ವಿಂಡೀಸ್‌ಗೆ ದಯಾನೀಯ ಸೋಲು; ಇಂಗ್ಲೆಂಡ್‌ಗೆ ಸರಣಿ ಜಯ
ವಿಂಡೀಸ್ ಬ್ಯಾಟ್ಸ್‌ಮನ್‌ಗಳ ದಯಾನೀಯ ಬ್ಯಾಟಿಂಗ್ ವೈಫಲ್ಯ ಹಾಗೂ ಇಂಗ್ಲೆಂಡ್ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡವು ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಮ್ಯಾಂಚೆಸ್ಟರ್(ಜು.29): ಮಳೆಯ ಕಾಟದ ನಡುವೆಯೂ ಇಂಗ್ಲೆಂಡ್ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 129 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ 269 ರನ್‌ಗಳ ಹೀನಾಯ ಸೋಲು ಕಾಣುವುದರ ಮೂಲಕ ವಿಂಡೀಸ್ ಸರಣಿ ಗೆಲ್ಲುವ ಅವಕಾಶ ಕೈಚೆಲ್ಲಿತ್ತು.
ಹೌದು, ಮೂರನೇ ದಿನದಾಟದಂತ್ಯದ ವೇಳೆಗೆ ಇಂಗ್ಲೆಂಡ್ ತಂಡವು ವಿಂಡೀಸ್‌ಗೆ ಗೆಲ್ಲಲು 399 ರನ್‌ಗಳ ಗುರಿ ನೀಡಿತ್ತು. ಮೂರನೇ ದಿನದಾಟದಂತ್ಯದ ವೇಳೆಗೆ ವಿಂಡೀಸ್ 6 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇನ್ನು ನಾಲ್ಕನೇ ದಿನದಾಟಕ್ಕೆ ಮಳೆ ಅಡ್ಡಿ ಪಡಿಸಿತು. ಹೀಗಾಗಿ ನಾಲ್ಕನೇ ದಿನದಾಟ ಒಂದು ಎಸೆತ ಕಾಣದೇ ಮುಕ್ತಾಯವಾಯಿತು. ಆದರೆ ಐದನೇ ದಿನವೂ ಮಳೆ ಅಡ್ಡಿಪಡಿಸಿತಾದರೂ ಕೇವಲ 32 ಓವರ್‌ಗಳಲ್ಲಿ ವಿಂಡೀಸ್ ಆಲೌಟ್ ಮಾಡುವಲ್ಲಿ ಇಂಗ್ಲೆಂಡ್ ವೇಗಿಗಳು ಯಶಸ್ವಿಯಾದರು. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2-1ರಲ್ಲಿ ಸರಣಿ ಕೈವಶ ಮಾಡಿಕೊಂಡಿತು.
ದಾಖಲೆಯ ಸನಿಹದಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್
ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 5 ವಿಕೆಟ್ ಕಬಳಿಸಿದರೆ, ಸ್ಟುವರ್ಟ್ ಬ್ರಾಡ್ 4 ವಿಕೆಟ್ ಪಡೆದರು. ವಿಂಡೀಸ್ ಪರ ಶಾಯ್ ಹೋಪ್ ಬಾರಿಸಿದ 31 ರನ್ ಎರಡನೇ ಇನಿಂಗ್ಸ್‌ನ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿತು.
ಟೆಸ್ಟ್‌ನಲ್ಲಿ 500 ವಿಕೆಟ್: 7ನೇ ಬೌಲರ್ ಬ್ರಾಡ್
ಮ್ಯಾಂಚೆಸ್ಟರ್: ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಮೈಲುಗಲ್ಲು ದಾಟಿದ್ದಾರೆ.ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಕ್ರಿಗ್ ಬ್ರಾಥ್‌ವೇಟ್ ವಿಕೆಟ್ ಪಡೆಯುವ ಮೂಲಕ ಬ್ರಾಡ್ ಈ ಸಾಧನೆ ಮಾಡಿದರು. ಈ ಶ್ರೇಯ ಪಡೆದ ಇಂಗ್ಲೆಂಡ್‌ನ 2ನೇ ಹಾಗೂ ವಿಶ್ವದ 7ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬ್ರಾಡ್ 140 ಟೆಸ್ಟ್ ಪಂದ್ಯಗಳಿಂದ 501 ವಿಕೆಟ್ ಪಡೆದಿದ್ದಾರೆ.