* ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭ* ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳು ಆರಂಭ* ಇದೀಗ ಟಿ20 ವಿಶ್ವಕಪ್‌ಗೂ ಮುನ್ನ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ
ದುಬೈ(ಅ.07): ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿ (ICC T20 World Cup) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಕ್ಟೋಬರ್ 17ರಿಂದ ಜಗತ್ತಿನ ಅತಿದೊಡ್ಡ ಚುಟುಕು ಕ್ರಿಕೆಟ್ ಸಂಗ್ರಾಮಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಅಕ್ಟೋಬರ್ 17ರಿಂದ 22ರವರೆಗೆ ಅರ್ಹತಾ ಸುತ್ತಿನ ಪಂದ್ಯಗಳು ಜರುಗಲಿದ್ದು, ಅಕ್ಟೋಬರ್ 23ರಿಂದ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗಲಿವೆ.
ಐಪಿಎಲ್ (IPL 2021) ಮುಗಿದ ಬೆನ್ನಲ್ಲೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದ್ದು, ಬುಧವಾರ ಐಸಿಸಿ ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಟಿ20 ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಪಡೆದ 8 ತಂಡಗಳು ಅಭ್ಯಾಸ ತಲಾ ಎರಡೆರಡು ಅಭ್ಯಾಸ ಪಂದ್ಯಗಳನ್ನಾಡಲಿದೆ. ಭಾರತ ತಂಡ 2 ಅಭ್ಯಾಸ ಪಂದ್ಯಗಳನ್ನು ಆಡಲಿದ್ದು, ಅಕ್ಟೋಬರ್ 18ರಂದು ಇಂಗ್ಲೆಂಡ್ ಹಾಗೂ ಅಕ್ಟೋಬರ್ 20ರಂದು ಆಸ್ಪ್ರೇಲಿಯಾ ತಂಡವನ್ನು ಎದುರಿಸಲಿದೆ. ಅಭ್ಯಾಸ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ. ಅಭ್ಯಾಸ ಪಂದ್ಯದಲ್ಲೇ ಟೀಂ ಇಂಡಿಯಾ ಎರಡು ಬಲಿಷ್ಠ ತಂಡಗಳನ್ನು ಎದುರಿಸಲಿದ್ದು, ಸೂಪರ್ 12 ಪಂದ್ಯಗಳಿಗೂ ಮುನ್ನ ಅಗ್ನಿ ಪರೀಕ್ಷೆ ಎದುರಿಸಲಿದೆ.
ICC T20 World Cup ಟೂರ್ನಿಗೂ ಮುನ್ನ ಇಂಗ್ಲೆಂಡ್‌ಗೆ ಶಾಕ್; ಸ್ಟಾರ್ ಆಲ್ರೌಂಡರ್ ಔಟ್..!
2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಟೀಂ ಇಂಡಿಯಾ (Team India) ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಲು ವಿರಾಟ್ ಕೊಹ್ಲಿ ಪಡೆ ತುದಿಗಾಲಿನಲ್ಲಿ ನಿಂತಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಸುತ್ತು ಅಕ್ಟೋಬರ್ 23ರಂದು ಆರಂಭಗೊಳ್ಳಲಿದ್ದು, ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 24ರಂದು ಪಾಕಿಸ್ತಾನ ವಿರುದ್ಧ ಆಡಲಿದೆ.
ಅಭ್ಯಾಸ ಪಂದ್ಯಗಳ ಕಂಪ್ಲೀಟ್ ಡೀಟೈಲ್ಸ್
ಅಕ್ಟೋಬರ್ 18
AFG vs SA (3.30 pm)
PAK vs WI (3.30 pm)
AUS vs NZ (7.30 pm)
IND vs ENG (7.30 pm)
ಅಕ್ಟೋಬರ್ 20
ENG vs NZ (3.30 pm)
IND vs AUS (3.30 pm)
SA vs PAK (7.30 pm)
AFG vs WI (7.30 pm)
ಆ್ಯಷಸ್: ಆಸ್ಪ್ರೇಲಿಯಾಗೆ ತೆರಳಲು ಇಂಗ್ಲೆಂಡ್ ಒಪ್ಪಿಗೆ
ಲಂಡನ್: ಡಿಸೆಂಬರ್-ಜನವರಿಯಲ್ಲಿ ನಡೆಯಲಿರುವ ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿ ಆಡಲು ಆಸ್ಪ್ರೇಲಿಯಾಗೆ ತೆರಳಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ) ಒಪ್ಪಿಗೆ ಸೂಚಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಠಿಣ ಬಯೋ ಬಬಲ್ ಹಾಗೂ ಕೋವಿಡ್ ಮಾರ್ಗಸೂಚಿ ಪಾಲನೆಯಲ್ಲಿ ವಿನಾಯಿತಿ ನೀಡದಿದ್ದರೆ ಪ್ರವಾಸ ರದ್ದುಗೊಳಿಸುವುದಾಗಿ ಇಸಿಬಿ ಎಚ್ಚರಿಸಿತ್ತು. ಈ ಸಂಬಂಧ ಇಸಿಬಿ ಹಾಗೂ ಕ್ರಿಕೆಟ್ ಆಸ್ಪ್ರೇಲಿಯಾ ನಡುವೆ ಮಾತುಕತೆ ನಡೆದಿದ್ದು, ಇಸಿಬಿಯ ಕೆಲ ಷರತ್ತುಗಳಿಗೆ ಆಸ್ಪ್ರೇಲಿಯಾ ಸಮ್ಮತಿಸಿದೆ ಎನ್ನಲಾಗಿದೆ. ಜೋಸ್ ಬಟ್ಲರ್ ಹೊರತುಪಡಿಸಿ ಉಳಿದ ಇಂಗ್ಲೆಂಡ್ ಆಟಗಾರರು ಆಸ್ಪ್ರೇಲಿಯಾಗೆ ತೆರಳಲು ಒಪ್ಪಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
