಾನ ಜಿಗಿತ ಕಂಡು 3ನೇ ಸ್ಥಾನಕ್ಕೇರಿದ್ದಾರೆ. ಟೆಸ್ಟ್‌ನಲ್ಲಿ 500 ವಿಕೆಟ್ ಪಡೆದ ವಿಶ್ವದ 7ನೇ ಬೌಲರ್ ಎಂಬ ಹೆಗ್ಗಳಿಕೆಗೆ ಬ್ರಾಡ್ ಪಾತ್ರರಾಗಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಬ್ರಾಡ್ ಆ ಬಳಿಕ ಆಡಿದ ಕೇವಲ ಎರಡು ಪಂದ್ಯಗಳಲ್ಲಿ 16 ವಿಕೆಟ್ ಕಬಳಿಸುವ ಮೂಲಕ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನ್ನುವ ಗೌರವಕ್ಕೂ ಬ್ರಾಡ್ ಭಾಜನರಾಗಿದ್ದರು.
ಇನ್ನುಳಿದಂತೆ ಭಾರತದ ಯುವ ವೇಗಿ ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಕೆಳಗಿಳಿದು 8ನೇ ಸ್ಥಾನಕ್ಕೆ ಕುಸಿದಿದ್ದಾರೆ. ಉಳಿದಂತೆ ಆಸ್ಪ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್, ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್ ಕ್ರಮವಾಗಿ ಮೊದಲ 2 ಸ್ಥಾನದಲ್ಲಿದ್ದಾರೆ.
ವಿಂಡೀಸ್‌ಗೆ ದಯಾನೀಯ ಸೋಲು; ಇಂಗ್ಲೆಂಡ್‌ಗೆ ಸರಣಿ ಜಯ
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2ನೇ ಸ್ಥಾನ, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 7ನೇ ಸ್ಥಾನ, ಉಪನಾಯಕ ಅಜಿಂಕ್ಯ ರಹಾನೆ 9ನೇ ಸ್ಥಾನದಲ್ಲಿದ್ದರೆ, ಆಸೀಸ್‌ನ ಸ್ಟೀವ್ ಸ್ಮಿತ್ ಅಗ್ರಸ್ಥಾನದಲ್ಲೇ ಭದ್ರವಾಗಿದ್ದಾರೆ.