Asianet Suvarna News Asianet Suvarna News

ICC Test Team Of The Year: ಐಸಿಸಿ ವರ್ಷದ ಟೆಸ್ಟ್ ತಂಡ ಪ್ರಕಟ, 3 ಭಾರತೀಯರಿಗೆ ಸ್ಥಾನ..!

* ಐಸಿಸಿ ವರ್ಷದ ಟೆಸ್ಟ್ ತಂಡ ಪ್ರಕಟ, ಕೇನ್‌ ವಿಲಿಯಮ್ಸನ್‌ಗೆ ನಾಯಕ ಪಟ್ಟ

* ವರ್ಷದ ಟೆಸ್ಟ್ ತಂಡದಲ್ಲಿ ಭಾರತದ ಮೂವರು ಕ್ರಿಕೆಟಿಗರಿಗೆ ಸ್ಥಾನ

* ಐಸಿಸಿ ವರ್ಷದ ಏಕದಿನ ಹಾಗೂ ಟಿ20 ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಭಾರತೀಯರು

ICC announce Test Team of the year 2021 three Indian Cricket players included in the Squad kvn
Author
Bengaluru, First Published Jan 20, 2022, 6:23 PM IST

ದುಬೈ(ಜ.20): ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯು (International Cricket Council) 2021ನೇ ಸಾಲಿನ ವರ್ಷದ ಟೆಸ್ಟ್ ತಂಡವನ್ನು (ICC Test Team Of The Year) ಪ್ರಕಟಿಸಿದ್ದು, ಭಾರತದ ಮೂವರು ಕ್ರಿಕೆಟಿಗರು ವರ್ಷದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. 2021ರಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅಸಾಧಾರಣ ಪ್ರದರ್ಶನ ತೋರಿದ 11 ಆಟಗಾರರನ್ನು ಐಸಿಸಿ ಪಟ್ಟಿ ಮಾಡಿದೆ. ಐಸಿಸಿ ವರ್ಷದ ಏಕದಿನ ಹಾಗೂ ಟಿ20 ತಂಡದಲ್ಲಿ ಸ್ಥಾನ ಪಡೆಯಲು ಟೀಂ ಇಂಡಿಯಾ (Team India) ಕ್ರಿಕೆಟಿಗರು ವಿಫಲರಾಗಿದ್ದರು. ಆದರೆ ಇದೀಗ ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಮೂವರು ಭಾರತೀಯ ಕ್ರಿಕೆಟಿಗರು ಯಶಸ್ವಿಯಾಗಿದ್ದಾರೆ.

ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಭಾರತದ ವತಿಯಿಂದ ಓರ್ವ ಬ್ಯಾಟರ್, ಓರ್ವ ವಿಕೆಟ್ ಕೀಪರ್ ಹಾಗೂ ಒಬ್ಬ ಬೌಲರ್ ಆಯ್ಕೆಯಾಗಿರುವುದು ವಿಶೇಷ. ಹೌದು, 2021ರ ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ(Rohit Sharma), ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಹಾಗೂ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ (Ravichandran Ashwin) ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಐಸಿಸಿ ವರ್ಷದ ಟೆಸ್ಟ್ ತಂಡದ ನಾಯಕರಾಗಿ ನ್ಯೂಜಿಲೆಂಡ್ ತಂಡದ ಕೇನ್‌ ವಿಲಿಯಮ್ಸನ್‌ (Kane Williamson) ಆಯ್ಕೆಯಾಗಿದ್ದಾರೆ. 2021ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಕೇನ್ ವಿಲಿಯಮ್ಸನ್‌ ಅಸಾಧಾರಣ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದಾರೆ. ಕೇನ್ ವಿಲಿಯಮ್ಸನ್‌ ಕಳೆದ ವರ್ಷ ಬ್ಯಾಟಿಂಗ್ ಮಾತ್ರವಲ್ಲದೇ ನಾಯಕತ್ವದಲ್ಲೂ ಸೈ ಎನಿಸಿಕೊಂಡಿದ್ದಾರೆ. ಕಳೆದ ಜೂನ್ ತಿಂಗಳಿನಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ (ICC World Test Championship) ಫೈನಲ್‌ನಲ್ಲಿ ಭಾರತ ತಂಡವನ್ನು ಮಣಿಸಿ ನ್ಯೂಜಿಲೆಂಡ್ ಚಾಂಪಿಯನ್ ಆಗುವಲ್ಲಿ ಕೇನ್‌ ವಿಲಿಯಮ್ಸನ್‌ ಪ್ರಮುಖ ಪಾತ್ರವಹಿಸಿದ್ದರು. 2021ರಲ್ಲಿ ಕೇನ್ ವಿಲಿಯಮ್ಸನ್‌ 4 ಟೆಸ್ಟ್ ಪಂದ್ಯಗಳನ್ನಾಡಿ 65.83ರ ಬ್ಯಾಟಿಂಗ್ ಸರಾಸರಿಯಲ್ಲಿ 395 ರನ್‌ ಬಾರಿಸಿದ್ದರು.

ಇನ್ನು ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಕಳೆದ ವರ್ಷ ಕೆಲವು ಶತಕಗಳ ಸಹಿತ 47.68ರ ಬ್ಯಾಟಿಂಗ್ ಸರಾಸರಿಯಲ್ಲಿ ಒಟ್ಟು 906 ರನ್‌ ಬಾರಿಸಿ ಮಿಂಚಿದ್ದರು. ಭಾರತ ಮಾತ್ರವಲ್ಲದೇ ಹಿಟ್‌ಮ್ಯಾನ್‌ ಇಂಗ್ಲೆಂಡ್‌ನ ಓವಲ್ ಮೈದಾನದಲ್ಲೂ ಶತಕ ಚಚ್ಚಿ ಮಿಂಚಿದ್ದರು. 

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕಳೆದ ವರ್ಷ ಕೇವಲ ಒಂದು ಶತಕ ಮಾತ್ರ ಬಾರಿಸಿದ್ದಾರೆ. ಆದರೆ ಆಸ್ಟ್ರೇಲಿಯಾ ವಿರುದ್ದ ಸಿಡ್ನಿ ಟೆಸ್ಟ್‌ನಲ್ಲಿ 97 ಹಾಗೂ ಗಾಬಾ ಟೆಸ್ಟ್‌ನಲ್ಲಿ 89 ರನ್ ಬಾರಿಸಿ ಕಾಂಗರೂ ನಾಡಿನಲ್ಲಿ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವಲ್ಲಿ ಪಂತ್ ಮಹತ್ತರ ಪಾತ್ರವಹಿಸಿದ್ದರು. ಪಂತ್ 12 ಪಂದ್ಯಗಳಿಂದ 748 ರನ್ ಬಾರಿಸಿದ್ದಲ್ಲದೇ ವಿಕೆಟ್ ಹಿಂದೆ ನಿಂತು 39 ಬಲಿ ಪಡೆದಿದ್ದಾರೆ.

ICC T20 & ODI Team Of The Year : ಐಸಿಸಿ ವರ್ಷದ ತಂಡ ಪ್ರಕಟ, ಭಾರತೀಯರಿಗಿಲ್ಲ ಸ್ಥಾನ..!

ಇನ್ನು ಐಸಿಸ ವರ್ಷದ ಟೆಸ್ಟ್ ಆಟಗಾರರ ತಂಡದಲ್ಲಿ ಸ್ಥಾನ ಪಡೆದ ಮೂರನೇ ಭಾರತೀಯ ಆಟಗಾರ ರವಿಚಂದ್ರನ್ ಅಶ್ವಿನ್ ಕಳೆದೊಂದು ವರ್ಷದಲ್ಲಿ ಕೇವಲ ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್‌ನಲ್ಲೂ ಮಿಂಚಿನ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಶ್ವಿನ್ ಬೌಲಿಂಗ್‌ನಲ್ಲಿ 54 ವಿಕೆಟ್ ಹಾಗೂ ಬ್ಯಾಟಿಂಗ್‌ನಲ್ಲಿ ಒಂದು ಶತಕ ಸಹಿತ 355 ರನ್‌ ಬಾರಿಸಿದ್ದರು.

ಇನ್ನುಳಿದಂತೆ ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಇತರೆ ಆಟಗಾರರೆಂದರೆ ಶ್ರೀಲಂಕಾದ ದೀಮುತ್ ಕರುಣರತ್ನೆ, ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್, ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟರ್ ಫವಾದ್ ಆಲಂ, ನ್ಯೂಜಿಲೆಂಡ್‌ನ ನೀಳಕಾಯದ ವೇಗಿ ಕೈಲ್ ಜೇಮಿಸನ್, ಪಾಕಿಸ್ತಾನದ ವೇಗಿಗಳಾದ ಹಸನ್ ಅಲಿ ಹಾಗೂ ಶಾಹೀನ್ ಅಫ್ರಿದಿ.

2021ರ ಐಸಿಸಿ ವರ್ಷದ ಟೆಸ್ಟ್ ತಂಡ ಹೀಗಿದೆ ನೋಡಿ
ದೀಮುತ್ ಕರುಣರತ್ನೆ, ರೋಹಿತ್ ಶರ್ಮಾ, ಮಾರ್ನಸ್ ಲಬುಶೇನ್, ಜೋ ರೂಟ್, ಕೇನ್ ವಿಲಿಯಮ್ಸನ್‌(ನಾಯಕ), ಫವಾದ್ ಆಲಂ, ರಿಷಭ್ ಪಂತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕೈಲ್ ಜೇಮಿಸನ್, ಹಸನ್ ಅಲಿ, ಶಾಹೀನ್ ಅಫ್ರಿದಿ.
 

Follow Us:
Download App:
  • android
  • ios