* ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಶ್ರೇಷ್ಠ ಆಟಗಾರ್ತಿಯರನ್ನೊಳಗೊಂಡ ತಂಡ ಪ್ರಕಟ* ವಿಶ್ವಕಪ್ ಗೆದ್ದ ನಾಯಕಿ ಮೆಗ್ ಲ್ಯಾನಿಂಗ್ ಸೇರಿ ಆಸೀಸ್‌ನ ನಾಲ್ವರು ಆಟಗಾರ್ತಿಯರಿಗೆ ಸ್ಥಾನ* ವಿಶ್ವಕಪ್ ಶ್ರೇಷ್ಠ ತಂಡದಲ್ಲಿ ಭಾರತದ ಯಾವೊಬ್ಬ ಆಟಗಾರ್ತಿಗೂ ಸ್ಥಾನ ಲಭಿಸಿಲ್ಲ
ದುಬೈ(ಏ.05): 2022ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ (ICC Women's World Cup) ಶ್ರೇಷ್ಠ ತಂಡ ಪ್ರಕಟಗೊಂಡಿದ್ದು, ಭಾರತೀಯರಿಗೆ ಸ್ಥಾನ ಸಿಕ್ಕಿಲ್ಲ. ಸೋಮವಾರ ಪ್ರಕಟಗೊಂಡ ತಂಡದಲ್ಲಿ ಚಾಂಪಿಯನ್ ಆಸ್ಪ್ರೇಲಿಯಾದ ನಾಲ್ವರು ಸ್ಥಾನ ಪಡೆದಿದ್ದು, ಮೆಗ್ ಲ್ಯಾನಿಂಗ್ (Meg Lanning) ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ಮೂವರು, ಇಂಗ್ಲೆಂಡ್‌ನ ಇಬ್ಬರು, ವಿಂಡೀಸ್ ಹಾಗೂ ಬಾಂಗ್ಲಾದ ತಲಾ ಒಬ್ಬ ಆಟಗಾರ್ತಿ ತಂಡದಲ್ಲಿದ್ದಾರೆ. ಮೆಗ್ ಲ್ಯಾನಿಂಗ್ ನೇತೃತ್ವದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಅನಾಯಾಸವಾಗಿ ಬಗ್ಗು ಬಡಿಯುವ ಮೂಲಕ 7ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ 394 ರನ್ ಸಿಡಿಸಿದ್ದರು. ಮೆಗ್ ಲ್ಯಾನಿಂಗ್ ಮಾತ್ರವಲ್ಲದೇ ಆಸೀಸ್ ವಿಕೆಟ್ ಕೀಪರ್ ಬ್ಯಾಟರ್ ಅಲೀಸಾ ಹೀಲಿ, ರೆಚೆಲ್ ಹೇಯ್ನ್ಸ್, ಬೆಥ್ ಮೂನಿ ಕೂಡಾ ವಿಶ್ವಕಪ್‌ನ ಶ್ರೇಷ್ಠ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಟೂರ್ನಿಯಲ್ಲಿ 500ಕ್ಕೂ ಅಧಿಕ ರನ್ ಬಾರಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಅಲಿಸಾ ಹೀಲಿ (Alyssa Healy) ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಆಕರ್ಷಕ 170 ರನ್ ಚಚ್ಚಿದ್ದರು. ಆಸ್ಟ್ರೇಲಿಯಾದ ಮತ್ತೋರ್ವ ಆರಂಭಿಕ ಬ್ಯಾಟರ್ ರೇಚಲ್ ಹೇಯ್ನ್ಸ್ 497 ರನ್ ಸಿಡಿಸಿದ್ದರು. ಇನ್ನು ಭಾರತ ತಂಡದ ಪೂಜಾ ವಸ್ತ್ರಾಕರ್ ವಿಶ್ವಕಪ್ ಶ್ರೇಷ್ಠ ತಂಡದಲ್ಲಿ ಸ್ಥಾನ ಪಡೆಯಬಹುದು ಎನ್ನುವ ಟೀಂ ಇಂಡಿಯಾ ಅಭಿಮಾನಿಗಳ ಆಸೆ ಹುಸಿಯಾಗಿದೆ. ಪೂಜಾ ವಸ್ತ್ರಾಕರ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಕರ್ಷಕ ಪ್ರದರ್ಶನ ತೋರಿದ್ದರು. ಹೀಗಿದ್ದೂ ಭಾರತ ತಂಡವು ರೌಂಡ್ ರಾಬಿನ್ ಹಂತದಲ್ಲೇ ಹೊರಬೀಳುವ ಮೂಲಕ ನಿರಾಸೆ ಅನುಭವಿಸಿತ್ತು.
ತಂಡ: ಲ್ಯಾನಿಂಗ್(ನಾಯಕಿ), ಅಲಿಸ್ಸಾ, ಹೇಯ್ನ್ಸ್, ಮೂನಿ(ಆಸ್ಪ್ರೇಲಿಯಾ), ಲಾರಾ ವೊಲ್ವಾಟ್, ಮಾರಿಯಾನೆ ಕಾಪ್, ಶಬ್ನಿಮ್(ದ.ಆಫ್ರಿಕಾ), ಎಕ್ಲೆಸ್ಟೋನ್, ನಥಾಲಿ ಶೀವರ್(ಇಂಗ್ಲೆಂಡ್), ಹೇಲಿ ಮ್ಯಾಥ್ಯೂಸ್(ವಿಂಡೀಸ್), ಸಲ್ಮಾ ಕಥೂನ್ (ಬಾಂಗ್ಲಾ), ಚಾರ್ಲಿ ಡೀನ್(ಇಂಗ್ಲೆಂಡ್-12ನೇ ಆಟಗಾರ್ತಿ).
ಮೊದಲ ಟೆಸ್ಟ್: ಬಾಂಗ್ಲಾ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ
ಡರ್ಬನ್: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ 220 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಗೆಲುವಿಗೆ 274 ರನ್ ಗುರಿ ಪಡೆದ ಬಾಂಗ್ಲಾ ಕೇವಲ 53 ರನ್‌ಗೆ ಆಲೌಟ್ ಆಯಿತು. 4ನೇ ದಿನದಂತ್ಯಕ್ಕೆ 11 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾ ಸೋಮವಾರ ಆ ಮೊತ್ತಕ್ಕೆ 42 ಸೇರಿಸಲಷ್ಟೇ ಶಕ್ತವಾಯಿತು. ಬಾಂಗ್ಲಾದ 2ನೇ ಇನ್ನಿಂಗ್ಸ್ ಕೇವಲ 19 ಓವರ್‌ನಲ್ಲಿ ಮುಕ್ತಾಯಗೊಂಡಿತು.
ICC Women's World Cup: ಆಸ್ಪ್ರೇಲಿಯಾದ ವಿಶ್ವಕಪ್ ಯಶಸ್ಸಿನ ಗುಟ್ಟೇನು?
ನಜ್ಮುಲ್ ಹೊಸೈನ್(26), ಟಸ್ಕಿನ್ ಅಹ್ಮದ್(14) ಮಾತ್ರ ಎರಡಂಕಿ ಮೊತ್ತ ಗಳಿಸಿದರು. 2ನೇ ಇನ್ನಿಂಗ್ಸ್‌ನಲ್ಲಿ ದ.ಆಫ್ರಿಕಾದ ಇಬ್ಬರೇ ಬೌಲ್ ಮಾಡಿದರು. ಕೇಶವ್ ಮಹಾರಾಜ್ 7, ಸೈಮನ್ ಹಾರ್ಮರ್ 3 ವಿಕೆಟ್ ಕಬಳಿಸಿದರು. ಮೊದಲ ಇನ್ನಿಂಗ್ಸಲ್ಲಿ 367 ರನ್ ಕಲೆಹಾಕಿದ್ದ ದ.ಆಫ್ರಿಕಾ, ಬಾಂಗ್ಲಾವನ್ನು 298 ರನ್‌ಗೆ ಕಟ್ಟಿಹಾಕಿ 69 ರನ್ ಮುನ್ನಡೆ ಗಳಿಸಿತ್ತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ 204 ರನ್‌ಗೆ ಆಲೌಟ್ ಆಗಿತ್ತು.
ನ್ಯೂಜಿಲೆಂಡ್ ಪರ ಕೊನೆ ಪಂದ್ಯವಾಡಿದ ಟೇಲರ್
ಹ್ಯಾಮಿಲ್ಟನ್: ನ್ಯೂಜಿಲೆಂಡ್‌ನ ದಿಗ್ಗಜ ಬ್ಯಾಟರ್ ರಾಸ್ ಟೇಲರ್ ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನ ವಿದಾಯದ ಪಂದ್ಯವನ್ನಾಡಿದರು. ಕಳೆದ ಡಿಸೆಂಬರ್‌ನಲ್ಲೇ ನಿವೃತ್ತಿ ಘೋಷಿಸಿದ್ದ ಟೇಲರ್, ನೆದರ್‌ಲೆಂಡ್ಸ್ ವಿರುದ್ಧದ 3ನೇ ಏಕದಿನ ಪಂದ್ಯದ ಮೂಲಕ ಕ್ರಿಕೆಟ್ ಬದುಕಿಗೆ ತೆರೆ ಎಳೆದಿದ್ದಾರೆ. ನೆದರ್‌ಲೆಂಡ್ಸ್ ಆಟಗಾರರ ‘ಗಾರ್ಡ್ ಆಫ್ ಆನರ್’ ಗೌರವ ಪಡೆದು ಕೊನೆ ಬಾರಿ ಬ್ಯಾಟಿಂಗ್‌ಗಿಳಿದ ಟೇಲರ್, 14 ರನ್‌ಗೆ ಔಟಾದರು.
38 ವರ್ಷದ ಟೇಲರ್ ಜನವರಿಯಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. 2006ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂ.ರಾ. ಕ್ರಿಕೆಟ್ ಪಾದಾರ್ಪಣೆ ಮಾಡಿದ್ದ ಅವರು ಇದುವರೆಗೆ 450 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಟೇಲರ್ 112 ಟೆಸ್ಟ್‌ಗಳಲ್ಲಿ 19 ಶತಕದೊಂದಿಗೆ 7,683 ರನ್ ಕಲೆ ಹಾಕಿದ್ದು, 236 ಏಕದಿನ ಪಂದ್ಯಗಳಲಲ್ಲಿ 8,607 ರನ್ ಬಾರಿಸಿದ್ದಾರೆ. 2015, 2019ರ ಐಸಿಸಿ ಏಕದಿನ ವಿಶ್ವಕಪ್‌ನ ರನ್ನರ್-ಅಪ್ ನ್ಯೂಜಿಲೆಂಡ್ ತಂಡದಲ್ಲಿದ್ದ ಅವರು, 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದ ತಂಡದಲ್ಲೂ ಆಡಿದ್ದರು.
