ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಬಹುಮಾನ ಮೊತ್ತ ಪ್ರಕಟಿಸಿದ ಐಸಿಸಿ
* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯ ಬಹುಮಾನ ಪ್ರಕಟಿಸಿದ ಐಸಿಸಿ
* ಟೆಸ್ಟ್ ಚಾಂಪಿಯನ್‌ಶಿಪ್ ವಿಜೇತ ತಂಡ 11 ಕೋಟಿ ರುಪಾಯಿ+ ಐಸಿಸಿ ಮೇಸ್ ಪಡೆಯಲಿದೆ.
* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಜೂನ್ 18ರಿಂದ ಆರಂಭ
ದುಬೈ(ಜೂ.15): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ವಿಜೇತರಾದ ತಂಡವು ಐಸಿಸಿ ಮೇಸ್ ಜತೆಗೆ 1.6 ಅಮೆರಿಕನ್ ಮಿಲಿಯನ್ ಡಾಲರ್(11, 72,35,200 ರುಪಾಯಿ) ಪಡೆಯಲಿದ್ದಾರೆ ಎಂದು ಐಸಿಸಿ ಹಂಗಾಮಿ ಸಿಇಒ ಜೆಫ್ ಅಲರ್ಡೈಸ್ ತಿಳಿಸಿದ್ದಾರೆ.
ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜೂನ್ 18ರಿಂದ ಸೌಥಾಂಪ್ಟನ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸಲಿವೆ. ಇದೇ ವೇಳೆ ರನ್ನರ್ ಅಪ್ ಆದ ತಂಡವು 8,00,000 ಡಾಲರ್(5,86,17,600 ರುಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದ್ದಾರೆ ಎಂದು ಐಸಿಸಿ ತಿಳಿಸಿದೆ. ಒಂದು ವೇಳೆ ಪಂದ್ಯ ಡ್ರಾ ಆದರೆ ಬಹುಮಾನ ಮೊತ್ತವನ್ನು ಎರಡು ತಂಡಗಳಿಗೆ ಸಮಾನವಾಗಿ ಹಂಚುವುದಾಗಿ ತಿಳಿಸಿದೆ.
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ
ಎರಡು ತಂಡಗಳು ಐಸಿಸಿ ಟೆಸ್ಟ್ ಮೇಸ್ ಪಡೆಯಲು ಕಾದಾಟ ನಡೆಸಲಿವೆ. ಜಗತ್ತಿನ ಬಲಿಷ್ಠ ಟೆಸ್ಟ್ ತಂಡ ಎನಿಸಿಕೊಳ್ಳಲು ಎರಡು ತಂಡಗಳು ಸಾಕಷ್ಟು ಪೈಪೋಟಿ ನಡೆಸುವ ಸಾಧ್ಯತೆಯಿದೆ. ಸೌಥಾಂಪ್ಟನ್‌ನಲ್ಲಿ ನಡೆಯಲಿರುವ ಐಸಿಸಿ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯದಲ್ಲಿ ವಿಜೇತರಾದ ತಂಡವು ಟೆಸ್ಟ್ ಮೇಸ್ ಪಡೆಯಲಿದ್ದಾರೆ ಎಂದು ಐಸಿಸಿ ಹಂಗಾಗಿ ಸಿಇಒ ಜೆಫ್ ಅಲರ್ಡೈಸ್ ಹೇಳಿದ್ದಾರೆ.
2019 ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ವಿಜೇತ ತಂಡವು 4 ಮಿಲಿಯನ್ ಡಾಲರ್(29 ಕೋಟಿ ರುಪಾಯಿ), ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡವು 2 ಮಿಲಿಯನ್ ಡಾಲರ್(14.5 ಕೋಟಿ ರುಪಾಯಿ) ಬಹುಮಾನವನ್ನು ಪಡೆದಿದ್ದವು.
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯ ಬಹುಮಾನಗಳ ಮೊತ್ತ ಹೀಗಿದೆ ನೋಡಿ
ಚಾಂಪಿಯನ್ ತಂಡ: 1.6 ಮಿಲಿಯನ್ ಡಾಲರ್ ಜತೆಗೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಮೇಸ್
ರನ್ನರ್ ಅಪ್ ತಂಡ: 8,00,000 ಡಾಲರ್
ಮೂರನೇ ಸ್ಥಾನ : 4,50,000 ಡಾಲರ್
ನಾಲ್ಕನೇ ಸ್ಥಾನ : 3,50,000 ಡಾಲರ್
ಐದನೇ ಸ್ಥಾನ: 2,00,000 ಡಾಲರ್
ಇನ್ನುಳಿದ ತಂಡಗಳು ತಲಾ 1,00,000 ಡಾಲರ್ ಬಹುಮಾನ ಮೊತ್ತ ಪಡೆಯಲಿವೆ.